ಶ್ರವಣ್ ನೀರಬಿದಿರೆ ಬೆಂಗಳೂರು:
ರಾಜ್ಯದಲ್ಲಿ ಮಕ್ಕಳಿಂದ ನಿರ್ಲಕ್ಷ್ಯ, ಆಸ್ತಿ ವಂಚನೆ, ದೌರ್ಜನ್ಯ ಮತ್ತು ಅನಾಥ ಪ್ರಜ್ಞೆಗೆ ಒಳಗಾಗುತ್ತಿರುವ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಲವು ಪ್ರಕರಣಗಳ ವಿಚಾರಣೆ ವೇಳೆ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ, ಹೀಗೆ ದೌರ್ಜನ್ಯಕ್ಕೊಳಗಾಗಿ ಅಸಹಾಯಕರಾದ ಹಿರಿಯ ನಾಗರಿಕರಿಗೆ ತಮ್ಮ ಮೂಲಭೂತ ಹಕ್ಕುಗಳು ಮತ್ತು ಆಸ್ತಿ ಮಾಲೀಕತ್ವವನ್ನು ಮರುಸ್ಥಾಪಿಸಿ ಹಲವು ಮಹತ್ವದ ತೀರ್ಪುಗಳನ್ನು ನೀಡಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಸಮಗ್ರ ಕಲ್ಯಾಣ ಯೋಜನೆಯೊಂದನ್ನು ರೂಪಿಸುವ ಬಗ್ಗೆ ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಬುಧವಾರ (ಜು. 22) ರಂದು ಸೂಚಿಸಿತ್ತು.
ರಕ್ಷಣೆ ಅಗತ್ಯವಿರುವ ಹಿರಿಯ ನಾಗರಿಕರು ಯಾರು? ಎಂಬ ಬಗ್ಗೆ ನ್ಯಾಯಾಲಯವು ತನ್ನ ಆದೇಶದಲ್ಲಿ ಸುದೀರ್ಘ ವ್ಯಾಖ್ಯಾನ ಮಾಡಿದೆ. ತೀವ್ರ ಸ್ವರೂಪದ ಗ್ಯಾಂಗ್ರೀನ್ ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧೆಯೊಬ್ಬರ ದಯನೀಯ ಸ್ಥಿತಿಗೆ ಕಳವಳ ವ್ಯಕ್ತಪಡಿಸಿ, ಅವರಿಗೆ ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಒದಗಿಸುವಂತೆ ಆದೇಶಿಸುವಾಗ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ವ್ಯಾಖ್ಯಾನವನ್ನು ಮಾಡಿದ್ದು, ಯೋಜನೆ ರೂಪಿಸುವಾಗ ಅದನ್ನು ಪರಿಗಣಿಸುವಂತೆ ಸೂಚಿಸಿದೆ.
ವರದಿ ಸಲ್ಲಿಸಲು ಸೂಚನೆ:
ವಿಷಯದ ಗಂಭೀರತೆಯನ್ನು ಪರಿಗಣಿಸಿ, ಕರಡು ನೀತಿ ರೂಪಿಸುವ ಕುರಿತು ಪರಿಶೀಲಿಸಲು ಈ ಆದೇಶದ ಪ್ರತಿಯನ್ನು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಿಗೆ ರವಾನಿಸಲು ರಿಜಿಸ್ಟ್ರೀಗೆ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯು ಆ. 10ರಂದು ನಿಗದಿಯಾಗಿದ್ದು, ಈಗಿರುವ ನಿಯಮಗಳು, ಕೊರತೆಗಳು ಮತ್ತು ಹೊಸದಾಗಿ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದೆ.
ಯಾರಿಗೆ ರಕ್ಷಣೆ ಅಗತ್ಯ?:
2007ರ ಹಿರಿಯ ನಾಗರಿಕರ ರಕ್ಷಣೆ ಮತ್ತು ಕಲ್ಯಾಣ ಕಾಯ್ದೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಸೂಕ್ತ ಆಶ್ರಯ ಮತ್ತು ಜೀವನಾಧಾರದ ಮಾರ್ಗಗಳಿಲ್ಲದೆ ಅಸಹಾಯಕರಾಗಿರುವವರು, ಮಕ್ಕಳು ಮತ್ತು ಸಂಬಂಧಿಕರಿಂದ ಪರಿತ್ಯಕ್ತರಾದವರು, ಮಕ್ಕಳಿಲ್ಲದ ಅಥವಾ ಯಾವುದೇ ಸಂಬಂಧಿಕರಿಲ್ಲದ ಹಿರಿಯರು, ದೈಹಿಕ, ಮಾನಸಿಕ, ಭಾವನಾತ್ಮಕ ಅಥವಾ ಹಣಕಾಸಿನ ದೌರ್ಜನ್ಯಕ್ಕೆ ಒಳಗಾದವರು ಮತ್ತು ಮನೆಯಲ್ಲಿ ನಿರಂತರ ದೌರ್ಜನ್ಯ ನಡೆಯಬಹುದು ಎಂಬ ಸ್ಪಷ್ಟ ಆತಂಕದ ವಾತಾವರಣದಲ್ಲಿ ವಾಸಿಸುತ್ತಿರುವವರು, ಅಂಗವಿಕಲತೆ, ಮರೆವಿನ ಕಾಯಿಲೆ , ಗಂಭೀರ ಅಥವಾ ಅಂತಿಮ ಹಂತದ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಸರ್ಕಾರ ಗುರುತಿಸಬೇಕು ಎಂದು ಸೂಚಿಸಲಾಗಿದೆ.
ℹ️ ಅಲೆಮಾರಿ ವೃದ್ಧರನ್ನೂ ಗುರುತಿಸಿ
ನೆನಪಿನ ಶಕ್ತಿ ನಷ್ಟದಿಂದ ಅಥವಾ ದೈಹಿಕ ಸಮಸ್ಯೆಗಳ ಕಾರಣ ಮನೆಗೆ ಮರಳಲಾಗದೆ ದಾರಿ ತಪ್ಪಿ ಅಲೆಮಾರಿಗಳಾಗಿರುವ ವೃದ್ಧರು, ಮಾನವ ಕಳ್ಳಸಾಗಾಣಿಕೆ, ಭಿಕ್ಷಾಟನೆ ಜಾಲ ಅಥವಾ ಬಲವಂತದ ದುಡಿಮೆಗೆ ತಳ್ಳಲ್ಪಟ್ಟು ಅಪಾಯದಲ್ಲಿರುವವರು, ನೈಸರ್ಗಿಕ ವಿಕೋಪ, ಸಾಂಕ್ರಾಮಿಕ ರೋಗ, ಅಪಘಾತ ಮತ್ತಿತರ ಕಾರಣಗಳಿಂದ ಏಕಾಂಗಿಯಾಗಿ ಸಂಕಷ್ಠಕ್ಕೆ ಈಡಾದವರು, ತಮ್ಮ ಆಸ್ತಿಯಿಂದ ಅಕ್ರಮವಾಗಿ ಹೊರಹಾಕಲ್ಪಟ್ಟರವರು, ಪಿಂಚಣಿ ಮತ್ತು ಉಳಿತಾಯದ ಹಣ ಇತರರಿಂದ ಕಬಳಿಸಲ್ಪಟ್ಟು ಅಸಹಾಯಕರಾದವರನ್ನು ಕೂಡ ಯೋಜನೆಯ ವ್ಯಾಪ್ತಿಗೆ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಸರ್ಕಾರ ರೂಪಿಸಬೇಕಾದ ವ್ಯವಸ್ಥೆಗಳು:
1. 24*7 ಹೆಲ್ಪ್ಲೈನ್ ಮತ್ತು ತುರ್ತು ಸ್ಪಂದನಾ ವ್ಯವಸ್ಥೆ, ತಾತ್ಕಾಲಿಕ ಆಶ್ರಯ ತಾಣಗಳು, ಪುನರ್ವವಸತಿ ಕೇಂದ್ರಗಳು ಮತ್ತು ಅಗತ್ಯವಿರುವವರಿಗೆ ದೀರ್ಘಾವಧಿ ವಸತಿ ಕೇಂದ್ರಗಳ ಸ್ಥಾಪನೆ.
2. ವೈದ್ಯಕಿಯ ಆರೈಕೆ, ಫಿಸಿಯೋಥೆರಪಿ ಮತ್ತು ಗೃಹ ಆಧಾರಿತ ಚಿಕಿತ್ಸೆಗಳಿಗೆ ನೆರವು ನೀಡಲು ಯೋಜನೆ ರೂಪಿಸುವುದು ಮತ್ತು ಮನೋವೈದ್ಯಕಿಯ ಚಿಕಿತ್ಸೆ ಒದಗಿಸುವುದು.
3. ಆಸ್ತಿ ರಕ್ಷಣೆ, ಸಂವಿಧಾನಾತ್ಮಕ ಹಕ್ಕುಗಳ ಜಾರಿ ಮತ್ತು ಅಗತ್ಯವಿದ್ದಲ್ಲಿ ಕ್ರಿಮಿನಲ್ ನಡಾವಳಿಗಳಲ್ಲಿ ಕಾನೂನು ನೆರವು ನೀಡುವುದು, ಮಾನಸಿಕ ಬೆಂಬಲ ನೀಡಿ ಸಾಧ್ಯವಿದ್ದಲ್ಲಿ ಕುಟುಂಬಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಂಧಾನ ಏರ್ಪಡಿಸುವುದು ಮತ್ತು ಮಾಹಿತಿದಾರರಿಗೆ ರಕ್ಷಣೆ ಒದಗಿಸುವುದು.
4. ಜಿಲ್ಲಾ ಮಟ್ಟದ ಪ್ರಾಧಿಕಾರಗಳನ್ನು ಸ್ಥಾಪಿಸಿ ವೈಯಕ್ತಿಕ ಆರೈಕೆ ಮತ್ತು ಪುನರ್ವಸತಿ ಯೋಜನೆ ರೂಪಿಸುವುದು, ಅದರ ನಿರಂತರ ಉಸ್ತುವಾರಿಗಾಗಿ ವಿಶೇಷ ಅಧಿಕಾರಿಗಳನ್ನು ನೇಮಿಸುವುದು
5. ಪೊಲೀಸ್, ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆಗಳು ಮತ್ತು ಕಾನೂನು ಸೇವಗಳ ಪ್ರಾಧಿಕಾರ ಹಾಗೂ ಸ್ಥಳಿಯ ಸಂಸ್ಥೆಗಳನ್ನು ಒಳಗೊಂಡ ಸಮಗ್ರ ಸಂಯೋಜಿತ ವ್ಯವಸ್ಥೆಯನ್ನು ರೂಪಿಸುವುದು. ಡಿಜಿಟಲ್ ದಾಖಲೆಗಳ ನಿರ್ವಹಣೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದೂ ಹೈಕೋರ್ಟ್ ಹೇಳಿದೆ.