ಬೆಂಗಳೂರು: ರಾಜ್ಯದ ರಸ್ತೆಗಳಲ್ಲಿ ಸವಾರರ ಅಬ್ಬರಕ್ಕೆ ಬ್ರೇಕ್ ಹಾಕಿ, ಪಾದಚಾರಿಗಳಿಗೆ ಮತ್ತು ಪರಿಸರ ಸ್ನೇಹಿ ಸೈಕಲ್ ಸವಾರರಿಗೆ ಸುರಕ್ಷತೆಯ ಬ್ರಹ್ಮಾಸ್ತ್ರ ನೀಡಲು ಸರ್ಕಾರ ಮುಂದಾಗಿದೆ. ಅವೈಜ್ಞಾನಿಕ ರಸ್ತೆ ನಿರ್ಮಿಸುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮತ್ತು ಪಾದಚಾರಿಗಳ ಹಾದಿಗೆ ಅಡ್ಡ ಬರುವ ಸವಾರರಿಗೆ ದಂಡ ಹಾಕುವ ಉದ್ದೇಶದಿಂದ ಬಿಗಿ ನಿಯಮಗಳನ್ನು ತರಲಾಗಿದೆ.
ರಾಜ್ಯದಲ್ಲಿ ಪಾದಚಾರಿಗಳ ಮತ್ತು ಸೈಕಲ್ ಸವಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ‘ಕರ್ನಾಟಕ ಮೋಟಾರು ವಾಹನಗಳ (ತಿದ್ದುಪಡಿ) ನಿಯಮಗಳು, 2026’ ಅನ್ನು ಜಾರಿಗೆ ತಂದಿದೆ.
ಇದು ಪಾದಚಾರಿ ಮತ್ತು ನಾನ್ ಮೋಟರೈಸ್ಡ್ ಟ್ರಾನ್ಸ್‌ಪೋರ್ಟ್ ಬಳಕೆದಾರರ ಸುರಕ್ಷತೆ ಮತ್ತು ಸೌಕರ್ಯಕ್ಕೆ ವಿಶೇಷ ಒತ್ತು ನೀಡುತ್ತದೆ. ರಸ್ತೆಗಳ ಯೋಜನೆ, ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಕಠಿಣ ಮಾನದಂಡಗಳನ್ನು ಜಾರಿಗೊಳಿಸುವ ಮೂಲಕ ಪಾದಚಾರಿ, ಸೈಕಲ್ ಬಳಕೆದಾರರು ಮತ್ತು ಇತರೆ ರಸ್ತೆ ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ.
ಫುಟ್‌ಪಾತ್‌ಗಳು, ಪಾದಚಾರಿ ಕ್ರಾಸಿಂಗ್‌ಗಳು, ಬಸ್ ಸ್ಟಾಪ್‌ಗಳು, ಸೈಕಲ್ ಟ್ರ್ಯಾಕ್‌ಗಳು, ಶಾಲಾ ವಲಯಗಳು ಮತ್ತು ಪಾದಚಾರಿ ವಲಯಗಳಿಗೆ ವಿವರವಾದ ವಿನ್ಯಾಸ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಫುಟ್‌ಪಾತ್‌ಗಳ ಕನಿಷ್ಠ ಅಗಲ, ನಿರಂತರತೆ, ಅಂಗವಿಕಲರಿಗೆ ಸುಲಭ ಪ್ರವೇಶ, ಟೈಲ್ಸ್, ಸಾಕಷ್ಟು ಬೆಳಕು ಲಭ್ಯತೆ ಮತ್ತು ಮೂಲಸೌಕರ್ಯಗಳ ನಿರಂತರತೆಗೆ ಒತ್ತು ನೀಡಲಾಗಿದೆ. ರಸ್ತೆಗಳ ವಿಸ್ತರಣೆ ಸಮಯದಲ್ಲಿ ಪಾದಚಾರಿ ಸ್ಥಳ ಕಡಿತವನ್ನು ಕೊನೆಯ ಆಯ್ಕೆಯಾಗಿ ಮಾತ್ರ ಅನುಮತಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಫುಟ್‌ಪಾತ್‌ಗಳ ಮೇಲೆ ಯಾವುದೇ ಅತಿಕ್ರಮಣ, ವಾಹನ ಪಾರ್ಕಿಂಗ್ ಅಥವಾ ಅಡಚಣೆಗಳಿಗೆ ಕಟ್ಟುನಿಟ್ಟಾದ ನಿಷೇಧ ಹೇರಲಾಗಿದೆ. ಮೋಟಾರ್ ವಾಹನ ಚಾಲಕರು ಪಾದಚಾರಿ, ಸೈಕಲ್ ಬಳಕೆದಾರರಿಗೆ ರಸ್ತೆ ದಾಟುವ ಹಕ್ಕು ನೀಡಬೇಕು, 1.5 ಮೀಟರ್ ಅಂತರದಿಂದ ಸೈಕಲ್ ಓವರ್‌ಟೇಕ್ ಮಾಡಬೇಕು ಮತ್ತು ಫುಟ್‌ಪಾತ್ ಅಥವಾ ಸೈಕಲ್ ಟ್ರ್ಯಾಕ್ ಮೇಲೆ ವಾಹನ ಓಡಿಸುವುದನ್ನು ನಿಷೇಧಿಸಲಾಗಿದೆ. ಶಾಲಾ ವಲಯಗಳಲ್ಲಿ ವೇಗ ಮಿತಿ 25 ಕಿ.ಮೀ (ಗಂಟೆಗೆ) ನಿಯಂತ್ರಿಸುವುದು ಸೇರಿ ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ.
ರಸ್ತೆಗಳ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಗೆ ರಸ್ತೆ ಸುರಕ್ಷತಾ ಆಡಿಟ್ ಕಡ್ಡಾಯಗೊಳಿಸಲಾಗಿದೆ. ಕ್ರ್ಯಾಶ್ ಬ್ಯಾರಿಯರ್, ಪಾವರ್ ಮಾರ್ಕಿಂಗ್, ಸೈಟ್ ಡಿಸ್ಟನ್ಸ್, ಬಸ್ ಸ್ಟಾಪ್‌ಗಳು ಸೇರಿದಂತೆ 25 ಮುಖ್ಯ ತಾಂತ್ರಿಕ ಮಾನದಂಡಗಳನ್ನು ಟೇಬಲ್ ಮೂಲಕ ವಿವರಿಸಲಾಗಿದೆ.
ದಂಡಂ ದಶಗುಣಂ
ಅತಿಕ್ರಮಣ, ನಿರ್ವಹಣಾ ಲೋಪ ಅಥವಾ ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗಿದೆ. ಪಾದಚಾರಿ ಅಥವಾ ಎನ್‌ಎಂಟಿ ಬಳಕೆದಾರರ ಸಾವು ಅಥವಾ ಗಂಭೀರ ಗಾಯಕ್ಕೆ ಕಾರಣವಾದಲ್ಲಿ ಸಂಬಂಧಪಟ್ಟ ಸಂಸ್ಥೆಗೆ ಒಂದು ಲಕ್ಷ ರೂಪಾಯಿವರೆಗೆ ದಂಡ ಮತ್ತು ಚಾಲಕರಿಗೆ 1,000 ರಿಂದ 5,000 ರೂಪಾಯಿ ದಂಡ ವಿಧಿಸುವುದು ಸೇರಿ ವಿವಿಧ ಶಿಕ್ಷೆಗಳು ಜಾರಿಯಲ್ಲಿರುತ್ತವೆ. ಜನಸಾಮಾನ್ಯರಿಂದ ದೂರುಗಳನ್ನು ಸ್ವೀಕರಿಸಲು ದೂರು ಪರಿಹಾರ ವ್ಯವಸ್ಥೆಯನ್ನೂ ರಚಿಸಲಾಗಿದೆ.
ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವ ಅಥವಾ ನಿಲುಗಡೆ ಮಾಡುವ ಚಾಲಕರಿಗೆ ಮೊದಲ ಬಾರಿಗೆ 1,000 ರೂ. ಮತ್ತು ಎರಡನೇ ಬಾರಿ 5,000 ರೂ. ದಂಡ ವಿಧಿಸಲಾಗುವುದು. ನಿಯಮ ಉಲ್ಲಂಘನೆ ಮುಂದುವರಿದಲ್ಲಿ ಪ್ರತಿದಿನ 1,000 ರೂ. ಹೆಚ್ಚುವರಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
1. ರಸ್ತೆಗಳನ್ನು ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಆರ್ಟೀರಿಯಲ್, ಉಪ ಆರ್ಟೀರಿಯಲ್, ಸ್ಥಳೀಯ ರಸ್ತೆಗಳೆಂದು ವರ್ಗೀಕರಿಸಲಾಗುತ್ತದೆ.
2. ಪ್ರತಿಯೊಂದು ರಸ್ತೆಯಲ್ಲೂ ಪಾದಚಾರಿ ಮಾರ್ಗಗಳು ಮತ್ತು ಸೈಕಲ್ ಟ್ರ್ಯಾಕ್‌ಗಳನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸುವುದು ಕಡ್ಡಾಯವಾಗಿದೆ.
3. ಫುಟ್‌ಪಾತ್‌ಗಳ ಮೇಲೆ ವಾಹನ ನಿಲುಗಡೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು.
4. ಪಾದಚಾರಿ ಮಾರ್ಗಗಳು ಕನಿಷ್ಠ 1.5 ಮೀಟರ್ ಅಗಲವಿರಬೇಕು ಮತ್ತು ಅಂಗವಿಕಲರಿಗೆ ಪೂರಕವಾದ ಸೌಲಭ್ಯಗಳನ್ನು ಹೊಂದಿರಬೇಕು.
5. ವಾಹನ ಚಾಲಕರಿಗೂ ಹೊಸ ಜವಾಬ್ದಾರಿ ನಿಗದಿಪಡಿಸಲಾಗಿದ್ದು, ಪಾದಚಾರಿಗಳು ರಸ್ತೆ ದಾಟುವಾಗ ವೇಗ ಕಡಿಮೆ ಮಾಡುವುದು ಮತ್ತು ಜೆಬ್ರಾ ಕ್ರಾಸಿಂಗ್‌ಗಳ ಬಳಿ ವಾಹನಗಳನ್ನು ನಿಲ್ಲಿಸುವುದು ಕಡ್ಡಾಯ.
6. ಸೈಕಲ್ ಸವಾರರು ಕೂಡ ರಾತ್ರಿ ವೇಳೆ ಮುಂಭಾಗದಲ್ಲಿ ಬಿಳಿ ಬೆಳಕು ಮತ್ತು ಹಿಂಭಾಗದಲ್ಲಿ ಕೆಂಪು ಬೆಳಕನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
7. ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ‘ಅನುಷ್ಠಾನ ಏಜೆನ್ಸಿ’ಗಳಾಗಿ ಕಾರ್ಯನಿರ್ವಹಿಸಲಿವೆ. ಜಿಲ್ಲೆಗಳಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳು ಇದರ ಉಸ್ತುವಾರಿ ವಹಿಸಲಿವೆ.
8. ರಸ್ತೆ ವಿನ್ಯಾಸದಲ್ಲಿ ದೋಷ ಕಂಡುಬಂದಲ್ಲಿ ಅಥವಾ ನಿಯಮ ಪಾಲಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲು ಅವಕಾಶವಿದೆ.