ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ
- ಪರೀಕ್ಷಾ ದಿನ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಸಮಯ ಮತ್ತು ಪರೀಕ್ಷೆಗಳ ಸಮಯವನ್ನೇ ಬದಲಾವಣೆ ಮಾಡಿ ಆದೇಶ
- ಈಗ 10 ಗಂಟೆ ಬದಲಿಗೆ 11 ಗಂಟೆಗೆ ಪರೀಕ್ಷೆ ಆರಂಭಿಲಿಸಲಿದ್ದು, ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಶಾಲೆಗೆ ಹಾಜರಾಗಬೇಕು
- ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ವಿದ್ಯಾರ್ಥಿ, ಶಿಕ್ಷಕರು ಮತ್ತು ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು, ಅಕ್ರಮ ತಡೆಗಟ್ಟುವುದಕ್ಕಾಗಿ ಹೊಸ ಕ್ರಮ ಅಳವಡಿಸಿಕೊಂಡಿದೆ. ಶಾಲೆಗಳಿಗೆ ಪ್ರಶ್ನೆಪತ್ರಿಕೆ ಕಳುಹಿಸುವುದು, ಪರೀಕ್ಷಾ ದಿನ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಸಮಯ ಮತ್ತು ಪರೀಕ್ಷೆಗಳ ಸಮಯವನ್ನೇ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಪ್ರಸ್ತುತ ಪ್ರಥಮ ಭಾಷೆ ವಿಷಯಗಳಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಲಿದೆ. ಉಳಿದ ವಿಷಯಗಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷಾ ಸಮಯ ನಿಗದಿ ಮಾಡಲಾಗಿದೆ. ಈಗ 10 ಗಂಟೆ ಬದಲಿಗೆ 11 ಗಂಟೆಗೆ ಪರೀಕ್ಷೆ ಆರಂಭಿಲಿಸಲಿದ್ದು, ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಶಾಲೆಗೆ ಹಾಜರಾಗಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಗಟ್ಟುವುದು ಇಲಾಖೆಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ಹೊಸ ನಿಯಮಗಳೇನು?
ಜ.27ರಿಂದ ೆ.2ರವರೆಗೆ ಎರಡನೇ ಪೂರ್ವಸಿದ್ಧತಾ ಪರೀಕ್ಷೆ ಮತ್ತು ೆ.23ರಿಂದ 28ರವರೆಗೆ ಮೂರನೇ ಪೂರ್ವಸಿದ್ಧತಾ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳಿಗೆ ಪ್ರಸ್ತುತ ಬೆಳಗ್ಗೆ 7 ಗಂಟೆಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶಾಲಾ ಲಾಗಿನ್‌ಗೆ ಕಳುಹಿಸುತ್ತಿರುವ ಪ್ರಶ್ನೆಪತ್ರಿಕೆಗಳನ್ನು ಬೆಳಗ್ಗೆ 9.30ಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಈ ಎರಡೂ ಪರೀಕ್ಷೆಗಳನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತಾಲಯದ ಹಂತದಲ್ಲಿ ಪ್ರೌಢ ಶಿಕ್ಷಣ ನಿರ್ದೇಶಕರು, ಧಾರವಾಡ ಮತ್ತು ಕಲಬುರಗಿ ಅಪರ ಆಯುಕ್ತಾಲಯದ ನಿರ್ದೇಶಕನ್ನು ಪರೀಕ್ಷಾ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆಯಾ ವಿಭಾಗದ ವಿಭಾಗೀಯ ಸಹ ನಿರ್ದೇಶಕರನ್ನು ಪರೀಕ್ಷೆಯ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
9 ಗಂಟೆಗೆ ಶಾಲೆ ಆರಂಭ 11 ಗಂಟೆಗೆ ಪರೀಕ್ಷೆ:
- ಒಂದು ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾದರೂ ವಿದ್ಯಾರ್ಥಿಗಳಿಗೆ ಸಿಗಬಾರದು ಎಂಬ ಉದ್ದೇಶದಿಂದ ಪರೀಕ್ಷಾ ದಿನದಂದು 10ನೇ ತರಗತಿ ವಿದ್ಯಾರ್ಥಿಗಳಿಗೆ 9 ಗಂಟೆಗೆ ತರಗತಿಗಳನ್ನು ಆರಂಭಿಸುವಂತೆ ಸೂಚಿಸಲಾಗಿದೆ.
- ಬೆಳಗ್ಗೆ 9.30ಕ್ಕೆ ಪರೀಕ್ಷಾ ಪ್ರಶ್ನೆಪತ್ರಿಕೆಯನ್ನು ಶಾಲಾ ಲಾಗಿನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಶ್ನೆಪತ್ರಿಕೆಗಳನ್ನು ಬೆಳಗ್ಗೆ 9.30ರಿಂದ 10ಗಂಟೆಯೊಳಗೆ ಮುದ್ರಿಸುವುದು.
- ಬೆಳಗ್ಗೆ 10ರಿಂದ 10.30ರೊಳಗೆ ಮುದ್ರಣಗೊಂಡ ಪ್ರಶ್ನೆಪತ್ರಿಕೆಗಳನ್ನು ಪ್ಯಾಕಿಂಗ್ ಮಾಡುವುದು.
ಬೆಳಗ್ಗೆ 10.50ಕ್ಕೆ ಪರೀಕ್ಷಾ ಕೊಠಡಿಗೆ ಪ್ರಶ್ನೆಪತ್ರಿಕೆಗಳ ಬಂಡಲ್ ಅನ್ನು ವಿತರಿಸುವುದು.
ಬೆಳಗ್ಗೆ 11 ಗಂಟೆಗೆ ಪರೀಕ್ಷೆಯನ್ನು ಆರಂಭಿಸಬೇಕು.
ವಿದ್ಯಾರ್ಥಿಯು ಪರೀಕ್ಷೆಗೆ ಗೈರು ಹಾಜರಾಗುವಂತಿಲ್ಲ
- ಪರೀಕ್ಷಾ ದಿನದಂದು ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗುವಂತಿಲ್ಲ. ಬೆಳಗ್ಗೆ 9 ಗಂಟೆಗೆ ವಿದ್ಯಾರ್ಥಿಯು ಹಾಜರಾಗಿದ್ದಾನೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
- ಮುಖ್ಯ ಶಿಕ್ಷಕರ ಮೊಬೈಲ್ ಸಂಖ್ಯೆಗೆ ಬರುವ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಒಟಿಪಿಯನ್ನು ಯಾರಿಗೂ ಹಂಚಿಕೊಳ್ಳುವಂತಿಲ್ಲ. ಮೊಬೈಲ್ ಸಂಖ್ಯೆ ಬದಲಾದಲ್ಲಿ ಕೂಡಲೇ ಮಂಡಳಿ ಗಮನಕ್ಕೆ ತರುವುದು.
- ಪ್ರಶ್ನೆಪತ್ರಿಕೆ ಪ್ಯಾಕಿಂಗ್ ಸಹಾಯಕ್ಕಾಗಿ ಒಬ್ಬ ಶಿಕ್ಷಕರನ್ನು ನೋಡಲ್ ಶಿಕ್ಷಕರೆಂದು ನಿಯೋಜನೆ ಮಾಡುವುದು. ಪ್ಯಾಕಿಂಗ್ ಮುಗಿದ ಬಳಿಕ ಅದನ್ನು ಸೀಲಿಂಗ್ ಮಾಡಿ ಪರೀಕ್ಷೆ ಆರಂಭವಾಗುವ ತನಕ ಸುರಕ್ಷಿತವಾಗಿಟ್ಟುಕೊಳ್ಳುವುದು.
- ಪ್ಯಾಕಿಂಗ್‌ಗಳನ್ನು ಕೊಠಡಿ ಮೇಲ್ವಿಚಾರಕರಿಗೆ ಹಸ್ತಾಂತರಿಸಿ ಸ್ವೀಕೃತಿ ಪಡೆಯುವುದು.
- ಶಾಲೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಒಂದೇ ಕಂಪ್ಯೂಟರ್ ಅನ್ನು ಬಳಸಬೇಕು. ಒಂದುಕ್ಕಿಂತ ಹೆಚ್ಚು ಐಪಿ ವಿಳಾಸದಲ್ಲಿ ಡೌನ್‌ಲೋಡ್ ಆದಲ್ಲಿ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
- ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರೀಕ್ಷೆಗೆ ಮೊಬೈಲ್ ತರದಂತೆ ತಿಳಿಸಲಾಗಿದೆ.
ಕಾನೂನು ಕ್ರಮಗಳು
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ವಿದ್ಯಾರ್ಥಿ, ಶಿಕ್ಷಕರು ಮತ್ತು ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ.