ಗ್ರೇಟರ್ ಬೆಂಗಳೂರು ಪ್ರಾಧಿಕಾರ 
ರಾಜ್ಯ

ಜಿಬಿಎಗೆ ಹೊಸ ಮಾಸ್ಟರ್ ಪ್ಲ್ಯಾನ್: 686.82 ಚದರ ಕಿಮೀಗೆ ಸಿಡಿಪಿ ಅನುಷ್ಠಾನ-New Master Plan

ಹರೀಶ್​​ ಕೆ.ಸಿ.
ಹರೀಶ್ ಬೇಲೂರು ಬೆಂಗಳೂರು
ಇಪ್ಪತ್ತು ವರ್ಷದ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರವೂ (ಜಿಬಿಎ) ‘ಸಮಗ್ರ ಅಭಿವೃದ್ಧಿ ಯೋಜನೆ’ (ಸಿಡಿಪಿ) ತಯಾರಿಸಲು ಮುಂದಾಗಿದೆ.
ಭವಿಷ್ಯದಲ್ಲಿ ಬೆಂಗಳೂರು ನಗರ ಯಾವ ರೀತಿ ಇರಬೇಕೆಂದು 2015ರ ‘ಪರಿಷ್ಕೃತ ಮಾಸ್ಟರ್ ಪ್ಲ್ಯಾನ್’ (ಆರ್‌ಎಂಪಿ) ಅನ್ನು 2005ರಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ 2015ರ ಸಿಡಿಪಿ ಅವಧಿ ಈಗಾಗಲೇ ಮುಗಿದಿದೆ. 20 ವರ್ಷದ ಬಳಿಕ ಜಿಬಿಎ ಪಟ್ಟಣ ಯೋಜನಾ ವಿಭಾಗದ ಅಧಿಕಾರಿಗಳು, ‘ಭವಿಷ್ಯದ ಬೆಂಗಳೂರು’ ಹೇಗೆ ಇರಬೇಕೆಂದು 2047ರ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ತಯಾರಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ. 686.82 ಚದರ ಕಿಲೋಮೀಟರ್‌ಗಳಿಗೆ ಸಿಡಿಪಿ ತಯಾರಿಸಲಾಗುತ್ತಿದೆ. 2027ರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಹೊಸ ಸಿಡಿಪಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.
ಬೆಂಗಳೂರಿನ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರದಲ್ಲಿ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಕರಡು ರಚನೆಗೆ ಜಿಬಿಎ ಅಧಿಕಾರಿಗಳು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಟೆಂಡರ್‌ನಲ್ಲಿ 3 ಕಂಪನಿಗಳು ಬಿಡ್ ಸಲ್ಲಿಸಿದ್ದವು.ಫೈನಾನ್ಶಿಯಲ್ ಬಿಡ್‌ಗೆ 2 ಕಂಪನಿಗಳು ಅರ್ಹತೆ ಪಡೆದಿವೆ. ಎಲ್-1 ಪಡೆದ ಕಂಪನಿಯನ್ನು ಆಯ್ಕೆ ಮಾಡಿ ಸರ್ಕಾರದ ಅನುಮೋದನೆ ಕಳುಹಿಸಲಾಗುತ್ತದೆ. ಬಿಡ್‌ನಲ್ಲಿ ಎಲ್-1 ಪಡೆದ ಏಜೆನ್ಸಿಗೆ ಕರಡು ರಚಿಸಲು 11 ತಿಂಗಳು ಕಾಲಾವಕಾಶ ಇರಲಿದೆ. ನಂತರ 60 ದಿನಗಳ ಸಾರ್ವಜನಿಕರ ಮುಂದಿಡಲಾಗುತ್ತದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಕ್ರೋಢೀಕರಿಸಿ ಬೆಂಗಳೂರಿಗೆ ಮಾಸ್ಟರ್ ಪ್ಲ್ಯಾನ್ ಜಾರಿಗೆ ತರಲಾಗುವುದು. ಸಿಡಿಪಿ ತಯಾರಿಕೆಗಾಗಿ ಬಜೆಟ್‌ನಲ್ಲಿ 20 ಕೋಟಿ ರೂ. ಮೀಸಲಿಡಲಾಗಿದೆ.
ಮುಂದಿನ 20 ವರ್ಷ ನಗರದ ಯಾವ ಭಾಗದಲ್ಲಿ ಜನಸಂಖ್ಯೆ ಜಾಸ್ತಿಯಾಗಲಿದೆ, ಒಳಚರಂಡಿ, ಕುಡಿಯವ ನೀರು, ವಿದ್ಯುತ್, ರಸ್ತೆ ಅಗಲೀಕರಣ, ಭೂಬಳಕೆ, ವಸತಿ, ವಾಣಿಜ್ಯ, ಸಾರಿಗೆ, ನೀರು, ಘನತ್ಯಾಜ್ಯ ನಿರ್ವಹಣೆ ಮತ್ತು ಹಸಿರು ವಲಯ ಸೇರಿ ಇತ್ಯಾದಿ ಅಂಶಗಳ ಆಧಾರದಲ್ಲಿ ಸಿಡಿಪಿ ತಯಾರಿಸಲಾಗುತ್ತದೆ. ನಗರದ ಭವಿಷ್ಯದ ಬೆಳವಣಿಗೆಯನ್ನು ನಕ್ಷೆ ಮಾಡುವ ಶಾಸನಬದ್ಧ ದಾಖಲೆ ಸಿಡಿಪಿಯಾಗಿದೆ. ಹಸಿರು ವಲಯಗಳಿಗೆ ಸಂಬಂಧಿಸಿದಂತೆ ಕಾನೂನು, ಕಾರ್ಯತಂತ್ರದ ನೀಲಿನಕ್ಷೆ ಕಾರ್ಯನಿರ್ವಹಿಸಲಿದೆ. ಕಾನೂನು, ಯೋಜಿತ, ಅನುಮೋದಿತ ಭೂಬಳಕೆ ನಿರ್ಧರಿಸಲಾಗುತ್ತದೆ. ಆರ್‌ಎಂಪಿ ಸಿದ್ಧವಾದ ಬಳಿಕ ವಲಯ ವಿಗಂಡಣೆ, ರಸ್ತೆ ವಿಸ್ತರಣೆ, ಭೂಬಳಕೆ, ವಾಣಿಜ್ಯ, ವಸತಿ ಮತ್ತು ಕೈಗರಿಕಾ ಪ್ರದೇಶದ ವಿಸ್ತರಣೆ, ರಸ್ತೆಗಳ ವಿಸ್ತೀರ್ಣ, ಉದ್ಯಾನ, ಸಾರ್ವಜನಿಕ ಮೂಲಸೌಕರ್ಯಕ್ಕೆ ಅಗತ್ಯವಿರುವ ಜಮೀನನ್ನು ಕಾಯ್ದಿರಿಸಲಾಗುತ್ತದೆ. ಸಂಚಾರಸಿಕ್ಕು, ಪ್ರವಾಹ ಪರಿಸ್ಥಿತಿ, ನೀರಿನ ಅಭಾವ ಮತ್ತು ಅನಿಯಂತ್ರಿತ ನಗರೀಕರಣ ತಡೆಗಟ್ಟಲು ಈ ಯೋಜನೆ ಒತ್ತು ನೀಡಲಿದೆ.
ಬೆಂಗಳೂರಿನ ಒಟ್ಟು ವಿಸ್ತೀರ್ಣ 1,207 ಚಕಿಮೀ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹಿಂದಿನ ಎಲ್ಲ ಮಾಸ್ಟರ್ ಪ್ಲ್ಯಾನ್‌ಗಳನ್ನು ಸಿದ್ಧಪಡಿಸಿದ್ದರೂ ಇದೇ ಮೊದಲ ಬಾರಿಗೆ ಯೋಜನೆ ರೂಪಿಸುವ ಕೆಲಸವನ್ನು ಜಿಬಿಎ ಮಾಡುತ್ತಿದೆ. ಬಿಡಿಎ ಮತ್ತು ಜಿಬಿಎ ವ್ಯಾಪ್ತಿಯ ಪ್ರದೇಶಗಳು ಸೇರಿ ಬೆಂಗಳೂರಿನ ಒಟ್ಟು ವಿಸ್ತೀರ್ಣ 1,207 ಚ. ಕಿಮೀಗಳಷ್ಟಿದೆ. ಜಿಬಿಎಯ ಮಾಸ್ಟರ್ ಪ್ಲ್ಯಾನ್ 686.82 ಚಕಿಮೀಗೆ ಇರಲಿದೆ. ಸಾಮಾನ್ಯವಾಗಿ ಮಾಸ್ಟರ್ ಪ್ಲ್ಯಾನ್‌ಗಳನ್ನು 20 ವರ್ಷದವರೆಗೆ ಸಿದ್ಧಪಡಿಸಲಾಗುತ್ತದೆ. ಹೊಸ ಸಿಡಿಪಿಯು 2047ರ ಮಾಸ್ಟರ್ ಪ್ಲ್ಯಾನ್ ಹೊಂದಿರುತ್ತದೆ. ಆದರೆ, ಅಂತಿಮವಾಗಿ ಯಾವ ವರ್ಷದ ಮಾಸ್ಟರ್ ಪ್ಲ್ಯಾನ್ ಎಂಬುದರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಪ್ರಮುಖವಾಗಿ ನಗರ ಬೆಳವಣಿಗೆ, ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ವಿಸ್ತರಣೆ, ರಸ್ತೆ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ ಆಧರಿಸಿ ರಚನಾತ್ಮಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ದಿನದಿಂದ ದಿನಕ್ಕೆ ನಗರಕ್ಕೆ ವಲಸಿಗರು ಅಧಿಕವಾಗಿ ಬರುತ್ತಿದ್ದಾರೆ. ಇದರಿಂದ ರಾಜಧಾನಿಯಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಯೋಜನಾ ಅನುಷ್ಠಾನದಲ್ಲಿ ಜನಸಂಖ್ಯೆಯನ್ನು ಪರಿಗಣಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಬಿಡಿಎ ಪ್ರತ್ಯೇಕ ಯೋಜನೆ
ರಾಜಧಾನಿಯ ಒಳಗೆ ಯೋಜನಾಬದ್ಧವಾದ ಮೂಲಸೌಕರ್ಯ ಕಲ್ಪಿಸಲು ಜಿಬಿಎ, 686.82 ಚಕಿಮೀಗಳಿಗೆ 2047ರ ಮಾಸ್ಟರ್ ಪ್ಲ್ಯಾನ್ ತಯಾರಿಸಿದರೆ, ಬಿಡಿಎ ನಗರದ ಸುತ್ತಮುತ್ತ ಇರುವ 450 ಚಕಿಮೀಗಳಿಗೆ 2041ರ ನೀಲಿನಕ್ಷೆ ಸಿದ್ಧಪಡಿಸುತ್ತಿದೆ. ಈ ಯೋಜನೆಯಲ್ಲಿ ಬಿಡಿಎ, ಸಂಚಾರ ಸಿಕ್ಕು ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹೊರವರ್ತುಲ ರಸ್ತೆ ಮತ್ತು ಸಾರಿಗೆ ಆಧಾರಿತ ಅಭಿವೃದ್ಧಿ ಮಾಡಲು ಯೋಜಿಸಲಾಗಿದೆ. ಮೆಟ್ರೊ ಕಾರಿಡಾರ್‌ಗಳ ಸಮೀಪದ ಜಮೀನುಗಳ ಅಭಿವೃದ್ಧಿ ಮತ್ತು ಕಂದಾಯ ಜಮೀನನ್ನು ಯೋಜನಾಬದ್ಧವಾಗಿ ವಸತಿ ಪ್ರದೇಶಗಳನ್ನಾಗಿ ಮಾರ್ಪಡಿಸುವ ಕುರಿತು ಬಿಡಿಎ ಚಿಂತನೆ ನಡೆಸಿದೆ. ಕೃಷಿ, ವಸತಿ, ವಾಣಿಜ್ಯ ಉದ್ದೇಶಕ್ಕೆ ಬಳಸುವ ಜಮೀನು ಎಷ್ಟು? ಹಾಗೂ ಸರ್ಕಾರಿ ಜಮೀನು ಎಷ್ಟು ಎಂಬುದನ್ನು ಮೌಲ್ಯಮಾಪನ ಮಾಡುವ ಮೂಲಕ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗುತ್ತದೆ.
ನಗರಾಭಿವೃದ್ಧಿ ಇಲಾಖೆಯು ನಿಯಮದಂತೆ ಪ್ರತಿ 15 ವರ್ಷಕ್ಕೊಮ್ಮೆ ಸಿಡಿಪಿ ತಯಾರಿಸಬೇಕು. ನಿಗದಿತ ಅವಧಿಯೊಳಗೆ ಸಿಡಿಪಿ ಸಿದ್ಧಪಡಿಸಿ ಅನುಷ್ಠಾನಕ್ಕೆ ತಂದರೆ ನಗರಕ್ಕೆ ಯೋಜನಾಬದ್ಧವಾಗಿ ಮೂಲಸೌಕರ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಅವೈಜ್ಞಾನಿಕವಾಗಿ ನಗರ ಬೆಳೆಯಲು ಕಡಿವಾಣ ಬೀಳಲಿದೆ.
| ಪ್ರಶಾಂತ್ ಮಿರ್ಲೆ. ವಕೀಲ.