ಬೆಂಗಳೂರು: ಸಾಂಪ್ರದಾಯಿಕವಾಗಿ ಹಾಲು, ತುಪ್ಪದ ಮಾರಾಟಕ್ಕೆ ಸೀಮಿತವಾಗದೆ ಗ್ರಾಹಕರ ಅಭಿರುಚಿ, ಜಾಗತಿಕ ಮಾರುಕಟ್ಟೆ ಗುರಿಯಾಗಿಸಿಕೊಂಡು ನಂದಿನಿ ಹಾಲಿನ ಉಪ ಉತ್ಪನ್ನ ತಯಾರಿಕೆ ಹೆಚ್ಚಿಸುವ ಯೋಜನೆ ಕೆಎಂಎಫ್ನಲ್ಲಿ ರೂಪುಗೊಳ್ಳುತ್ತಿದೆ. ಜನರ ಜೀವನ ಶೈಲಿ, ಆರೋಗ್ಯ ಕಾಳಜಿಗೆ ತಕ್ಕಂತೆ ಉತ್ಪನ್ನ ತಯಾರಿಸಿ ಮಾರುಕಟ್ಟೆ ಜಾಲ ವಿಸ್ತರಿಸುವುದು ಯೋಜನೆ ಸಾರಾಂಶ. ಬೆಂಗಳೂರು ಹಾಲು ಒಕ್ಕೂಟ (ಬಮುಲ್) ಅಧ್ಯಕ್ಷ ಡಿ.ಕೆ.ಸುರೇಶ್ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ನಂದಿನಿ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆಗೆ ತಾವು ಕಂಡ ಕನಸುಗಳನ್ನು ತೆರೆದಿಟ್ಟರು.
ನಿತ್ಯ ಕೆಎಂಎಫ್ನಲ್ಲಿ 1.10 ಕೋಟಿ ಲೀ. ಹಾಲು ಸಂಗ್ರಹವಾಗುತ್ತಿದೆ. ಈ ಪೈಕಿ 65-70 ಲಕ್ಷ ಲೀ. ಮಾರುಕಟ್ಟೆಗೆ ಹೋದರೆ 45 ಲಕ್ಷ ಲೀ.ನಲ್ಲಿ ಉಪ ಉತ್ಪನ್ನ ತಯಾರಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ನಂದಿನಿ ಐಸ್ ಕ್ರೀಮ್, ಚೀಸ್, ಪನೀರ್ ಉತ್ಪಾದನೆ ಹೆಚ್ಚಳವಾಗಿಲ್ಲ. ಹೀಗಾಗಿ ಸುಧಾರಣೆಗೆ ಯೋಚಿಸಲಾಗಿದೆ. ಲ್ಯಾಕ್ಟೋಸ್ ಫ್ರೀ ಹಾಲು, ಪ್ರೊಬ್ಯಾಟಿಕ್ ಮೊಸರು, ಕೊಬ್ಬು ಕಡಿಮೆ ಇರುವ ಪನೀರ್, ಸಕ್ಕರೆರಹಿತ ಸಿಹಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ ನೀಡಲಾಗುತ್ತಿದೆ. ಎಐನಂತಹ ತಂತ್ರಜ್ಞಾನ ಬಳಸಿ ಉತ್ಪಾದನೆಯಿಂದ ಪ್ಯಾಕಿಂಗ್ವರೆಗೆ ಗುಣಮಟ್ಟದ ಭರವಸೆ ನೀಡಲಾಗುತ್ತಿದೆ. ನಕಲಿ ಹಾವಳಿ ತಡೆಗೆ ಐಎಸ್ಐ ಮಾರ್ಕ್, ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ ಎಂದರು.
2 ವರ್ಷದಲ್ಲಿ ನವಸ್ಪರ್ಶ
ಮುಂದಿನ ಒಂದೂವರೆಯಿಂದ ಎರಡು ವರ್ಷಗಳಲ್ಲಿ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳಲ್ಲಿ ಹೊಸತನ ಕಾಣಲಿದೆ. ಗ್ರಾಹಕರ ಅಪೇಕ್ಷೆ ಆಧರಿಸಿ ಫಿಟ್ನೆಸ್ ಸಹಿತ ಉತ್ಪನ್ನಗಳ ತಯಾರಿಕೆ ಹೆಚ್ಚಳವಾಗಲಿದೆ ಎಂದು ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿರುವುದನ್ನು ಅರಿತಿರುವ ಯುವಜನತೆ ಹೈನುಗಾರಿಕೆಯತ್ತ ವಾಲುತ್ತಿದ್ದಾರೆ. ಇದರಿಂದಾಗಿ ಮುಂದಿನ ವರ್ಷ 25 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಲಿದೆ. 50 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
"ವಿಜಯವಾಣಿ' ಸಂವಾದದಲ್ಲಿ ಮಾತನಾಡಿದ ಅವರು, ಹೈನುಗಾರಿಕೆಗೆ ನಾವೆಷ್ಟೇ ಪ್ರೋತ್ಸಾಹ ನೀಡಿದರೂ ನಿಗದಿತ ಆದಾಯವಿಲ್ಲ ಎಂಬ ಕಾರಣಕ್ಕೆ ಯುವಜನರು ಆಸಕ್ತಿ ಕಳೆದುಕೊಳ್ಳಲಾರಂಭಿಸಿದ್ದರು. ಮೇವು ಕೊರತೆ, ಪಶು ಆಹಾರ ಹಾಗೂ ಇಂಧನ ದರ ಏರಿಕೆಯಂತಹ ಸಮಸ್ಯೆಗಳಿಂದ ಹಳ್ಳಿ ತೊರೆದು ಬೆಂಗಳೂರಿನತ್ತ ಮುಖ ಮಾಡಿದ್ದರು. ಆದರೆ ರಾಜ್ಯ ಸರ್ಕಾರ ಇತ್ತೀಚೆಗೆ ದರ ಏರಿಕೆ ಮಾಡಿದ ನಂತರ ಪ್ರತಿ ಲೀಟರ್ಗೆ ಇಂತಿಷ್ಟು ನಿಗದಿತ ಆದಾಯ ಬರುತ್ತದೆ. ವಾರದಲ್ಲೇ ದುಡ್ಡು ಖಾತೆಗೆ ಜಮೆ ಆಗುತ್ತದೆ ಎಂಬ ಕಾರಣದಿಂದ ಹೈನುಗಾರಿಕೆಯತ್ತ ವಾಲುತ್ತಿದ್ದಾರೆ ಎಂದರು.
ರಷ್ಯಾ-ಯುಕ್ರೇನ್, ಇಸ್ರೇಲ್-ಇರಾನ್ ಯುದ್ಧದ ನಂತರ ಹಾಲೊಂದೇ ಅಲ್ಲ, ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಪಶು ಆಹಾರಕ್ಕೆ ಬಳಸುವ ಮೆಕ್ಕೆಜೋಳದ ಬೆಲೆ ಕೆಜಿಗೆ 24 ರಿಂದ 35 ರೂ.ಗೆ ಏರಿದೆ. ಹತ್ತಿ ಕಾಳು ಬೆಲೆ 14 ರೂ. ಹೆಚ್ಚಿದೆ. ಸಕ್ಕರೆ ದರ 39 ರಿಂದ 60ಕ್ಕೆ ಏರಿಕೆ ಕಂಡಿದೆ. ಕಳೆದ ಎರಡು ತಿಂಗಳಿಂದ ಕೆಎಂಎಫ್ ನಷ್ಟ ಅನುಭವಿಸುತ್ತಿತ್ತು. ಈ ಕಾರಣಗಳಿಗೆ ದರ ಏರಿಕೆ ಅನಿವಾರ್ಯವಾಗಿತ್ತು. ಹೆಚ್ಚಳ ಮಾಡಿದ 8 ರೂ.ನಲ್ಲಿ 7 ರೂ. ರೈತರಿಗೆ, ಉಳಿದ 1 ರೂ.ನಲ್ಲಿ ಏಜೆಂಟರಿಗೆ ಕೊಡುವ ಕಮಿಷನ್ ಕಳೆದು 60 ಪೈಸೆ ಒಕ್ಕೂಟಕ್ಕೆ ಸಿಗುತ್ತದೆ ಎಂದು ವಿವರಿಸಿದರು.
ಪ್ರತಿ ಲೀಟರ್ ನಂದಿನಿ ಹಾಲಿನ ಸಂಸ್ಕರಣೆಗೆ ಸರಾಸರಿ 11 ರೂ. ವೆಚ್ಚ ತಗಲುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯಿಂದ ಪ್ಯಾಕಿಂಗ್ ಮೊತ್ತ ಏರಿದೆ. ಪ್ಲಾಸ್ಟಿಕ್ ಕ್ರೇಟ್ಗಳ ಬೆಲೆ ದುಬಾರಿಯಾಗಿದೆ ಎಂದರು.
ದರ ಏರಿಕೆ ಬಳಿಕ ನಿತ್ಯ 10 ಲಕ್ಷ ಲೀ. ಹಾಲು ಉತ್ಪಾದನೆ ಹೆಚ್ಚಿದೆ. ಇದೇ ವೇಳೆ ಶೇ. 2 ಮಾರಾಟ ಕುಸಿದಿದೆ. ಇದಕ್ಕೆ ದೀಪಾವಳಿ ಹಾಗೂ ಶಾಲಾ ರಜಾ ದಿನಗಳು ಕಾರಣ. ಒಂದೆರಡು ವಾರದಲ್ಲಿ ಸರಿಹೋಗಲಿದೆ ಎಂದು ಸುರೇಶ್ ವಿಶ್ಲೇಷಿಸಿದರು.
ನಿತ್ಯ 7000 ಲೀಟರ್ ನಾಟಿ ಹಸುವಿನ ಹಾಲು ಮಾರಲಾಗುತ್ತಿದೆ. ತುಪ್ಪಕ್ಕೂ ಬೇಡಿಕೆ ಇದೆ. ಹೀಗಾಗಿ ನಾಟಿ ಹಸುಗಳ ಸಾಕಣೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮಗೆ ಹಾಲಿಗಿಂತ ತುಪ್ಪ-ಬೆಣ್ಣೆ ಮಾರಾಟವೇ ಲೈನ್ ಇದ್ದಂತೆ ಎಂದು ಸುರೇಶ್ ಅಭಿಪ್ರಾಯಪಟ್ಟರು.
ಹಾಲು ಒಕ್ಕೂಟಕ್ಕೆ ರೈತರು-ಗ್ರಾಹಕರು ಕಣ್ಣುಗಳಿದ್ದಂತೆ. ಯಾವ ಕಣ್ಣಿಗೂ ನೋವಾಗದಂತೆ ನಡೆಯಬೇಕು. ನಮ್ಮದು ಒಂದು ರೀತಿ ತಂತಿ ಮೇಲಿನ ನಡಿಗೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ ಏರಿದೆ. ಫರ್ನೇಸ್ ಆಯಿಲ್ ಬೆಲೆಯೂ ಹೆಚ್ಚಿದೆ. ಇದರ ಹೊಡೆತ ತಡೆಯುವುದು ಕಷ್ಟವಾಗಿತ್ತು ಎಂದು ಸುರೇಶ್ ತಿಳಿಸಿದರು.
ಮೊಸರು ದರ ಇಳಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಮುಂದಿನ ವಾರದ ವೇಳೆಗೆ ದರ ಇಳಿಯಬಹುದು. ಅದಕ್ಕೂ ಮುಂಚೆ ಎಲ್ಲ ಒಕ್ಕೂಟಗಳು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.ಡಿ.ಕೆ. ಸುರೇಶ್, ಬಮುಲ್ ಅಧ್ಯಕ್ಷ
ಬಮುಲ್ನಲ್ಲಿ ಸುಧಾರಣೆ
ಬಮುಲ್ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಒಕ್ಕೂಟದ ತಾಂತ್ರಿಕ ಸಮಿತಿ ಸಭೆ ಹಾಗೂ ಹಾಲು ಉತ್ಪಾದಕ ರೈತರು, ಏಜೆಂಟರ ಜತೆ ಸಮಾಲೋಚಿಸಿದ ಬಳಿಕ ಸುಧಾರಣೆಗೆ ಮುಂದಾದೆ. ಮೂಲೆ ಸೇರಿಸಿದ್ದ ಆಟೋಮ್ಯಾಟಿಕ್ ಯಂತ್ರಗಳಿಗೆ ಕೆಲಸ ನೀಡಿದೆ. ಎಐ ಆಧಾರಿತ ಕ್ಯಾಮೆರಾ ಸೇರಿ ಹೊಸ ತಾಂತ್ರಿಕತೆ ಅಳವಡಿಸಿದೆ. ಪ್ಯಾಕಿಂಗ್ ಹಾಗೂ ಕೋಲ್ಡ್ ಚೈನ್ ವ್ಯವಸ್ಥೆ ಮೇಲೆ ನಿಗಾ ಇಡಲಾಯಿತು. 24 ಲಕ್ಷ ಪ್ಯಾಕೆಟ್ ಹಾಲು 360 ಟ್ರಕ್ಗಳಲ್ಲಿ ವಿತರಣೆ ಆಗುತ್ತಿತ್ತು. ಇದರ ಟ್ರ್ಯಾಕ್ ಕಂಡುಕೊಂಡೆ. ರೈತರು, ಸಿಬ್ಬಂದಿ ಸಹಕಾರವೂ ದೊರೆಯಿತು. ಸುಧಾರಣೆಯೂ ಆಯಿತು ಎಂದು ಡಿ.ಕೆ.ಸುರೇಶ್ ಹೇಳಿದರು.
ಕೆಎಂಎಫ್ ಅಧ್ಯಕ್ಷ ಹುದ್ದೆಗೆ ಚುನಾವಣೆ ವಿಳಂಬವಾಗಿರುವುದು ನಿಜ. ಆದರೆ, ಅಧ್ಯಕ್ಷ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ಸದ್ಯಕ್ಕೆ ಬಮುಲ್ ಅಧ್ಯಕ್ಷನಾಗಿರುವೆ. ಇಲ್ಲಿ ಮಾಡಬೇಕಾಗಿರುವ ಕೆಲಸ ಬಹಳಷ್ಟಿದೆ. ಎಲ್ಲರ ಅಭಿಪ್ರಾಯ ಪಡೆದು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಆದಷ್ಟು ಶೀಘ್ರದಲ್ಲಿಯೇ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಡಿ.ಕೆ. ಸುರೇಶ್ ತಿಳಿಸಿದರು.