ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 
ರಾಜ್ಯ

ಏರ್‌ಪೋರ್ಟ್‌ನಲ್ಲಿ ಸೆ.1ರಿಂದ ಹೊಸ ದರ ಜಾರಿ: ಬಳಕೆದಾರರ ಅಭಿವೃದ್ಧಿ ಶುಲ್ಕ ಕಡಿತ - New Fare Implementation at Airport

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೆ.1ರಿಂದ ಹೊಸ ಶುಲ್ಕಗಳು ಜಾರಿಗೆ ಬರಲಿವೆ.

ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು (ಎಇಆರ್‌ಎ), 2026-27ರಿಂದ 2030-31ರ ನಾಲ್ಕನೇ ನಿಯಂತ್ರಣ ಅವಧಿಗೆ ಹೊಸ ಸುಂಕ ಆದೇಶ ಹೊರಡಿಸಿದ್ದು, ಒಟ್ಟಾರೆ ಬಳಕೆದಾರರ ಅಭಿವೃದ್ಧಿ ಶುಲ್ಕದಲ್ಲಿ ಕಡಿತವಾಗಲಿದ್ದು, ಇದರಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರಸ್ತುತ ಇರುವ ಬಳಕೆದಾರರ ಅಭಿವೃದ್ಧಿ ಶುಲ್ಕ ಮಾಸಾಂತ್ಯದವರೆಗೆ ಮುಂದುವರಿಯಲಿವೆ.
ಇಲ್ಲಿಯವರೆಗೆ ಕೇವಲ ನಿರ್ಗಮನ ಪ್ರಯಾಣಿಕರ ಮೇಲೆ ಮಾತ್ರ ವಿಧಿಸಲಾಗುತ್ತಿದ್ದ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ಇನ್ನುಮುಂದೆ ನಿರ್ಗಮನ, ಆಗಮನ ಪ್ರಯಾಣಿಕರಿಗೆ ಅನ್ವಯವಾಗಲಿದೆ. ದೇಶದ ಇತರ ಪ್ರಮುಖ ಮತ್ತು ನೂತನ ವಿಮಾನ ನಿಲ್ದಾಣಗಳಲ್ಲಿರುವ ಮಾದರಿಯನ್ನೇ ಇಲ್ಲೂ ಅಳವಡಿಸಲಾಗಿದೆ.
ನಿರ್ಗಮಿಸುವ ದೇಶೀಯ ಪ್ರಯಾಣಿಕರಿಗೆ 300 ರೂ., ಆಗಮಿಸುವ ಪ್ರಯಾಣಿಕರಿಗೆ 125 ರೂ. ಸೇರಿ ಒಟ್ಟು ಸಂಯೋಜಿತ ಶುಲ್ಕ 425 ರೂ. ಇರಲಿದೆ. ಪ್ರಸ್ತುತ ನಿರ್ಗಮಿಸುವ ಪ್ರಯಾಣಿಕರಿಂದ 550 ರೂ. ಪಡೆಯಲಾಗುತ್ತಿದ್ದು, ಹೊಸ ನಿಯಮದಿಂದ 125 ರೂ. ಉಳಿತಾಯವಾಗಲಿದೆ.
ನಿರ್ಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 997 ರೂ. ಮತ್ತು ಆಗಮಿಸುವ ಪ್ರಯಾಣಿಕರಿಗೆ 426 ರೂ. ಸೇರಿ ಒಟ್ಟು ಸಂಯೋಜಿತ ಶುಲ್ಕ 1,423 ರೂ. ಇರಲಿದೆ. ಪ್ರಸ್ತುತ ನಿರ್ಗಮಿಸುವ ಪ್ರಯಾಣಿಕರಿಂದ 1,500 ರೂ. ಪಡೆಯಲಾಗುತ್ತಿದ್ದು, ಹೊಸ ನಿಯಮದಿಂದ 77 ರೂ. ಉಳಿತಾಯವಾಗಲಿದೆ. ಈ ದರಗಳು 2029ರ ಆಗಸ್ಟ್‌ವರೆಗೆ ಜಾರಿಯಲ್ಲಿರುತ್ತದೆ. ಟರ್ಮಿನಲ್ 2ರ ಹಂತ-2 ಸೇರಿ ಇತರ ಪ್ರಮುಖ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡ ನಂತರ ಅಗತ್ಯಕ್ಕೆ ಅನುಗುಣವಾಗಿ ಶುಲ್ಕ ಮರುಪರಿಶೀಲಿಸಲಾಗುತ್ತದೆ.
ವಿಮಾನ ನಿಲ್ದಾಣದ ಟರ್ಮಿನಲ್​​​ನ 2ನೇ ಹಂತ, ಏರ್‌ಫೀಲ್ಡ್ ಕಾಮಗಾರಿಗಳು, ನೂತನ ಏಪ್ರಾನ್ ಹಾಗೂ ರಸ್ತೆ ಮೂಲಸೌಕರ್ಯಗಳ ವಿಸ್ತರಣೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಬೃಹತ್ ಹೂಡಿಕೆ ಮಾಡಿದೆ. ಹೊಸ ಯೋಜನೆಗಳು ಪೂರ್ಣಗೊಂಡು ಸಾರ್ವಜನಿಕರಿಗೆ ಮುಕ್ತವಾದ ಬಳಿಕ ಅವುಗಳಿಗೆ ಸಂಬಂಧಿಸಿದ ಹೆಚ್ಚುವರಿ ದರವನ್ನು ನಿಯಮದಂತೆ ಜಾರಿಗೆ ತರಲಾಗುವುದು. ಬೆಂಗಳೂರು ವಿಮಾನ ನಿಲ್ದಾಣ ವೇಗವಾಗಿ ಬೆಳೆಯುತ್ತಿದ್ದು, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ, ದಕ್ಷ ಮತ್ತು ಉತ್ತಮ ದರ್ಜೆಯ ಸೇವೆ ನೀಡಲು ಬದ್ಧರಾಗಿದ್ದೇವೆ ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.