ಸಾಂದರ್ಭಿಕ ಚಿತ್ರ 
ರಾಜ್ಯ

ನೀರಾವರಿ ವಲಯದಲ್ಲಿ 3 ತಿಂಗಳಲ್ಲಿ ಹೊಸ ಶಿಸ್ತು irrigation

ಪ್ರಮುಖ ಮುಖ್ಯಾಂಶಗಳು

  • ಅನುಷ್ಠಾನಕ್ಕೆ ಪೂರಕವಾಗಿ ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡುವ ಪ್ರಕ್ರಿಯೆಯೂ ಆರಂಭಗೊಂಡಿದೆ.
  • ಕಾರ್ಯಪಾಲಕ ಇಂಜಿನಿಯರ್‌ನಿಂದ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕಾದ ನಿಯಮ ಜಾರಿಗೆ ಬರಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
  • ನೀರಿನ ಕರ ಬಾಕಿ ಉಳಿಸಿಕೊಂಡರೆ ಅಥವಾ ಕಾಯ್ದೆ ಉಲ್ಲಂಘಿಸಿ ದಂಡ ತೆರಬೇಕಾಗಿ ಬಂದರೆ, ಆ ಮಾಹಿತಿಯನ್ನು ರೈತರ ಪಹಣಿಯಲ್ಲಿ ನಮೂದಿಸುವ ವ್ಯವಸ್ಥೆಯೂ ಜಾರಿಗೆ ಬರಲಿದೆ. 4. ಮುಂದಿನ ತಿಂಗಳ ಗಡುವಿನೊಳಗೆ ನಿಯಮಗಳು ಜಾರಿಗೆ ತರಬೇಕೆಂಬ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕಾಲುವೆಯಿಂದ ಅಕ್ರಮ ನೀರು ಬಳಕೆ ಹಾಗೂ ನೀರು ಕಳ್ಳತನಕ್ಕೆ ಬ್ರೇಕ್ ಹಾಕುವ ದಿಸೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ನೀರಾವರಿ ವಲಯದಲ್ಲಿ ಶಿಸ್ತು ತರುವ ದೊಡ್ಡ ಸಾಹಸಕ್ಕೆ ಸರ್ಕಾರ ಕೈಹಾಕಿದೆ.
ಜಲಸಂಪನ್ಮೂಲ ಇಲಾಖೆ ಮೂಲಕ ಜಾರಿಗೆ ತರಲಾಗಿರುವ ನೀರಾವರಿ ನೀತಿ ಮತ್ತು ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ 2024ರ ನಿಯಮಗಳನ್ನು ಮುಂಬರುವ ಮೂರು ತಿಂಗಳ ಒಳಗಾಗಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಜಲಸಂಪನ್ಮೂಲ ಇಲಾಖೆ ನಿರ್ಧರಿಸಿದೆ.
ಕಾಯ್ದೆ ಕಡ್ಡಾಯವಾಗಿ ಅನುಷ್ಠಾನಗೊಂಡರೆ ಆಗುವ ಮೊದಲ ಪ್ರಮುಖ ಬದಲಾವಣೆಯೆಂದರೆ, ಕಾಲುವೆಯ ಮಧ್ಯಭಾಗದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲದ ಬಳಕೆಗೆ ಸಂಪೂರ್ಣ ನಿಯಂತ್ರಣ ಬರಲಿದೆ. ಈ ವ್ಯಾಪ್ತಿಯಲ್ಲಿ ಹೊಸದಾಗಿ ಬಾವಿ ತೋಡಲು, ಕೊಳವೆಬಾವಿ ಕೊರೆಯಲು ಅಥವಾ ಕೃತಕ ನೀರಿನ ಸಂಗ್ರಹಣಾ ಹೊಂಡಗಳನ್ನು ನಿರ್ಮಿಸಲು ನೀರಾವರಿ ಅಧಿಕಾರಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗುತ್ತದೆ. ಅಷ್ಟೇ ಅಲ್ಲದೆ, ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲಾ ಅಂತರ್ಜಲ ಬಳಕೆದಾರರು ಮತ್ತು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳು 6 ತಿಂಗಳ ಒಳಗಾಗಿ ನೀರಾವರಿ ಅಧಿಕಾರಿಯ ಬಳಿ ತಮ್ಮ ಬೋರ್‌ವೆಲ್‌ಗಳನ್ನು ನೋಂದಣಿ ಮಾಡಿಸಬೇಕಾಗುತ್ತದೆ.
ಎರಡನೆಯದಾಗಿ, ಕಾಲುವೆಗಳಿಂದ ಪೈಪ್‌ಗಳನ್ನು ಕತ್ತರಿಸಿ ಅಕ್ರಮವಾಗಿ ಇಳಿಗೊಳವೆ ಮೂಲಕ ನೀರು ಕಳ್ಳತನ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆಗೆ ಸಂಪೂರ್ಣ ಅಧಿಕಾರ ಸಿಗಲಿದೆ. ಕಾಯ್ದೆಯ ಉಲ್ಲಂಘನೆ ಮಾಡುವವರಿಗೆ ವಿಧಿಸುವ ಶಿಕ್ಷೆಯನ್ನು 2 ವರ್ಷಗಳ ಜೈಲು ವಾಸಕ್ಕೆ ಹಾಗೂ ಜುಲ್ಮಾನೆಯನ್ನು ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ. ಜತೆಗೆ, ಅಕ್ರಮ ಎಸಗುವ ವ್ಯಕ್ತಿಗಳಿಗೆ ಕೃಷಿ ಮತ್ತಿತರ ಉದ್ದೇಶಗಳಿಗೆ ಸರಬರಾಜಾಗುವ ನೀರನ್ನು 1 ರಿಂದ 6 ತಿಂಗಳವರೆಗೆ ಸ್ಥಗಿತಗೊಳಿಸಲು ಮತ್ತು ಪದೇ ಪದೆ ತಪ್ಪು ಮಾಡುವವರನ್ನು 2 ವರ್ಷಗಳ ಕಾಲ ನೀರು ಪೂರೈಕೆ ಪ್ರದೇಶದಿಂದಲೇ (ಕಮಾಂಡ್ ಏರಿಯಾ) ಹೊರಗಿಡಲು ಕಾಯ್ದೆಯಲ್ಲಿ ಅವಕಾಶವಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.
ಮೂರನೆಯದಾಗಿ, ಈ ಅಕ್ರಮಗಳನ್ನು ತಡೆದು ತಕ್ಷಣವೇ ನಿರ್ಧಾರ ಕೈಗೊಳ್ಳಲು ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್ ದರ್ಜೆಗಿಂತ ಮೇಲ್ಪಟ್ಟ ಅಧಿಕಾರಿಗಳಿಗೆ ಅರೆ ನ್ಯಾಯಿಕ ಅಧಿಕಾರ ನೀಡಿ ನೀರಾವರಿ ನ್ಯಾಯಾಲಯಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇವು ಭಾರತೀಯ ನ್ಯಾಯ ಸಂಹಿತೆಯಡಿ ನ್ಯಾಯಿಕ ವ್ಯವಹರಣೆಗಳ ಅಧಿಕಾರ ಹೊಂದಿರಲಿವೆ. ಈ ನ್ಯಾಯಾಲಯಗಳಿಗೆ ಹಾಗೂ ಇಲಾಖೆಗೆ ನೆರವು ನೀಡಲು ಕರ್ನಾಟಕ ಪೊಲೀಸ್ ಅಥವಾ ರಾಜ್ಯ ಕೈಗಾರಿಕಾ ಭದ್ರತಾ ದಳವನ್ನು ಒಳಗೊಂಡ ವಿಶೇಷ ಕಾರ್ಯಪಡೆ ರಚಿಸಲಾಗುತ್ತಿದೆ. ಇದು ಅಕ್ರಮ ಎಸಗುವವರನ್ನು ವಶಕ್ಕೆ ಪಡೆಯುವ ಶಕ್ತಿ ಹೊಂದಿರಲಿದೆ.

ಟೇಲ್‌ಎಂಡ್ ರೈತರಿಗೆ ಅನುಕೂಲ ಆಗಬೇಕೆಂದು ಈ ಹಿಂದೆಯೇ ಕಾಯ್ದೆ ತಂದಿದ್ದರು, ಅದರ ಅನುಷ್ಠಾನಕ್ಕೆ ಸೂಚನೆ ಕೊಡಲಾಗಿದೆ. ಎಲ್ಲಾ ರೈತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.
- ರಾಮಲಿಂಗಾ ರೆಡ್ಡಿ, ಜಲಸಂಪನ್ಮೂಲ ಸಚಿವ