ವಿಜಯವಾಣಿ ಸಂವಾದದಲ್ಲಿ ಸಿ.ಎನ್.ಶಿವಪ್ರಕಾಶ್  
ರಾಜ್ಯ

ಕೆಪೆಕ್​ನಿಂದ ಹೊಸ ಉದ್ದಿಮೆ ಸ್ಥಾಪನೆ ಉದ್ಯೋಗ ಸೃಜನೆ; ವಿಜಯವಾಣಿ ಸಂವಾದದಲ್ಲಿ ಸಿ.ಎನ್.ಶಿವಪ್ರಕಾಶ್ ಹೇಳಿಕೆ

ಪಿಎಂಎಫ್​ಎಂಇ ಸಾಲ ವಿತರಣೆಯಲ್ಲಿ ರಾಜ್ಯ ಪ್ರಥಮ

ಬೆಂಗಳೂರು: ಆಹಾರ ಸಂಸ್ಕರಣೆ ಎಂಬುದು ಕೇವಲ ಶೀತಲ ಘಟಕ ಅಥವಾ ಗೋದಾಮು ಸ್ಥಾಪನೆಯಲ್ಲ. ಕೃಷಿ, ತೋಟಗಾರಿಕೆ, ಕುಕ್ಕುಟ, ಸಾಗರೋತ್ಪನ್ನಗಳನ್ನು ಪ್ರಾಥಮಿಕ ಹಂತದಿಂದ ಸಂಸ್ಕರಣೆ ಮೂಲಕ ಮೌಲ್ಯವರ್ಧನೆ ಮಾಡಿದಾಗ ಉತ್ತಮ ಬೆಲೆ ಸಿಗಲಿದೆ. ಜತೆಗೆ ಉದ್ಯೋಗ ಸೃಷ್ಟಿಯಾಗಿ ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗಲಿದೆ. ಈ ನಿಟ್ಟಿನಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್​ಎಂಇ)ಯೋಜನೆ ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾಗಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ(ಕೆಪೆಕ್) ಕೆಲಸ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಕ್ರಾಂತಿಯನ್ನೇ ಸೃಷ್ಟಿ ಮಾಡುವುದರ ಜತೆಗೆ ಕಿರು ಉದ್ದಿಮೆ ಮತ್ತು ಉದ್ಯೋಗ ಸೃಜಿಸಿರುವ ಬಗ್ಗೆ ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರು ‘ವಿಜಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾಹಿತಿ ಹಂಚಿಕೊಂಡರು.
ಪಿಎಂಎಫ್​ಎಂಇ ಯೋಜನೆಗೆ ಬಜೆಟ್​ನಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 206 ಕೋಟಿ ರೂ. ಮೀಸಲಿಡಲಾಗಿತ್ತು. ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆ/ಅಭಿವೃದ್ಧಿಗೆ ಶೇ.50 ಅಂದರೆ ಗರಿಷ್ಠ 15 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತಿದೆ. ಎಂಎಸ್​ಎಂಇ ಅಧ್ಯಯನದ ಪ್ರಕಾರ 1 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದರೆ ಕೇವಲ 7 ಜನಕ್ಕೆ ಕೆಲಸ ಸಿಗಲಿದೆ. ಆದರೆ, ಆಹಾರ ಸಂಸ್ಕರಣೆ ಘಟಕದಲ್ಲಿ 10 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದರೆ 7 ರಿಂದ 10 ಜನರಿಗೆ ನೌಕರಿ ಸಿಗಲಿದೆ. ಈ ಪ್ರಕಾರ ಪಿಎಂಎಫ್​ಎಂಇ ಯೋಜನೆಯಲ್ಲಿ ಈವರೆಗೂ 9,933 ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲಸೌಲಭ್ಯ ಕಲ್ಪಿಸಿದ್ದು, 70 ರಿಂದ 90 ಸಾವಿರ ಜನರಿಗೆ ನೌಕರಿ ಕಲ್ಪಿಸಿರುವುದು ಕೆಪೆಕ್ ಸಾಧನೆ ಎಂದು ಶಿವಪ್ರಕಾಶ್ ಮಾಹಿತಿ ನೀಡಿದರು.
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಆಹಾರ ಸಂಸ್ಕರಣೆ ಅಂದರೆ, ಮೌಲ್ಯವರ್ಧನೆ ಮಾಡುವುದು ಮುಖ್ಯವಾಗಲಿದೆ. ಕೃಷಿ, ತೋಟಗಾರಿಕೆ, ಸಾಗರೋತ್ಪನ್ನ, ಕುಕ್ಕುಟ ಯಾವುದೇ ಉತ್ಪನ್ನವನ್ನು ಪ್ರಾಥಮಿಕ ಹಂತದಿಂದ ಸಂಸ್ಕರಣೆ ಮಾಡಿ ಮತ್ತೊಂದು ರೂಪ ನೀಡಿದರೆ ಉತ್ತಮ ಬೆಲೆ ಸಿಗಲಿದೆ. ನೌಕರಿ ಸೃಷ್ಟಿಯಾಗಿ ಸರ್ಕಾರಕ್ಕೂ ತೆರಿಗೆ ಬರಲಿದೆ. ಪ್ರಾಥಮಿಕ ಹಂತದಲ್ಲಿ ಇರುವ ಆಹಾರ ಉತ್ಪನ್ನಗಳನ್ನು ಸಂಸ್ಕರಣೆ, ಮೌಲ್ಯವರ್ಧನೆ ಮಾಡಿದರೆ ಲಾಭಾಂಶದ ಜತೆಗೆ ಉದ್ಯೋಗ ಸೃಷ್ಟಿಸಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದರು.

ಕಾಮನ್ ಇನ್ಕ್ಯುಬೇಷನ್

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (ಎಂಒಎಫ್​ಪಿಐ) ವತಿಯಿಂದ ಕಾಮನ್ ಇನ್ಕ್ಯುಬೇಷನ್ ಕೇಂದ್ರ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ 2 ಕೋಟಿ ರೂ. ಅನುದಾನ ಸಿಗಲಿದ್ದು, ಇದನ್ನು ನೇರವಾಗಿ ಕೆಪೆಕ್ ಅನುಷ್ಠಾನ ಮಾಡಲಿದೆ. ವಿಶೇಷವಾಗಿ ಆಯಾ ಪ್ರದೇಶದಲ್ಲಿ ಬೆಳೆಯುವ ಬೆಳೆಗೆ ತಕ್ಕಂತೆ ಕಾಮನ್ ಇನ್ಕ್ಯುಬೇಷನ್ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಚಾಮರಾಜನಗರದಲ್ಲಿ ಅರಿಶಿಣ, ಹುಬ್ಬಳಿಯಲ್ಲಿ ಮೆಣಸಿನಕಾಯಿ, ಮಾಗಡಿಯಲ್ಲಿ ತೆಂಗಿನ ಕಾಯಿ ಇದೇ ರೀತಿಯಾಗಿ ಚಿಂತಾಮಣಿ ಸೇರಿ 14 ಕಡೆಗಳಲ್ಲಿ ಕಾಮನ್ ಇನ್ಕ್ಯುಬೇಷನ್ ಕೇಂದ್ರ ಸ್ಥಾಪಿಸಲಾಗುತ್ತದೆ. ಸ್ಥಳೀಯ ರೈತರು ತಾವು ಬೆಳೆದ ಬೆಳೆಯನ್ನು ತಂದು ಸಂಸ್ಕರಣೆ ಮಾಡುವುದರ ಜತೆಗೆ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸಬಹುದು. ಜತೆಗೆ ರೈತರಿಗೆ ಈ ಕೇಂದ್ರಗಳಲ್ಲಿ ತರಬೇತಿ ಸಹ ನೀಡಲಾಗುತ್ತಿದೆ. ಚಾಮರಾಜನಗರದಲ್ಲಿ ಸ್ಥಾಪನೆ ಮಾಡಿರುವ ಅರಿಶಿಣ ಘಟಕ ಉದ್ಪಾಟನೆಗೆ ಕೇಂದ್ರ ಸಚಿವರು ಬರಲಿದ್ದಾರೆ ಎಂದು ಸಿ.ಎನ್. ಶಿವಪ್ರಕಾಶ್ ತಿಳಿಸಿದರು.

ಕರ್ನಾಟಕದಲ್ಲಿ ಕಂದು ಕ್ರಾಂತಿ

ಭಾರತದ ಉದ್ದಿಮೆಯಲ್ಲಿ ಸಿರಿಧಾನ್ಯ, ಗಾಣದ ಎಣ್ಣೆ, ಬೆಲ್ಲ, ಮಸಾಲ ಪದಾರ್ಥ ಸಂಸ್ಕರಣೆ ಮೂಲಕ ಮೌಲ್ಯವರ್ಧನೆ ಮಾಡಿ ಕರ್ನಾಟಕ ಸೈಲೆಂಟ್ ಆಗಿ ‘ಕಂದು ಕ್ರಾಂತಿ’ಯನ್ನೇ ಮಾಡಿದೆ. ಈ ಕಂದು ಕ್ರಾಂತಿಯ ಉತ್ಪನ್ನಗಳನ್ನು ಪ್ರತಿಯೊಬ್ಬರೂ ಬಳಸಿದರೆ ಅವರ ಆಯಸ್ಸು ಮತ್ತು ಆರೋಗ್ಯ 10 ವರ್ಷ ಹೆಚ್ಚಾಗಲಿದೆ ಎಂಬ ಮಾತಿದೆ ಎಂದು ಶಿವಪ್ರಕಾಶ್ ಹೇಳಿದರು.

ಬ್ರ್ಯಾಂಡಿಂಗ್, ಮಾರುಕಟ್ಟೆಗೆ ಸಹಾಯ

ರೈತ ಉತ್ಪಾದಕರ ಸಂಸ್ಥೆಗಳು/ಕಂಪನಿಗಳು, ಸಹಕಾರಿಗಳು, ಸ್ವ-ಸಹಾಯ ಸಂಘಗಳು, ಸರ್ಕಾರಿ ಸಂಸ್ಥೆಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ವಿಶೇಷ ಉದ್ದೇಶ ಸಂಸ್ಥೆ (ಎಸ್​ಪಿವಿಎಸ್) ಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರ್ಯಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಇತ್ಯಾದಿಗಳಿಗೆ ಎಂಒಎಫ್​ಪಿಐ ಅನುಮೋದಿಸಿದ ಯೋಜನಾ ವೆಚ್ಚದ ಶೇ.50 ಸಹಾಯಧನ ದೊರೆಯಲಿದೆ ಎಂದು ಕೆಪೆಕ್ ಎಂಡಿ ಶಿವಪ್ರಕಾಶ್ ಮಾಹಿತಿ ನೀಡಿದರು.

ಜಿಐ ಟ್ಯಾಗಿಂಗ್ ಬಳಸಿ

ಕೆಪೆಕ್​ನಿಂದ ಸಹಾಯ ಪಡೆದಿರುವ ಆಹಾರ ಸಂಸ್ಕರಣಾ ಘಟಕಗಳ ಪದಾರ್ಥಗಳಿಗೆ ಜಿಐ ಟ್ಯಾಗ್ ಪಡೆಯಲು ಶಿಫಾರಸು ಮಾಡಲಿದೆ. ಜನರು ಸಹ ಜಿಎ ಟ್ಯಾಗ್ ಪಡೆದಿರುವ ಪದಾರ್ಥಗಳನ್ನು ಖರೀದಿಸಿ ಪ್ರೋತ್ಸಾಹ ಕೊಡಬೇಕು. ಏಕೆಂದರೆ ಜಿಐ ಟ್ಯಾಗ್ ಕೊಡಬೇಕಾದರೆ ಯಾವ ಪ್ರದೇಶದಲ್ಲಿ ಬೆಳೆಯಲಾಗಿದೆ, ಯಾವ ರೀತಿ ಸಂಸ್ಕರಿಸಲಾಗಿದೆ ಎಂಬುದು ಮುಖ್ಯವಾಗಲಿದೆ. ಜಿಐ ಟ್ಯಾಗ್ ಕೊಡುವಾಗ ಷರತ್ತು ಇರಲಿದೆ. ಅದನ್ನು ಪಾಲನೆ ಮಾಡಿದಾಗ ಮಾತ್ರ ಸಿಗಲಿದೆ. ಜಿಐ ಟ್ಯಾಗ್​ನಿಂದ ಉತ್ಪನ್ನದ ಮಹತ್ವ ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ಮಹತ್ವ ವೃದ್ಧಿಸಲಿದೆ.

ಸಾಲಸೌಲಭ್ಯದಲ್ಲಿ ಮುಂದು

ಪಿಎಂಎಫ್​ಎಂಇ ಯೋಜನೆಯಲ್ಲಿ ಈ ಬಾರಿ 207 ಕೋಟಿ ರೂ. ಅನುದಾನ ನೀಡಿದ್ದು, ಈಗಾಗಲೇ 500 ಅರ್ಜಿಗಳು ಸಲ್ಲಿಕೆಯಾಗಿವೆ. ಇಲ್ಲಿ ಅರ್ಜಿಗಳ ಆಹ್ವಾನ ಅಥವಾ ವಿಲೇವಾರಿ ಮಾಡುವುದು ಮುಖ್ಯವಲ್ಲ. ಬಂದಿರುವ ಅರ್ಜಿಗಳಲ್ಲಿ ಎಷ್ಟು ಜನರಿಗೆ ಪಿಎಂಎಫ್​ಎಂಇ ಯೋಜನೆಯಲ್ಲಿ ಸಾಲಸೌಲಭ್ಯ ಲಭಿಸಿ ಅವರು ಆಹಾರ ಸಂಸ್ಕರಣ ಘಟಕ ಸ್ಥಾಪನೆ ಮಾಡಿದ್ದಾರೆ ಎಂಬುದು ಮುಖ್ಯವಾಗಿದ್ದು, ಇದರಲ್ಲಿ ಕಳೆದ ಎರಡು ವರ್ಷದಲ್ಲಿ ಶೇ. 96ರಷ್ಟು ಸಾಲ ವಿತರಣೆ ಮೂಲಕ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

ಕೃಷಿ ಸಚಿವ ಚಲುವರಾಯಸ್ವಾಮಿ ಕಳಕಳಿ

ಕೆಪೆಕ್ ಸಂಸ್ಥೆಯನ್ನು ವಾಣಿಜ್ಯವಾಗಿ ಅಭಿವೃದ್ಧಿ ಪಡಿಸಬೇಕೆಂಬುದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಉದ್ದೇಶವಾಗಿತ್ತು. ಅದಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆಯಿಂದ ನನ್ನನ್ನು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾಗಿ ಮಾಡಿದರು. ರೈತರ ಮಕ್ಕಳು ನೌಕರಿ ಕೊಡಿಸುವಂತೆ ಬರುತ್ತಾರೆ. ಇಂದಿನ ಕಾಲಘಟ್ಟದಲ್ಲಿ ನೌಕರಿ ಕೊಡಿಸುವುದು ಕಷ್ಟಸಾಧ್ಯವಾಗುತ್ತಿದೆ. ಅವರು ಸ್ವಂತ ಕಾಲ ಮೇಲೆ ನಿಲ್ಲಬೇಕು, ಜತೆಗೆ ಅವರೇ ನೌಕರಿ ಸೃಷ್ಟಿಸುವಂತೆ ಬೆಳೆಯಬೇಕು. ಅದಕ್ಕಾಗಿ ಕೆಪೆಕ್​ನಿಂದ ಸೌಲಭ್ಯ ಒದಗಿಸಬೇಕು ಎಂದು ಸೂಚನೆ ನೀಡಿದ್ದರು. ಈ ಉದ್ದೇಶದಿಂದ ಪಿಎಂಎಫ್​ಎಂಇ ಯೋಜನೆಯಿಂದ ಸಾಕಷ್ಟು ಯುವಕರಿಗೆ ಅನುಕೂಲವಾಗಿದೆ. ಸಚಿವ ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೆಪೆಕ್ ಇನ್ನಷ್ಟು ಯೋಜನೆಗಳನ್ನು ರೂಪಿಸಲಿದೆ ಎಂದು ಸಿ.ಎನ್. ಶಿವಪ್ರಕಾಶ್ ತಿಳಿಸಿದರು.

ಯಾವ ಘಟಕ ಸ್ಥಾಪಿಸಬಹುದು..?

ವೈಯಕ್ತಿಕ ಉದ್ದಿಮೆದಾರರು, ಪಾಲುದಾರಿಕೆ ಸಂಸ್ಥೆಗಳು, ಖಾಸಗಿ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದಾರೆ. ಪಿಎಂಎಫ್​ಎಂಇ ಯೋಜನೆಯಡಿ ಆಹಾರ ಸಂಸ್ಕರಣಾ, ಮೌಲ್ಯವರ್ಧನಾ ಘಟಕಗಳು, ಪಶು ಮತ್ತು ಕುಕ್ಕುಟ ಆಹಾರ ಘಟಕಗಳನ್ನು ಸ್ಥಾಪಿಸಬಹುದು. ಉದಾಹರಣೆಗೆ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ ಉತ್ಪಾದನೆ, ಎಣ್ಣೆ ಗಾಣಗಳು, ಬೇಕರಿ ಉತ್ಪನ್ನಗಳು, ಮಸಾಲ ಪುಡಿ ಘಟಕಗಳು, ಶುಂಠಿ ಸಂಸ್ಕರಣೆ, ತೆಂಗಿನ ಉತ್ಪನ್ನ, ವಿವಿಧ ಹಣ್ಣು- ತರಕಾರಿ ಉತ್ಪನ್ನ, ಸಾಗರೋತ್ಪನ್ನಗಳ ಇತ್ಯಾದಿ ಪದಾರ್ಥಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.

18 ವರ್ಷ ಮೇಲ್ಪಟ್ಟವರು ಸೌಲಭ್ಯಕ್ಕೆ ಅರ್ಹರು

ಪಿಎಂಎಫ್​ಎಂಇ ಯೋಜನೆ ಸೌಲಭ್ಯ ಪಡೆಯಲು 18 ವರ್ಷ ಮೇಲ್ಪಟ್ಟವರು ಅರ್ಹರಾಗಿದ್ದಾರೆ. ಇವರಿಗೆ ಯಾವುದೇ ಕನಿಷ್ಠ ವಿದ್ಯಾರ್ಹತೆ ಬೇಕಿಲ್ಲ. ಆದರೆ, ಬ್ಯಾಂಕ್​ನಲ್ಲಿ ಸಾಲ ಪಡೆದು ಸುಸ್ತಿದಾರ ಆಗಿರಬಾರದು. ಉಳಿದಂತೆ ಸಿಬಿಲ್ ಸ್ಕೋರ್ ಲೆಕ್ಕಚಾರ ಇರುವುದಿಲ್ಲ. ಆಧಾರ್, ಪಾನ್, ಪಡಿತರ ಚೀಟಿ, ವಿದ್ಯುತ್ ಬಿಲ್, ಫೋಟೋ, 6 ತಿಂಗಳ ಬ್ಯಾಂಕ್ ವಹಿವಾಟು ಮಾಹಿತಿ, ಯಂತ್ರೋಪಕರಣಗಳ ವಿವರ ಮತ್ತು ಕೊಟೇಷನ್, ಬಾಡಿಗೆ/ಲೀಸ್ ಕರಾರುಪತ್ರ ಮತ್ತು ಸ್ಥಾಪಿಸಬೇಕಿರುವ ಉದ್ದಿಮೆಯ ವಿವರ ನೀಡಿದರೆ ಸಾಲಸೌಲಭ್ಯ ಸಿಗಲಿದೆ. ಹೊಸ ಯಂತ್ರ, ಸಿವಿಲ್ ಕಾಮಗಾರಿ, ಸಲಕರಣೆಗೆ ಸಾಲ ಕೊಡಲಾಗುತ್ತದೆ. ಹಳೆಯ ಘಟಕಕ್ಕೆ ಸಾಲ ಸಿಗುವುದಿಲ್ಲ. ಸಾಲಸೌಲಭ್ಯ ಕಲ್ಪಿಸಲು ಎಲ್ಲ ಜಿಲ್ಲೆಗಳಲ್ಲೂ 600 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು (ಡಿಆರ್​ಪಿ) ಇದ್ದು, ಖುದ್ದು ಅವರೇ ಬಂದು ಬ್ಯಾಂಕ್​ನಿಂದ ಸಾಲಸೌಲಭ್ಯ ಸಿಗುವವರೆಗೂ ಸಹಾಯ ಮಾಡುತ್ತಾರೆ.

ರಫ್ತು ಮಾಡಲು ಸಹಕಾರ

ಕೆಪೆಕ್​ನಲ್ಲಿ ರಫ್ತು ಘಟಕವಿದ್ದು, ಇಲ್ಲಿನ ಆಹಾರ ಪದಾರ್ಥಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಹಾಯ ಮಾಡಲಿದೆ. ಇದಕ್ಕಾಗಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಪ್ಲಾಂಟೇಷನ್ ಸಿಸ್ಟಮ್ಸ್ ಅವರು ಸಂದರ್ಶನ ಮಾಡಿ ಮೂರು ಜನರನ್ನು ಸಂಪನ್ಮೂಲ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ಕಳುಹಿಸುತ್ತಾರೆ. ಅವರು ವಿಷಯ ತಜ್ಞರಾಗಿದ್ದು, ರಫ್ತು ಮಾಡಲು ಸಹಾಯ ಮಾಡುತ್ತಾರೆ. ಯಾವುದೇ ಷರತ್ತು ಇರುವುದಿಲ್ಲ. ಮಾಹಿತಿ, ಅರಿವು ಮೂಡಿಸುವುದೇ ಇವರ ಕೆಲಸವಾಗಿದೆ.

ಕೋಲ್ಡ್ ಸ್ಟೋರೇಜ್​ಗೆ ಹೆಚ್ಚಿನ ಬೇಡಿಕೆ

ರಾಜ್ಯದಲ್ಲಿ 7 ಕೋಲ್ಡ್ ಸ್ಟೋರೇಜ್​ಗಳನ್ನು ಕೆಪೆಕ್ ನಿರ್ವಹಣೆ ಮಾಡುತ್ತಿದೆ. 20 ಕಡೆಗಳಲ್ಲಿ ಸ್ಥಾಪನೆಗೆ ಬೇಡಿಕೆ ಬಂದಿದೆ. ಪ್ರಸ್ತುತ 12 ಕಡೆ ಸ್ಥಾಪಿಸಲು ಕಂದಾಯ ಇಲಾಖೆಗೆ ಭೂಮಿ ಕೊಡುವಂತೆ ಮನವಿ ಮಾಡಿದ್ದೇವೆ. ನಾಗಮಂಗಲ, ಚಿಕ್ಕಮಗಳೂರಿನಲ್ಲಿ ಭೂಮಿ ಲಭಿಸಿದೆ. ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರು 20 ಎಕರೆ ಭೂಮಿ ಗುರುತಿಸಿದ್ದಾರೆ. 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಹೊಸಕೋಟೆಗೆ ತರಕಾರಿ, ಹಣ್ಣು ಸರಬರಾಜಿಗೆ ಹೆಬ್ಬಾಗಿಲು ಆಗಿದ್ದು, ಇಲ್ಲಿ ಅತ್ಯಗತ್ಯವಾಗಿದೆ.