ಸದ್ಯದಲ್ಲೇ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪನೆ
ಬೆಂಗಳೂರು: ಅಮೆರಿಕದ ಸಂಶೋಧನಾ ವಿಶ್ವವಿದ್ಯಾಲಯವಾಗಿರುವ ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್‌ನ ಪಾಲುದಾರಿಕೆಯಡಿ ಗೋಕುಲ ಶಿಕ್ಷಣ ಪ್ರತಿಷ್ಠಾನವು (ವೈದ್ಯಕೀಯ), ಬೆಂಗಳೂರಿನಲ್ಲಿ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ( ಆರ್‌ಐಎಸ್‌ಎಂ) ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದೆ.
ಶೈಕ್ಷಣಿಕ ಕ್ಷೇತ್ರವನ್ನು ವಾಸ್ತವ ಜಗತ್ತಿಗೆ ಹೆಚ್ಚು ಪ್ರಸ್ತುತಗೊಳಿಸುವ ಮತ್ತು ಭವಿಷ್ಯದ ಕೌಶಲಗಳ ಜೊತೆಗೆ ಸಂಪರ್ಕ ಸೇತುವೆ ನಿರ್ಮಿಸುವ ಮಹತ್ವದ ನಿರ್ಧಾರದಲ್ಲಿ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ರಾಮಯ್ಯ ಸ್ಮಾರಕ ಆಸ್ಪತ್ರೆ ನಿರ್ವಹಿಸುವ ಗೋಕುಲ ಶಿಕ್ಷಣ ಪ್ರತಿಷ್ಠಾನವು (ವೈದ್ಯಕೀಯ) ಹೊಸ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪಿಸಲಿದೆ.
ಮುಂದಿನ ಪೀಳಿಗೆಯ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ (ಎಸ್‌ಟಿಇಎಂ) ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯಾಗಲಿರುವ ಆರ್‌ಐಎಸ್‌ಎಂ, ಸಂಶೋಧನೆ ಮತ್ತು ವಾಸ್ತವ ಜಗತ್ತಿಗೆ ಹೆಚ್ಚು ಸ್ಪಂದಿಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಕ್ಕೆ ಹೆಚ್ಚು ಒತ್ತು ನೀಡಲಿದೆ. ಜಾಗತಿಕವಾಗಿ ಮಾನದಂಡಗಳಿಗೆ ಅನುಗುಣವಾದ, ಉದ್ಯಮ ವಲಯಕ್ಕೆ ಹೆಚ್ಚು ಪ್ರಯೋಜನಕಾರಿಯಾದ ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡಲಿದೆ.
ಈ ಸ್ವಾಯತ್ತ ವಿಶ್ವವಿದ್ಯಾನಿಲಯವು ತನ್ನ ಮೊದಲ ಶೈಕ್ಷಣಿಕ ವರ್ಷವನ್ನು 2026ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಿದೆ. ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಆರು ದಶಕಗಳಿಗೂ ಹೆಚ್ಚಿನ ಶ್ರೇಷ್ಠತೆ ಕಟ್ಟಿ ಬೆಳೆಸಿರುವುದನ್ನು ಆಧರಿಸಿ, ಗೋಕುಲ ಶಿಕ್ಷಣ ಪ್ರತಿಷ್ಠಾನವು (ವೈದ್ಯಕೀಯ) ಆರ್‌ಐಎಸ್‌ಎಂ ಮೂಲಕ ಶಿಕ್ಷಣ ಕ್ಚೇತ್ರದಲ್ಲಿನ ತನ್ನ ಅನುಭವವನ್ನು ವಿಸ್ತರಿಸಲು ಮುಂದಾಗಿದೆ.
ಜಾಗತಿಕ ಮಾನದಂಡಗಳು, ಮಾರುಕಟ್ಟೆ ಮತ್ತು ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು , ಉದ್ಯಮ-ಸಮನ್ವಯ ವಿಧಾನದೊಂದಿಗೆ ಉನ್ನತ ಶಿಕ್ಷಣವನ್ನು ಮರುರೂಪಿಸುತ್ತಿದೆ. ಈ ವಿಶ್ವವಿದ್ಯಾನಿಲಯವು ಇಂಜಿನಿಯರಿಂಗ್, ಬಿಸಿನೆಸ್, ವಿಜ್ಞಾನ ವಿಭಾಗಗಳಲ್ಲಿ ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ಒದಗಿಸಲಿದೆ.