Bengaluru footpath issues 
ರಾಜ್ಯ

'ನಾಚಿಕೆ, ಮಾನ ಮರ್ಯಾದೆ ಇದ್ಯಾ?, ಮೊದ್ಲು ಫುಟ್‌ಪಾತ್ ದುರಸ್ತಿ ಮಾಡಿ'; GBA ಹಾಕಿದ್ದ ವಾಕಿಂಗ್​ ಸವಾಲಿಗೆ ನೆಟ್ಟಿಗರಿಂದ ಫುಲ್​​ ಕ್ಲಾಸ್

ಬೆಂಗಳೂರು: ನಗರದ ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು, ದೈಹಿಕವಾಗಿ ಸದೃಢವಾಗಿರಲು ನಾಗರಿಕರು ಆಟೋ ರಿಕ್ಷಾ, ಖಾಸಗಿ ವಾಹನ ಬಳಕೆ ಮಾಡುವ ಬದಲು, ಒಂದು ಕಿಲೋ ಮೀಟರ್​ ನಡೆದುಕೊಂಡೆ ಹೋಗಿ ಎಂದು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (Greater Bengaluru Authority)ಸದ್ಯ ಪೇಚಿಗೆ ಸಿಲುಕಿದೆ.
ಹೌದು, ಒಂದು ಕಿಲೋ ಮೀಟರ್​ಗೆ ಆಟೋ, ಸ್ಕೂಟರ್​ ಬುಕ್​ ಮಾಡಿಕೊಂಡು ಹೋಗುವ ಬದಲಿಗೆ ನಡೆದು ಹೋಗಿ. ನಿಮ್ಮ ಸ್ನೇಹಿತರಿಗೆ ಈ ಜೂನ್​ ಮಾಸದಲ್ಲಿ ಒಂದು ಕಿಲೋ ಮೀಟರ್​ ನಡೆಯುವ ಸವಾಲು ಹಾಕಿ ಎಂದು Greater Bengaluru Authority (GBA) ಶನಿವಾರ ವಿಡಿಯೋ ಹಂಚಿಕೊಂಡಿದೆ. ಪೋಸ್ಟ್ ವೈರಲ್​ ಆಗುತ್ತಲೇ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ರಸ್ತೆಗುಂಡಿ, ಫುಟ್​ಪಾತ್​ ಮುಚ್ಚಿ, ರಸ್ತೆ ಬದಿ ನಿಂತಿರುವ ವಾಹನವನ್ನು ಕ್ಲಿಯರ್​ ಮಾಡಿ ಎಂದು ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ.

ಜಿಬಿಎ ಹಂಚಿಕೊಂಡಿರುವ ವಿಡಿಯೋದಲ್ಲಿ ಏನಿದೆ?

ರಾಮಯ್ಯ ಕಾನೂನು ಕಾಲೇಜಿನ ಬಳಿ ವಿದ್ಯಾರ್ಥಿಗಳು ನಟಿಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಜಿಬಿಎ, ಇದರಲ್ಲಿ ಸ್ನೇಹಿತೆ ತನ್ನ ಸ್ನೇಹಿತನಿಗೆ ಕೊಂಚ ದೂರ ನಡೆಯಲು ವಾಹನ ಯಾಕೆ ಬುಕ್​ ಮಾಡುತ್ತಿದ್ದೀಯಾ? ನಡೆದುಕೊಂಡೆ ಹೋಗೋಣ ಎಂದು ಹೇಳಿದ್ದಾರೆ. ಇದಕ್ಕೆ ಜಿಬಿಎ ಶೀರ್ಷಿಕೆ ಕೊಟ್ಟಿರುವುದು ಹೀಗೆ..
1 ಕಿ.ಮೀ.ಗಿಂತ ಕಡಿಮೆ ದೂರಕ್ಕೆ, ನಮ್ಮಲ್ಲಿ ಅನೇಕರು ಇನ್ನೂ ಆಟೋವನ್ನು ಆಯ್ಕೆ ಮಾಡುತ್ತಾರೆ. ಆದರೆ ಇದರಿಂದ ಟ್ರಾಫಿಕ್​, ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಅಂತವರಿಗೆ ಜೂನ್​ನಲ್ಲಿ ಒಂದು ಕಿಲೋ ಮೀಟರ್​ ನಡೆಯುವ ಚಾಲೆಂಜ್​ ಮಾಡಿ. ಆಟೋ ಬುಕ್ ಮಾಡುವ ಮೊದಲು, ಮಾಲಿನ್ಯ ಹೆಚ್ಚಾಗುವ ಬಗ್ಗೆ, ಗಾಡಿ ಬಿಟ್ಟು ನಡೆಯುವುದರಿಂದ ನಿಮ್ಮ ಆರೋಗ್ಯ ವೃದ್ಧಿಸುವ ಬಗ್ಗೆ ಚಿಂತಿಸಿ ಎಂದು ಪೋಸ್ಟ್​ ಹಂಚಿಕೊಂಡಿದೆ. ಇದಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಲಾಗಿತ್ತು.

ಬೆಂಗಳೂರಿಗರು ಏನಂತಿದ್ದಾರೆ?

ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಬೆಂಗಳೂರಿನಲ್ಲಿ 100 ಮೀಟರ್ ನಡೆಯಲು ಸರಿಯಾದ ಫುಟ್​ಪಾತ್​ ಇಲ್ಲ. ಒಂದೆಡೆ ಕಸ ತುಂಬಿದ್ದರೆ, ಮತ್ತೊಂದು ಕಡೆ ಗುಂಡಿ ಬಿದ್ದಿರುತ್ತದೆ. ಇನ್ನೊಂದು ಕಡೆ ವಾಹನಗಳು ನಿಂತಿರುತ್ತದೆ. ಮೊದಲು ದುರಸ್ತಿ ಮಾಡಿ ಎಂದು ಶ್ರೀ ಎನ್ನುವವರು ಟ್ವೀಟ್ ಮಾಡಿದ್ದಾರೆ.
ತುಂಬಾ ಒಳ್ಳೆಯ ಆಲೋಚನೆ. ಆದರೆ ಫುಟ್‌ಪಾತ್‌ಗಳು ಕಸದ ರಾಶಿ, ವೆಹಿಕಲ್ ಪಾರ್ಕಿಂಗ್, ರೆಸ್ಟೋರೆಂಟ್‌ಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ಮುಕ್ತವಾಗಿ ಇದೆಯಾ ಅನ್ನೋದು ಮೊದಲು ನೋಡಿ ಎಂದು ಸಲಹೆ ಕೊಟ್ಟಿದ್ದಾರೆ

ಮೊದಲು ರಸ್ತೆ ಸರಿಮಾಡ್ರಪ್ಪ

ಏನ್​ ಜೋಕ್​ ಗುರು ಬೆಂಗಳೂರಿನಲ್ಲಿ ಎಲ್ಲಿಯಾದರೂ 1 ಕಿ.ಮೀ. ಪಾದಚಾರಿ ಮಾರ್ಗ ನೆಟ್ಟಿಗಿದ್ಯಾ?. ತುಂಬಾ ಸ್ವಚ್ಛತೆಯಿಂದ ಇರುವ ಫುಟ್​ಪಾತ್​ ಎಲ್ಲಾದರೂ ಇದ್ದರೆ ನನಗೆ ತೋರಿಸಿ ಎಂದು ಕಿಡಿಕಾರಿದ್ದಾರೆ
ಹಾಗದೂರು ಮುಖ್ಯರಸ್ತೆ ಮತ್ತು ಇಮ್ಮಡಿಹಳ್ಳಿ ಮುಖ್ಯರಸ್ತೆಯ ನಿವಾಸಿಯೊಬ್ಬರು, ನನ್ನ ಏರಿಯಾದಲ್ಲಿ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ದೊಡ್ಡ ಗುಂಡಿಗಳಿವೆ. ಇದು ಪ್ರಿಸ್ಕೂಲ್‌ನಿಂದ ಕೇವಲ 130 ಮೀಟರ್ ದೂರದಲ್ಲಿದೆ. ಮಕ್ಕಳು ಮತ್ತು ಹಿರಿಯರಿಗೆ ಇರುವ ಅಪಾಯ ಕಣ್ಣಿಗೆ ಕಾಣಿಸುತ್ತಿದೆ, ಮೊದಲು ಇದನ್ನು ಸರಿಪಡಿಸಿ ಎಂದಿದ್ದಾರೆ, (ಏಜೆನ್ಸೀಸ್).