ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಸುರಿದ ಮಳೆಯಿಂದ ಹೊಲವೊಂದರಲ್ಲಿ ನಿಂತಿರುವ ನೀರು.
- ವರುಣಾರ್ಭಟಕ್ಕೆ ಆಗುಂಬೆಯಂತಾದ ಗಿರಿ ಜಿಲ್ಲೆ
- ಮನೆ ಕುಸಿತ, ಟಿಸಿಗಳು ಭಸ್ಮ
- ಸಿಡಿಲಿಗೆ ಒಬ್ಬ ಬಲಿ
ಯಾದಗಿರಿ: ಮಳೆಗಾಲ ಆರಂಭದ 13 ದಿನ ಮುಂಚೆಯೇ ಗಿರಿ ಜಿಲ್ಲೆಯಲ್ಲಿ ಭಾರಿ ಅಕಾಲಿಕ ಮಳೆಯಾಗಿದ್ದು, ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮಂಗಳವಾರ ರಾತ್ರಿ ಮಧ್ಯರಾತ್ರಿ ಶುರುವಾದ ಮಳೆ ನಾಲ್ಕು ತಿಂಗಳ ಭಯಂಕರ ಮತ್ತು ಕೆಂಡದಂತಹ ಬಿಸಿಲನ್ನೇ ಹೊಸಕಿ ಹಾಕಿದೆ. ಅಣಬಿ ಹತ್ತಿರದ ರೋಜಾದಲ್ಲಿ ಮರದ ಕೆಳಗೆ ನಿಂತಿದ್ದ ತೌಕಲ್ ಪಟೇಲ್ (42) ಎಂಬುವರು ಸಿಡಿಲಿಗೆ ಬಲಿಯಾಗಿದ್ದರೆ, ಯರಗೋಳದಲ್ಲಿ ಎತ್ತೊಂದು ಸಿಡಿಲಿನಿಂದ ಅಸುನೀಗಿದೆ. ವಿವಿಧಡೆ ಐದು ಮನೆ ಕುಸಿದಿದ್ದು, 10 ವಿದ್ಯುತ್ ಪರಿವರ್ತಕಗಳು ಸುಟ್ಟಿವೆ.
ಒಂದು ದಿನ ಹಿಂದಷ್ಟೇ ಸೂರ್ಯದೇವ ಬೆಂಕಿ ಉಂಡೆ ಉಗಿಯುವ ಮೂಲಕ ಬೆವರಿನ ಸ್ನಾನ ಮಾಡಿಸಿದ್ದ. ಆದರೆ ಮಂಗಳವಾರ ಸಂಜೆ ವೇಳೆ ಮೋಡಕವಿದ ವಾತಾವರಣ ಮೂಡಿ ರಾತ್ರಿಯಾಗುತ್ತಲೇ ಗುಡುಗು, ಸಿಡಿಲಾರ್ಭಟ ಮತ್ತು ಸುಂಟರಗಾಳಿ ಬೀಸಿ ಮುಗಿಲಿನಲ್ಲಿ ತಡೆಹಿಡಿದಿದ್ದ ನೀರು ಮಳೆ ರೂಪದಲ್ಲಿ ಸುಮಾರು ಎಂಟು ತಾಸು ನೆಲಕ್ಕೆ ಅಪ್ಪಳಿಸಿತೋ ಮುಗಿಲ ರವಿ (ಸೂರ್ಯ) ಅವಿತುಕೊಂಡಿದ್ದರಿಂದ ಬೆಳಗ್ಗಿನ ಜಾವ ಕತ್ತಲು ಆವರಿಸಿ ದಿನಚರಿಯೇ ಬದಲಾಯಿತು.
ನಾಲ್ಕು ತಿಂಗಳು ಬಿಸಿಲಿಗೆ ಮೈಯೊಡ್ಡಿದ್ದ ಜನ&ಜಾನುವಾರುಗಳು, ಅಸಂಖ್ಯ ಜೀವಚರಗಳು ತಂಪಿಗೆ ಮನಸೋತರೆ, ಹೊಲ&ಗದ್ದೆಗಳು ಜಲಾವೃತಗೊಂಡವು. ನಾಲ್ಕು ತಿಂಗಳು ಹುಡುಕಾಡಿ ಜಲ ಸೇವನೆ ಮಾಡುತ್ತಿದ್ದ ಮೂಕ ಜೀವಗಳು (ಜಾನುವಾರು, ಪ್ರಾಣಿ&ಪ, ಕ್ರಿಮಿಗಳು) ಈಗ ಎಲ್ಲಿ ಬಾಯಿ ಹಾಕಿದರೂ ನೀರೇ ನೀರು ಎಂಬ ವಾತಾವರಣ ಬುಧವಾರ ಕಂಡಿತು.
ನೆಲಕ್ಕುರುಳಿದ 300 ಕಂಬ, 75 ಟಿಸಿ ಢಮಾರ್
ನಗರ ಸೇರಿ ನೂರಾರು ಹಳ್ಳಿಗಳಲ್ಲಿ ಈ ಔಖಳಿ ಬಿರುಗಾಳಿ ಮಳೆಯಿಂದಾಗಿ 300ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ತಂತಿಗಳು ಎಲ್ಲೆಂದರಲ್ಲಿ ಜೋತು ಬಿದ್ದಿವೆ. ಇದುವರೆಗೆ 75 ಹೆಚ್ಚು ಟಿಸಿಗಳು ಸುಟ್ಟಿವೆ. ಹತ್ತು ಜಾನುವಾರುಗಳು ಸಿಡಿಲಿಗೆ ಬಲಿಯಾಗಿವೆ. 25 ಮನೆ ಕುಸಿದಿವೆ. ನಿರಂತರ ಮಳೆಗೆ ನೀರು ಮನೆ, ಮಳಿಗೆ ಹೊಕ್ಕು ಲಾಂತರ ರೂ. ಮೌಲ್ಯದ ದವಸ&ಧಾನ್ಯ ಹಾಳಾಗಿದೆ. ಟಿವಿ,ಫ್ಯಾನ್, ಎಸಿ, ವಾಶಿಂಗ್ ಮಷಿನ್ಗಳು ಕೆಟ್ಟು ಹೋಗಿವೆ.
ಮೂರು ದಿನ ಹಿಂದೆ ಸುರಿದ ಒಂದೆರೆಡು ತಾಸಿನ ಮಳೆಗೆ 50ಕ್ಕೂ ಹೆಚ್ಚು ಊರುಗಳು ಕಗ್ಗತ್ತಲಲ್ಲಿ ಮುಳುಗಿದ್ದವು. ಮಂಗಳವಾರದ ಮಳೆಯಿಂದಾಗಿ ಹೆಚ್ಚುವರಿ 20 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನಿವಾಸಿಗಳು ಕತ್ತಲಲ್ಲೇ ದಿನದೂಡಬೇಕಾಯಿತು.