ಕರ್ನಾಟಕ ಮಾಹಿತಿ ಆಯೋಗ 
ರಾಜ್ಯ

ಆರ್​ಟಿಐ ಅಡಿ ಮಾಹಿತಿ ನೀಡದೇ ನಿರ್ಲಕ್ಷ್ಯ; 4 ಪ್ಯತ್ಯೇಕ ಪ್ರಕರಣಗಳಲ್ಲಿ ಬಿಡಿಎ ಅಧಿಕಾರಿಯೊಬ್ಬರಿಗೆ 1 ಲಕ್ಷ ರೂ. ದಂಡ | RTI

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ(RTI) ಮಾಹಿತಿ ಕೋರಿದ್ದ ಅರ್ಜಿದಾರರಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ ಬಿಡಿಎ ಅಧಿಕಾರಿಯೊಬ್ಬರಿಗೆ ಕರ್ನಾಟಕ ಮಾಹಿತಿ ಆಯೋಗ 4 ಪ್ರತ್ಯೇಕ ಪ್ರಕರಣಗಳಲ್ಲಿ 1 ಲಕ್ಷ ದಂಡ ವಿಧಿಸಿದೆ. ಅದೇ ರೀತಿ ಪ್ರಕರಣದಲ್ಲಿ ಮತ್ತೊಬ್ಬ ಅಧಿಕಾರಿಗೆ 25 ಸಾವಿರ ದಂಡ ವಿಧಿಸಿದೆ.
ಮಾಹಿತಿ ಹಕ್ಕು ಕಾಯ್ದೆಯ ಕಲಂ 4ರ ಅನ್ವಯ ತಮ್ಮ ಪ್ರಾಧಿಕಾರದ ಹೊಣೆಗಾರಿಕೆಯನ್ನು ಕಾಲ-ಕಾಲಕ್ಕೆ ನಿರ್ವಹಿಸಿ, ಅದನ್ನು ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸದ ಹಿನ್ನೆಲೆ ಕರ್ನಾಟಕ ಮಾಹಿತಿ ಆಯೋಗವು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉಪಕಾರ್ಯದರ್ಶಿ -1 ಉಮೇಶ್ ಅವರಿಗೆ 1 ಲಕ್ಷ ರೂ. ಮತ್ತು ಕಾರ್ಯದರ್ಶಿ ಸಿ.ಎಲ್ ಶಿವಕುಮಾರ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಆರ್‌ಟಿಐ ಕಾಯ್ದೆಯ ಕಲಂ 4ರ ನಿರ್ವಹಣೆ ಕುರಿತಂತೆ ನಾಲ್ವರು ಅರ್ಜಿದಾರರು ಬಿಡಿಎ ಉಪಕಾರ್ಯದರ್ಶಿ-1 ಉಮೇಶ್ ಅವರಿಗೆ ಪ್ರತ್ಯೇಕ ಅರ್ಜಿಗಳಲ್ಲಿ ಮಾಹಿತಿ ಕೋರಿದ್ದರು. ಆ ಅರ್ಜಿಗಳ ಕುರಿತಂತೆ ಯಾವುದೇ ಮಾಹಿತಿ ನೀಡದೇ, ಉಪಕಾರ್ಯದರ್ಶಿ ನಿರ್ಲಕ್ಷ್ಯ ತೋರಿದ್ದರು. ಈ ಬಗ್ಗೆ ಅರ್ಜಿದಾರರಾದ ತಕ್ಷಕ್, ತನ್ವಿತಾ ಗೌರ್, ಅಶ್ವಿಜಾ ಪಿ ಹಾಗೂ ಬಾಲಚಂದ್ರ ರಾವ್ ಎಂಬುವರು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಉಮೇಶ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೂ ಅಧಿಕಾರಿ ಉಮೇಶ್ ಅವರು ಅರ್ಜಿದಾರರಿಗೆ ಮಾಹಿತಿ ಒದಗಿಸಿದ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 4 ಪ್ರತ್ಯೇಕ ಅರ್ಜಿಗಳಿಗೆ ತಲಾ 25 ಸಾವಿರ ರೂ. ದಂಡವನ್ನು ಹಾಕಿದೆ. ಅಷ್ಟೇ ಅಲ್ಲದೇ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಯಾಕೆ ಶಿಫಾರಸು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಮತ್ತೊಂದು ಪ್ರಕರಣದಲ್ಲಿ ಬಿಡಿಎ ಹೆಚ್ಚುವರಿ ಭೂ ಸ್ವಾಧೀನಾಧಿಕಾರಿಗಳ ಅಧಿಕಾರ ವ್ಯಾಪ್ತಿಯ ಕುರಿತಂತೆ ಸರ್ಕಾರದ ಆದೇಶದ ಪ್ರತಿಯನ್ನು ಕೋರಿ ಸುರೇಶ್ ಚಂದ್ರ ಬಾಬು ಎಂಬುವರು ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ಒದಗಿಸದ ಹಿನ್ನೆಲೆ ಬಿಡಿಎ ಕಾರ್ಯದರ್ಶಿ ಶಿವಕುಮಾರ್ ಅವರಿಗೆ 25 ಸಾವಿರ ದಂಡ ವಿಧಿಸಲಾಗಿದೆ.