ಮಕ್ಕಳಿಗಾಗಿ ಸಚಿತ್ರ ಪುಸ್ತಕಗಳನ್ನು ರಚಿಸುವ ಕಾರ್ಯಾಗಾರ 
ರಾಜ್ಯ

ಮಕ್ಕಳನ್ನು ಆಕರ್ಷಿಸುವ ಪುಸ್ತಕಗಳನ್ನು ರಚಿಸುವ ಅಗತ್ಯವಿದೆ - ಎಲ್.ಎನ್. ಮುಕುಂದರಾಜ್

ಪ್ರಮುಖ ಮುಖ್ಯಾಂಶಗಳು

  • * ಮಕ್ಕಳಿಗಾಗಿ ಸಚಿತ್ರ ಪುಸ್ತಕಗಳನ್ನು ರಚಿಸುವ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ

ಬೆಂಗಳೂರು:

ಆಧುನಿಕ ತಂತ್ರಜ್ಞಾನ ಮಕ್ಕಳನ್ನು ಓದಿನಿಂದ ವಿಮುಖರನ್ನಾಗಿಸುತ್ತಿದೆ. ಇದನ್ನು ತಪ್ಪಿಸಲು ಮಕ್ಕಳಿಗೆ ಆಕರ್ಷಕವೆನಿಸುವ ರೀತಿಯಲ್ಲಿ ಪುಸ್ತಕಗಳನ್ನು ರಚಿಸುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರು ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಸಚಿತ್ರ ಪುಸ್ತಕಗಳನ್ನು ರಚಿಸುವ ಮೂರು ದಿನಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕನ್ನಡ ಸಾಹಿತ್ಯದ ಮಹತ್ವವ ಕುರಿತು ಅರಿವು ಮಾಡಿಕೊಡಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ಹಾಗಾಗಿ ಮಕ್ಕಳ ಪುಸ್ತಕಗಳ ತಜ್ಞರಾದ ಜಿ. ಎನ್. ಮೋಹನ್ ಅವರ ಸಂಪಾದಕತ್ವದಲ್ಲಿ 50 ಮಕ್ಕಳ ಕೃತಿಗಳನ್ನು ಪ್ರಕಟಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪ್ರಾಚೀನ, ಜಾನಪದ, ಸಮಕಾಲೀನ ಕೃತಿಗಳನ್ನು ಸಚಿತ್ರ ಮಕ್ಕಳ ಪುಸ್ತಕವಾಗಿ ರೂಪಿಸಲಾಗುವುದು ಎಂದರು.
ಯೋಜನೆಯ ಸಂಪಾದಕ ಜಿ. ಎನ್. ಮೋಹನ್ ಅವರು ಮಾತನಾಡಿ, ತಂತ್ರಜ್ಞಾನದ ಅಬ್ಬರದ ಕಾಲದಲ್ಲಿ ಓದಿಗೆ ಮರಳುವಂತೆ ಮಾಡುವ ಸವಾಲನ್ನು ಇಡೀ ಜಗತ್ತು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆರಂಭದಿಂದಲೇ ಓದಿನ ರುಚಿ ಹುಟ್ಟಿಸುವುದು ಅಗತ್ಯ. ಆ ಕಾರಣಕ್ಕಾಗಿಯೇ ಮಕ್ಕಳಿಗೆ ಕಾಮಿಕ್ಸ್, ಗ್ರಾಫಿಕ್ ಪುಸ್ತಕಗಳನ್ನು ಹೆಚ್ಚಿಗೆ ಪ್ರಕಟಿಸುವ ಪರಂಪರೆ ಆರಂಭವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಕ್ಕಳ ಪುಸ್ತಕಗಳ ಬಗ್ಗೆ ಯೋಜನೆಯನ್ನು ರೂಪಿಸಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ, ಸದಸ್ಯರಾದ ಪ್ರಕಾಶರಾಜ್ ಮೇಹು, ಚಿಕ್ಕಮಗಳೂರು ಗಣೇಶ್ ಉಪಸ್ಥಿತರಿದ್ದರು.

ಮಕ್ಕಳಲ್ಲಿ ಕಲ್ಪನೆಯ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಅವರಿಗೆ ಕಲೆಯ ಅಭಿರುಚಿಯನ್ನು ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವದ ಪಾತ್ರ ವಹಿಸಲಿದೆ.

— - ಪ.ಸ. ಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ