ಬೆಂಗಳೂರು: ರಾಜ್ಯದ 5,950 ಗ್ರಾಮ ಪಂಚಾಯಿತಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸದಸ್ಯರ ಸಂಖ್ಯೆ ನಿರ್ಧರಿಸಲು 4 ವಾರ ಅಗತ್ಯವಿದೆ. ಆನಂತರ ಅಂತಿಮ ಮೀಸಲು ಪಟ್ಟಿ ಸಿದ್ಧಗೊಳಿಸಿ, ಚುನಾವಣಾ ಆಯೋಗಕ್ಕೆ ಸಲ್ಲಿಸಲು ಕನಿಷ್ಠ 3 ತಿಂಗಳು ಬೇಕಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠವು ಸೋಮವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಗ್ರಾ.ಪಂ ಮತ್ತು ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ಸರ್ಕಾರ ಕೈಗೊಂಡಿರುವ ಕ್ರಮಗಳ ವರದಿಯನ್ನು ಸಲ್ಲಿಸಿದರು. ಅವಧಿ ಮುಕ್ತಾಯವಾಗಿರುವ ಗ್ರಾ.ಪಂ.ಗಳ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸದಸ್ಯರ ಸಂಖ್ಯೆ ನಿರ್ಧರಿಸಲು ಅಗತ್ಯವಾದ ಮಾಹಿತಿಯನ್ನು 15 ದಿನಗಳ ಒಳಗಾಗಿ ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗಕ್ಕೆ ಸಲ್ಲಿಸುವಂತೆ ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಿಂದ ಮಾಹಿತಿ ಬಂದು, ಅದನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಲು ಮತ್ತು ಅದನ್ನು ಪರಿಶೀಲಿಸಿ ಒಟ್ಟು ಸದಸ್ಯರ ಸಂಖ್ಯೆ ನಿರ್ಧರಿಸಲು ಒಂದು ತಿಂಗಳ ಕಾಲಾವಕಾಶ ಬೇಕಾಗಿದೆ. ಆ ನಂತರವಷ್ಟೇ ಮೀಸಲು ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 3 ತಿಂಗಳು ಬೇಕಾಗಬಹುದು. ಪ್ರಸ್ತುತ ಅವಧಿ ಮುಕ್ತಾಯವಾಗಿರುವ 5,950 ಗ್ರಾ.ಪಂನಲ್ಲಿ 96 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಮಾಹಿತಿ ನೀಡಿದ್ದಾರೆ. ಇದನ್ನು ದಾಖಲಿಸಿಕೊಂಡ ನ್ಯಾಯಪೀಠವು ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆಯನ್ನು ಏ.29ಕ್ಕೆ ಮುಂದೂಡಿತು.
ಸಿದ್ಧತೆ ಪ್ರಗತಿಯಲ್ಲಿ:
ಚುನಾವಣೆ ನಡೆಯಬೇಕಿರುವ ಒಟ್ಟು 187 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 167 ನಗರ ಸ್ಥಳಿಯ ಸಂಸ್ಥೆಗಳ ವಾರ್ಡ್ ಮರುವಿಂಗಡಣೆ ಕಾರ್ಯ ಮುಗಿದಿದ್ದು, 21 ಮಾತ್ರ ಬಾಕಿ ಇದೆ. ಅದೇ ರೀತಿ 23 ನಗರ ಸ್ಥಳೀಯ ಸಂಸ್ಥೆಗಳ ಕರಡು ಮೀಸಲಾತಿ ಅಧಿಸೂಚನೆ ಹೊರಡಿಸಿದ್ದು, ಅಂತಿಮ ಅಧಿಸೂಚನೆ ಪರಿಶೀಲನೆಯಲ್ಲಿದೆ. 143 ನಗರ ಸ್ಥಳಿಯ ಸಂಸ್ಥೆಗಳಿಗೆ ವಾರ್ಡ್ವಾರು ಕರಡು ಮೀಸಲಾತಿ ಪ್ರಕಟಣೆ ಪರಿಶೀಲನೆಯಲ್ಲಿದೆ ಎಂದು ಸರ್ಕಾರವು ವರದಿಯಲ್ಲಿ ತಿಳಿಸಿದೆ.