ಕಲಬುರಗಿ ಡಿಸಿ ಕಚೇರಿಯಲ್ಲಿ ಕೆಕೆಸಿಸಿಐ ಪದಾಧಿಕಾರಿಗಳೊಂದಿಗೆ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಾತನಾಡಿದರು. ಅವಿನಾಶ ಶಿಂಧೆ, ಶಾಲೂ, ಶರಣು ಪಪ್ಪಾ, ಸಂತೋಷ ಲಂಗರ್​ ಇದ್ದರು. 
ರಾಜ್ಯ

ಮೂಲಸೌಕರ್ಯಕ್ಕೆ ಅಗತ್ಯ ಕ್ರಮ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಭರವಸೆ
  • ಡಿಸಿ ಕಚೇರಿಯಲ್ಲಿ ಕೆಕೆಸಿಸಿಐ ಜತೆ ಸಮಾಲೋಚನಾ ಸಭೆ
ಕಲಬುರಗಿ: ಪಾರ್ಕಿಂಗ್​, ನಗರ ಸುಂದರೀಕರಣ ಸೇರಿ ಅಗತ್ಯ ಮೂಲಸೌಲಭ್ಯ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದ್ದು, ಯೋಜನೆ ಅನುಷ್ಠಾನದಲ್ಲಿ ವರ್ತಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಕೆಸಿಸಿಐ, ಡಿಐಸಿ, ಎಪಿಎಂಸಿ, ಜೆಸ್ಕಾಂ ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಜರುಗಿದ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಬೆಳವಣಿಗೆ ನಿರೀಕ್ಷಿಸಲು ಸಾಧ್ಯ. ವರ್ತಕರು, ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರ ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾತನಾಡಿ, ಸೂಪರ್​ ಮಾರ್ಕೆಟ್​ ಪ್ರದೇಶದಲ್ಲಿ ಬಹುಮಹಡಿ ಪಾರ್ಕಿಂಗ್​ ಸೌಲಭ್ಯ ನಿರ್ಮಾಣ ಮಾಡಬೇಕು. ಅತಿಕ್ರಮಣ ತೆರವು, ಹಾಕರ್ಸ್​, ಬೀದಿ ವ್ಯಾಪಾರಿಗಳ ಯೋಜಿತ ವಲಯ ಅಭಿವೃದ್ಧಿ ಪಡಿಸುವುದು, ವಾಣಿಜ್ಯ ಪ್ರದೇಶಗಳೊಂದಿಗೆ ಸೂಪರ್​ ಮಾರ್ಕೆಟ್​ ಸಂಪರ್ಕಿಸುವ ಸ್ಕೆವಾಕ್​ ನಿರ್ಮಾಣ, ಆಧುನಿಕ ಸಾರ್ವಜನಿಕ ಶೌಚಗೃಹ ನಿರ್ಮಾಣ, ನಗರ ಮೂಲಸೌಲಭ್ಯ ಸಮಗ್ರ ಉನ್ನತಿಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಎಪಿಎಂಸಿ ಆವರಣದಲ್ಲಿ ವಿದ್ಯುತ್​ ವಿತರಣೆ, ನಿರ್ವಹಣೆ ಸಮಸ್ಯೆ ಎದುರಾಗಿದ್ದು, ಈ ವ್ಯವಸ್ಥೆಯ ಹೊಣೆ ಜೆಸ್ಕಾಂಗೆ ವರ್ಗಾಯಿಸಬೇಕು. ನತ್ಯಾಜ್ಯ ನಿರ್ವಹಣೆ, ನಗರ ನೈರ್ಮಲ್ಯ ಬಲಪಡಿಸಬೇಕು, ಸಾರ್ವಜನಿಕ ಸ್ಥಳಗಳ ಸುಂದರೀಕರಣ, ಸ್ಮಾರ್ಟ್​ ಸಿಟಿ ಪರಿಶೀಲನೆ, ಸಂಚಾರ ಸಮರ್ಪಕ ನಿರ್ವಹಣೆ, ನಗರಾಭಿವೃದ್ಧಿ ಯೋಜನೆಗಳಿಗೆ ಆವರ್ತಕ ಸಮನ್ವಯ ಸಭೆ, ಕರ್ನಾಟಕ ತೊಗರಿ ಮಂಡಳಿ ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜವಳಿ ಪಾರ್ಕ್​ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಬೇಕು, ಕೆಐಎಡಿಬಿ ಮೂಲಕ ಕೆಕೆಸಿಸಿಐಗೆ ನೀಡಿದ ಭೂಮಿಯಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಬೇಕು. ಬಾಕಿ ಉಳಿದಿರುವ ಬಂಡವಾಳ ಸಬ್ಸಿಡಿ ಬಿಡುಗಡೆ, ಕೆಐಎಡಿಬಿ ಕೈಗಾರಿಕೆ ಪ್ರದೇಶಗಳ ಸಮಗ್ರ ಲೆಕ್ಕ ಪರಿಶೋಧನೆ, ಕಪನೂರ ಕೈಗಾರಿಕೆ ಪ್ರದೇಶದಲ್ಲಿ ರಸ್ತೆಗಳ ಮರು ನಿರ್ಮಾಣ ಮಾಡಬೇಕು, ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಉದ್ಯಾನವನದ ಅಭಿವೃದ್ಧಿ ಕೈಗೊಳ್ಳಬೇಕು, ಕೈಗಾರಿಕಾ ವಲಯದಲ್ಲಿ ಸಮರ್ಪಕ ನೀರು ಸರಬರಾಜು ಮಾಡಬೇಕು ಎಂದು ಕೋರಿದರು.
ಆಹಾರಧಾನ್ಯ ಮತ್ತು ಬೀಜವ್ಯಾಪಾರಿಗಳ ಸಂದ ಅಧ್ಯಕ್ಷ ಸಂತೋಷ ಲಂಗರ್​ ಮಾತನಾಡಿ, ಎಪಿಎಂಸಿ ಯಾರ್ಡ್​ ಸಿಟಿ ವ್ಯಾಪ್ತಿಯಲ್ಲಿದ್ದು, ಸಂಚಾರ ದಟ್ಟಣೆಯಿಂದಾಗಿ ಮಾರುಕಟ್ಟೆ ಬರುವವರಿಗೆ ತೊಂದರೆ ಆಗುತ್ತಿದೆ. ವಿಶೇಷವಾಗಿ ಭಾರಿ ವಾಹನ ಬರುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಸಿಟಿ ಹೊರಗಡೆ 100 ಎಕರೆ ಜಮೀನು ಗುರುತಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ ಎಪಿಎಂಸಿ ಸ್ಥಳಾಂತರ ಮಾಡಬೇಕು ಎಂದು ಹೇಳಿದರು.
ಕೇದಾರ್​ ರೂಜಿ ಮಾತನಾಡಿ, ಸೂಪರ್​ ಮಾರ್ಕೆಟ್​ನ ಕಿರಣಾ ಬಜಾರ್​ದಲ್ಲಿ ರಸ್ತೆ ಅಗಲೀಕರಣಕ್ಕೆ ನಮ್ಮ ಅಂಗಡಿಗಳ ಕೆಲ ಜಾಗ ಸ್ವಾಧಿನ ಮಾಡಿಕೊಂಡು ಬಾಕಿ ಪರಿಹಾರ ಈವರೆಗೂ ನೀಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿದರು.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಸಿಪಿ ಶಾಲೂ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಅಬ್ದುಲ್​ ಅಜೀಂ, ಪ್ರಮುಖರಾದ ಮಂಜುನಾಥ ಜೇವರ್ಗಿ, ರಾವೇಂದ್ರ ಮೈಲಾಪುರ, ಭೀಮಾಶಂಕರ ಮಾಲಿಪಾಟೀಲ್​, ವಿನಯ ಚಿಕಟವಾರ್​, ನಮ್ರತಾ ಪತಾಟೆ, ಅಭಿಜಿತ್​ ಪಡಶೆಟ್ಟಿ, ಸಂದೀಪ ಮಿಶ್ರಾ, ದಿನೇಶ ಪಾಟೀಲ್​, ಲಿಂಗರಾಜ ಭಾವಿಕಟ್ಟಿ, ಜಗದೀಶ ಪಾಟೀಲ್​, ರವೀಂದ್ರ ಮಾದಮಶೆಟ್ಟಿ ಇತರರಿದ್ದರು.
"

ದೇಶದಲ್ಲಿ ತೆಲಂಗಾಣ, ಕರ್ನಾಟಕ ಸೇರಿ ಏಳು ಜವಳಿ ಪಾರ್ಕ್​ಗಳು ಏಕಕಾಲಕ್ಕೆ ಮಂಜೂರಾಗಿವೆ. ತೆಲಂಗಾಣದಲ್ಲಿ ಈಗಾಗಲೇ ಉತ್ಪಾದನೆ ಶುರುವಾಗಿದೆ. ಆದರೆ ಕಲಬುರಗಿ ಪಾರ್ಕ್​ ಇನ್ನೂ ಆರಂಭದ ಹಂತದಲ್ಲಿದೆ. ತೊಗರಿ ಅಭಿವೃದ್ಧಿ ಮಂಡಳಿ ಬಲಪಡಿಸಬೇಕು, ರಿಂಗ್​ ರಸ್ತೆ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

— > ಉಮಾಕಾಂತ ನಿಗ್ಗುಡಗಿ, ಮಾಜಿ ಅಧ್ಯಕ್ಷ, ಕೆಕೆಸಿಸಿಐ

"

ರಸ್ತೆ ಅಭಿವೃದ್ಧಿ, ಪಾರ್ಕಿಂಗ್​, ಸಂಚಾರ ನಿರ್ವಹಣೆ, ಸರ್ಕಾರದ ಜಾಗ ಒತ್ತುವರಿ ಸೇರಿ ಎಲ್ಲ ಸಮಸ್ಯೆಗಳಿಗೂ ಹಂತ- ಹಂತವಾಗಿ ಪರಿಹಾರ ಒದಗಿಸಲಾಗುವುದು. 2-3 ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಯೋಜನೆ ರೂಪಿಸಿ ಆದ್ಯತೆ ಆಧಾರದ ಮೇಲೆ ಕೆಲಸ ಕೈಗೆತ್ತಿಕೊಳ್ಳಲಾಗುವುದು.

— > ಇಕ್ರಮ್​ ಶರೀಫ್​, ಜಿಲ್ಲಾಧಿಕಾರಿ

"

ಪಾರ್ಕಿಂಗ್​ ವ್ಯವಸ್ಥೆಗೆ ಈಗಾಗಲೇ ಜಾಗ ಗುರುತಿಸಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಕೆಕೆಆರ್​ಡಿಬಿ 10 ಕೋಟಿ ರೂ. ಪಾಲಿಕೆಗೆ ಬಿಡುಗಡೆ ಮಾಡಿದೆ. ಸೂಪರ್​ ಮಾರ್ಕೆಟ್​ ಸಿಟಿ ಬಸ್​ ನಿಲ್ದಾಣದ ಎದುರಿನ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಜಾಗ ಒತ್ತುವರಿಯಾಗಿದ್ದು, ತೆರವುಗೊಳಿಸಬೇಕು. ಸೂಪರ್​ ಮಾರ್ಕೆಟ್​, ಕಿರಾಣ ಬಜಾರ್​, ಕಪಡಾ, ಚಪ್ಪಲ್​, ಸರಾಫ್​ ಬಜಾರ್​ ಸೇರಿ ವಿವಿಧೆಡೆ ಬೀದಿ ವ್ಯಾಪಾರಿಗಳು ರಸ್ತೆಯಲ್ಲೇ ಬಂಡಿ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.

— > ಶರಣಬಸಪ್ಪ ಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ