ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಪ್ರಕ್ರಿಯೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಎನ್ಡಿಎ ಅಭ್ಯರ್ಥಿ ಎ ಪಿ ರಂಗನಾಥ್ ಅವರು ವಿಜಯಶಾಲಿಯಾಗಿ ಚುನಾಯಿತರಾಗಿದ್ದಾರೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಅಕ್ಟೋಬರ್ 23 ರಂದು ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾನದಲ್ಲಿ ಒಟ್ಟು 27,405 ಮತದಾರರ ಪೈಕಿ 22,468 ಮಂದಿ ಮತ ಚಲಾಯಿಸಿದ್ದು, ಶೇ. 81.98 ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 8,360 ಪುರುಷರು ಹಾಗೂ 14,108 ಮಹಿಳೆಯರು ಇದ್ದರು.
ಇಂದು ( ಮಂಗಳವಾರ-ಅ.27) ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿತು. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯ ಅಂತ್ಯದಲ್ಲಿ ಎ ಪಿ ರಂಗನಾಥ್ ಅವರು ಒಟ್ಟು 10,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ವಿವಿಧ ಸುತ್ತುಗಳಲ್ಲಿ ಎನ್ಡಿಎ ಅಭ್ಯರ್ಥಿ, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಪುಟ್ಟಣ್ಣ ಅವರನ್ನು 908 ಮತಗಳ ಅಂತರದಿಂದ ಮಣಿಸಿ ಜಯಗಳಿಸಿದ್ದಾರೆ.
ಎ.ಪಿ. ರಂಗನಾಥ್ (ಬಿಜೆಪಿ-ಜೆಡಿಎಸ್ ಬೆಂಬಲಿತ): 10,810 ಮತಗಳು
ಪುಟ್ಟಣ್ಣ (ಕಾಂಗ್ರೆಸ್ ಪಕ್ಷ): 9,902 ಮತಗಳು
ಉಮೇಶ್ ಬಾಬು ಪಿಳ್ಳೆಗೌಡ (ಪಕ್ಷೇತರ): 215 ಮತಗಳು
ಡಾ. ಜಿ.ಆರ್. ಹೆಬ್ಬೂರು (ಕರ್ನಾಟಕ ರಾಷ್ಟ್ರ ಸಮಿತಿ): 94 ಮತಗಳು
ಡಾ. ಎನ್. ಲಕ್ಷ್ಮಣ ಸ್ವಾಮಿ (ಪಕ್ಷೇತರ): 24 ಮತಗಳು
ಬಿ.ಎಸ್. ನಾಗರಾಜು (ಪಕ್ಷೇತರ): 11 ಮತಗಳು
ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾಹಿತಿ ನೀಡಿ, ಒಟ್ಟು 21,056 ಮತಗಳು ಮಾನ್ಯವಾಗಿದ್ದು, 1,857 ಮತಗಳು ತಿರಸ್ಕೃತಗೊಂಡಿವೆ ಎಂದು ತಿಳಿಸಿದ್ದಾರೆ.