ಆರ್‌ಜಿಯುಎಚ್‌ಎಸ್ 31ನೇ ಸಂಸ್ಥಾಪನಾ ದಿನಾಚರಣೆ ಅಂಗಾಗಿ ಆಯೋಜಿಸಿದ್ದ ‘ನಶಾ ಮುಕ್ತ ಭಾರತ ಅಭಿಯಾನ’ದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮಾತನಾಡಿದರು.
- ಮಾದಕ ದ್ರವ್ಯ ಸೇವನೆಯು ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಶೈಕ್ಷಣಿಕ ಸಾಧನೆ, ಸಾಮಾಜಿಕ ಒಗ್ಗಟ್ಟು ಮತ್ತು ರಾಷ್ಟ್ರೀಯ ಅಭಿವೃದ್ಧಿಗೂ ಮಾರಕ
- ಮಾದಕ ವಸ್ತುಗಳು ಮನಸ್ಸಿನ ಮೇಲೆ ಹಿಡಿತ ಸಾಧಿಸಿದಾಗ, ಒಬ್ಬ ವ್ಯಕ್ತಿಯು ತನ್ನ ಸ್ವಂತ ಜೀವನದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ
- ಭಾರತವು ಯುವಶಕ್ತಿಯ ರಾಷ್ಟ್ರವಾಗಿದ್ದು, ದೇಶದ ಅಭಿವೃದ್ಧಿಗೆ ಯುವಜನರ ಶಕ್ತಿಯೇ ಪ್ರಮುಖ ಆಧಾರವಾಗಿದೆ.
ಬೆಂಗಳೂರು: ಮಾದಕ ವಸ್ತುಗಳ ನಿಷೇಧಕ್ಕೆ ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯಬೇಕಿದೆ. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಆರೋಗ್ಯ ವೃತ್ತಿಪರರು, ಕಾನೂನು ಜಾರಿ ಸಂಸ್ಥೆಗಳು ಮತ್ತು ನಾಗರಿಕರು ಒಟ್ಟಾಗಿ ಕಾರ್ನಿರ್ವಹಿಸಬೇಕಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕರೆ ನೀಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) 31ನೇ ಸಂಸ್ಥಾಪನಾ ದಿನಾಚರಣೆ ಅಂಗಾಗಿ ಆಯೋಜಿಸಿದ್ದ ‘ನಶಾ ಮುಕ್ತ ಭಾರತ ಅಭಿಯಾನ’ದಲ್ಲಿ ಅವರು ಮಾತನಾಡಿದರು.
ಮಾದಕ ದ್ರವ್ಯ ಸೇವನೆಯು ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಶೈಕ್ಷಣಿಕ ಸಾಧನೆ, ಸಾಮಾಜಿಕ ಒಗ್ಗಟ್ಟು ಮತ್ತು ರಾಷ್ಟ್ರೀಯ ಅಭಿವೃದ್ಧಿಗೂ ಮಾರಕವಾಗದೆ. ಮಾದಕ ವಸ್ತುಗಳು ಮನಸ್ಸಿನ ಮೇಲೆ ಹಿಡಿತ ಸಾಧಿಸಿದಾಗ, ಒಬ್ಬ ವ್ಯಕ್ತಿಯು ತನ್ನ ಸ್ವಂತ ಜೀವನದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. ತಮ್ಮ ಸ್ವಂತ ನಿರ್ಧಾರ ಕೈಗೊಳ್ಳಬೇಕಾದರೆ, ಮಾದಕ ವಸ್ತುಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದರು.
ಇಂತಹ ಅಭಿಯಾನವನ್ನು ಕೈಗೊಂಡಿರುವ ಆರೋಗ್ಯ ವಿವಿಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಗೆ ಪೋಲಿಯೊ ಲಸಿಕೆ ಹನಿಗಳನ್ನು ಹಾಖುವ ಮೂಲಕ ಜಾಗೃತಿ ಮೂಡಿಸಿದರು. ಇದೇ ವೇಳೆ ಸುಮಾರು 25 ಸಾವಿರ ವಿದ್ಯಾರ್ಥಿಗಳು ನಶಾಮುಕ್ತ ಭಾರತದ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ವಿವಿ ಕುಲಪತಿ ಡಾ. ಬಿ.ಸಿ. ಭಗವಾನ್, ವಿವಿ ಕುಲಸಚಿವ ಅರ್ಜುನ್ ಒಡೆಯರ್ ಸೇರಿ ಹಲವು ಗಣ್ಯರು ಉಸಪ್ಥಿತರಿದ್ದರು.
ಸಾಮೂಹಿಕ ಜವಾಬ್ದಾರಿ ಅಗತ್ಯ: ರಾಜ್ಯಪಾಲ
ಭಾರತವು ಯುವಶಕ್ತಿಯ ರಾಷ್ಟ್ರವಾಗಿದ್ದು, ದೇಶದ ಅಭಿವೃದ್ಧಿಗೆ ಯುವಜನರ ಶಕ್ತಿಯೇ ಪ್ರಮುಖ ಆಧಾರವಾಗಿದೆ. ಆದ್ದರಿಂದ ಯುವಜನರನ್ನು ಆರೋಗ್ಯವಂತರಾಗಿ, ಜಾಗೃತರಾಗಿ ಹಾಗೂ ಮಾದಕ ವ್ಯಸನದಿಂದ ಮುಕ್ತರಾಗಿ ಬೆಳೆಸುವುದು ಸಮಾಜದ ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಾದಕ ದ್ರವ್ಯ ಮುಕ್ತ ಭಾರತ ಸಂಕಲ್ಪವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕುಟುಂಬ ಹಾಗೂ ಸಮಾಜದಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಆರೋಗ್ಯಕರ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.