- ನ್ಯಾಯಾಧಿಶ ಮರುಳಸಿದ್ದರಾಧ್ಯ ಮಾಹಿತಿ
- ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಕರೆ
ಯಾದಗಿರಿ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಸೆ.೧೯ರಂದು ಮೂರನೇ ರಾಷ್ಟ್ರೀಯಾ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಶರಾದ ಮರುಳಸಿದ್ದರಾಧ್ಯ ಜೆ.ಎಂ. ಹೇಳಿದರು. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ ಅದಾಲತ್‌ನಲ್ಲಿ ರಾಜಿಯಾಗಬಹುದಾದ ಸಿವಿಲ್, ಕ್ರಿಮಿನಲ್ ಸೇರಿದಂತೆ ವಿವಿಧ ಪ್ರಕರಣಗಳನ್ನು ಪರಿಗಣಿಸಿ, ಪಕ್ಷಗಾರರ ಪರಸ್ಪರ ಒಪ್ಪಿಗೆಯೊಂದಿಗೆ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರನೇ ರಾಷ್ಟ್ರೀಯಾ ಮಧ್ಯಸ್ಥಿಕೆ ಅಭಿಯಾನದ ಪ್ರಗತಿ ಕುರಿತು ಮಾಹಿತಿ ನೀಡಿದರು. ಪಾಸ್ಟಿಕ್ ನಿಷೇಧದ ಕುರಿತಂತೆಯೇ ಜಿಲ್ಲಾ ಕಾನೂನು ಪ್ರಾಧಿಕಾರವು ನಡೆದ ಜಾಗೃತಿ ಕಾರ್ಯಕ್ರಮವು ಬಹುತೇಕ ಯಶಸ್ಸು ಆಗಿದ್ದು, ಇದು ನಿರಂತರ ನಡೆಯಲಿದೆ ಎಂದರು.
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಆದ್ಯತೆ
ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಹಾಗೂ ಕಾನೂನು ಚೌಕಟ್ಟಿನೊಳಗೆ ಸಾರ್ವಜನಿಕರು ಮತ್ತು ಗಣೇಶೋತ್ಸವ ಸಮಿತಿ ಆಚರಿಸುವಂತೇ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಶರಾದ ಮರುಳಸಿದ್ದರಾಧ್ಯ ಜೆ.ಎಂ.ಕರೆ ನೀಡಿದರು. ಗಣೇಶ ಮತ್ತು ಗೌರಿ ಪ್ರತಿಮೆ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ತಯಾರಿಸಿದ ಮೂರ್ತಿ ಬಳಸಬಾರದು. ಅವು ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಕಾರಕವಾಗಿದ್ದು, ಜಲಮೂಲಗಳ ಮಾಲಿನ್ಯಕ್ಕೂ ಕಾರಣವಾಗುತ್ತದೆ ಎಂದು ಹೇಳಿದರು.
ಬಾಚವಾರಕ್ಕೆ ಸೌಲಭ್ಯ
ರಾಷ್ಟ್ರೀಯಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಬಾಚವಾರ ಗ್ರಾಮದ ಜನರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ೧೩ ಸೌಲತ್ತು ಒದಗಿಸಲು ಜಿಲ್ಲಾ ಕಾನೂನು ಪ್ರಾಧಿಕಾರವು ಮುಂದಾಗಿದ್ದು, ಈಗಾಗಲೇ ಸರ್ವೇ ಕಾರ್ಯ ಮುಗಿದಿದೆ. ಇಷ್ಟರಲ್ಲಿಯೇ ಸೌಲಭ್ಯ ತಲುಪಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧಿಶರೂ ಆದ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.