ನಂಜನಗೂಡು ಟಿಎಪಿಸಿಎಂಎಸ್ ಚುನಾವಣೆ ಫಲಿತಾಂಶ ಹೊರಬಿದಿದ್ದು, ಕುರಹಟ್ಟಿ ಮಹೇಶ್ ಬೆಂಬಲಿಗರ ತಂಡ ಜಯ ಪಡೆದಿದೆ.  
ರಾಜ್ಯ

ನಂಜನಗೂಡು ಟಿಎಪಿಸಿಎಂಎಸ್ ಫಲಿತಾಂಶ ಪ್ರಕಟ

ನಂಜನಗೂಡು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನ.2ರಂದು ನಡೆದಿದ್ದ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ನ್ಯಾಯಾಲಯ ಮತ್ತು ಪ್ರಾಧಿಕಾರದ ಆದೇಶದಂತೆ ಫಲಿತಾಂಶ ಪ್ರಕಟಗೊಂಡಿದ್ದು, 5 ವರ್ಷಗಳ ಆಡಳಿತ ಮಂಡಳಿಗೆ ಅಧ್ಯಕ್ಷ ಕುರಹಟ್ಟಿ ಮಹೇಶ್ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಹಾಲಿ ಅಧ್ಯಕ್ಷ ಕುರಹಟ್ಟಿ ಮಹೇಶ್ ತಂಡದ ಎಚ್.ಎಂ. ಮಂಜುಳಾ ಮಧು, ನಂಜನಗೂಡು ಎನ್.ಎಂ.ಪವಿತ್ರಾ, ಪರಮೇಶ್ ದೇವಿರಮ್ಮನಹಳ್ಳಿ, ಹಳ್ಳಿಕೆರೆಹುಂಡಿ ಶಿವಕುಮಾರ್, ವೀರದೇವನಪುರ ವಿ.ಆರ್.ವಿಜಯಕುಮಾರ್, ನಗರ್ಲೆಯ ಆರ್.ಸರ್ವೇಶ್, ಹಳ್ಳಿ ದಿಡ್ಡಿ ಆರ್.ಮಾದೇವ್ ಚುನಾವಣೆ ಮೂಲಕ ಆಯ್ಕೆಯಾದರೆ, ಎ ತರಗತಿ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ) ಕೆಂಪಿಸಿದ್ದನಹುಂಡಿಯ ಸಹಕಾರ ಸಂಘದಿಂದ ಎಚ್.ಜಿ.ಪರಶಿವಮೂರ್ತಿ, ದೊಡ್ಡ ಕೌಲಂದೆ ಜಿ.ಕೆ.ಪ್ರಕಾಶ್, ಹಸುವಿನಹಳ್ಳಿ ಕೆ.ಎನ್.ಮಲ್ಲೇಶ್ ತಗಡೂರು ಟಿ. ಎನ್.ಗುರುಮಲ್ಲೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಅಪಸ್ವರ: ಚುನಾವಣಾ ಅಧಿಕಾರಿ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಮತ್ತು ರಿಟರ್ನಿಂಗ್ ಆಫೀಸರ್ ವಸಂತ್‌ಕುಮಾರ್ ಸಭೆಯಲ್ಲಿ ಮಾತನಾಡಿ, ನ್ಯಾಯಾಲಯ ಮತ್ತು ಪ್ರಾಧಿಕಾರದ ಆದೇಶದಂತೆ ಚುನಾವಣಾ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದರು.

ಈ ವೇಳೆ ನಿಕಟಪೂರ್ವ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ನಗರಸಭಾ ನಿಕಟಪೂರ್ವ ಅಧ್ಯಕ್ಷ ಮಹದೇವಸ್ವಾಮಿ, ತಾಪಂ ಮಾಜಿ ಸದಸ್ಯ ಮಹದೇವಯ್ಯ ಇದಕ್ಕೆ ಅಪಸ್ವರ ತೆಗೆದರು. ಚುನಾವಣೆಯ ಪ್ರಕ್ರಿಯೆಗಳು ಸರಿಯಾಗಿ ನಡೆದಿಲ್ಲ. ಇಲ್ಲಿ ಅಕ್ರಮವಾಗಿದೆ. ನಾವು ಇದನ್ನು ನ್ಯಾಯಾಲಯದಲ್ಲಿ ಮನವಿ ಮಾಡಬೇಕಾಗಿರುವುದರಿಂದ ಲಿಖಿತ ದಾಖಲೆಗಳನ್ನು ನೀಡುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ಚುನಾವಣಾಧಿಕಾರಿಗಳು ದಾಖಲೆಗಳನ್ನು ನೀಡಿದರು. ನಂತರ ಸಿಂಧುವಳ್ಳಿ ಕೆಂಪಣ್ಣ ಅವರ ತಂಡ ಸಭೆಯಿಂದ ಹೊರ ನಡೆಯಿತು.