ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಬಂದಿದ್ದು, ಐಪಿಎಲ್ ಪಂದ್ಯದ ಟಿಕೆಟ್ ಜತೆಗೆ ನಮ್ಮ ಮೆಟ್ರೋ ಟಿಕೆಟ್ ಕೂಡ ಲಭ್ಯವಾಗಲಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ತೆರಳುವ ಪ್ರಯಾಣಿಕರು ಉಚಿತ ಮೆಟ್ರೋ ಪ್ರಯಾಣ ಮಾಡಬಹುದಾಗಿದೆ. ಈ ಹೊಸ ಸೌಲಭ್ಯದ ಕುರಿತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್ಸಿಎಲ್) ಅಧಿಕೃತ ಘೋಷಣೆ ಬಾಕಿ ಇದೆ.
ಆರ್ಸಿಬಿ ತವರು ಪಂದ್ಯಗಳನ್ನು ವೀಕ್ಷಿಸಲು ಉತ್ಸುಕರಾಗಿರುವ ಅಭಿಮಾನಿಗಳಿಗೆ ಟಿಕೆಟ್ ಖರೀದಿ ಕುರಿತು ಪ್ರಮುಖ ಸೂಚನೆಗಳನ್ನು ಪ್ರಕಟಿಸಿದೆ. ಕಾಲ್ತುಳಿತ ದುರ್ಘಟನೆ ಬಳಿಕ ಪ್ರೇಕ್ಷಕರ ಬಗೆಗಿನ ಕಾಳಜಿ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎನಿಸಲಿದೆ. ಈ ಹಿಂದೆ ಐಪಿಎಲ್ ಪಂದ್ಯಗಳಿದ್ದಾಗ ಮೆಟ್ರೋ ತನ್ನ ಸೇವಾವಧಿ ನಿಸ್ತರಿಸಿ ಹೆಚ್ಚುವರಿ ಕಾರ್ಯಾಚರಣೆ ನಡೆಸುತ್ತಿತ್ತು. ಆ ಮೂಲಕ ಪ್ರೇಕ್ಷಕರು ಸಕಾಲದಲ್ಲಿ ಸುರಕ್ಷಿತವಾಗಿ, ಸುಗಮವಾಗಿ ತಂತಮ್ಮ ಮನೆ ತಲುಪಲು ನೆರವಾಗುತ್ತಿತ್ತು. ಅದ್ಕಕಾಗಿ ಪ್ರತ್ಯೇಕ ಟಿಕೆಟ್ ವ್ಯವಸ್ಥೆ ಮಾಡುತ್ತಿತ್ತು. ಆದರೆ, ಈ ಬಾರಿ ಮ್ಯಾಚ್ ಟಿಕೆಟ್ ಜತೆಗೆ ಮೆಟ್ರೋ ಟಿಕೆಟ್ ಸಹ ಲಭಿಸಲಿದೆ.
ಪಾರ್ಕಿಂಗ್, ಜನದಟ್ಟಣೆ, ಸಂಚಾರ ಸಿಕ್ಕು ಮುಂತಾದ ಅನೇಕ ಸಮಸ್ಯೆಗಳಿಗೆ ಈ ಸಂದರ್ಭಗಳಲ್ಲಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಒಂದೇ ಪರಿಹಾರೋಪಾಯವಾಗಿದ್ದು, ನಮ್ಮ ಮೆಟ್ರೋ ಮಹತ್ವದ ಪಾತ್ರ ನಿರ್ವಹಿಸುತ್ತಿತ್ತು.
ಮ್ಯಾಚ್ ಟಿಕೆಟ್ನ ಹಿಂಭಾಗದಲ್ಲಿ ಮೆಟ್ರೋ ಟಿಕೆಟ್ ಕ್ಯೂಆರ್ ಕೋಡ್ ಕೂಡ ಇರಲಿದ್ದು, ಪ್ರಯಾಣಿಕರು ಅದೇ ಟಿಕೆಟ್ ಅನ್ನು ಪ್ರವೇಶ ದ್ವಾರದಲ್ಲಿ ಸ್ಕ್ಯಾನ್ ಮಾಡಿ ಪ್ರವೇಶಿಸಬಹುದು. ಪ್ರಯಾಣಿಕರು ಯಾವುದೇ ಭಾಗದಿಂದ ಆಗಮಿಸುತ್ತಿದ್ದರೂ ಅವರ ಗಮ್ಯ ಸ್ಥಾನ ಮಾತ್ರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ಕಬ್ಬನ್ ಪಾರ್ಕ್ ಅಥವಾ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಾಗಿರಬೇಕು.
ಇದರಿಂದ ಪಂದ್ಯ ವೀಕ್ಷಿಸಲು ಬಂದವರು ಮತ್ತೆ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಲು ಸಾಲು ನಿಲ್ಲಬೇಕಿಲ್ಲ. ದಟ್ಟಣೆ ಸಮಯದಲ್ಲಿ ಉಂಟಾಗುವ ಅವ್ಯವಸ್ಥೆಯನ್ನು ಇದು ತಡೆಯಲಿದೆ. ಪ್ರಯಾಣಿಕರು ನೇರವಾಗಿ ಪ್ರಯಾಣ ಬೆಳೆಸಬಹುದಾಗಿದೆ. ಮೆಟ್ರೋ ಪ್ರಯಾಣ ಉಚಿತವಾಗಿರುವುದರಿಂದಲೇ ಈ ಬಾರಿ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಸಾರಿಗೆಗೆ ಮೆಟ್ರೋವನ್ನು ಆಯ್ಕೆ ಮಾಡಲಿದ್ದಾರೆ, ಈ ಬಾರಿ ಮೆಟ್ರೋದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಬರುವವರ ಸಂಖ್ಯೆ ಅಧಿಕವಾಗಲಿದೆ.
ಆನ್ಲೈನ್ ಮ್ಯಾಚ್ ಟಿಕೆಟ್ ಮತ್ತು ಮೆಟ್ರೋ ಟಿಕೆಟ್ ವ್ಯವಸ್ಥೆಯ ಮೂಲಕ ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಾಟ ಮಾಡುವವರಿಗೂ ಕಡಿವಾಣ ಬೀಳಲಿದೆ. ಫ್ರಾಂಚೈಸಿಗಳ ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರ ಟಿಕೆಟ್ ಲಭ್ಯವಿದ್ದು, ಈ ಬಾರಿ ಬ್ಲ್ಯಾಕ್ ಟಿಕೆಟ್ ದಂಧೆ ವಿರುದ್ಧ ಆಯೋಜಕರು ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ. ಟಿಕೆಟ್ ಬೆಲೆಯಲ್ಲಿಯೂ ಏರಿಕೆ ಕಂಡಿದೆ.
ಆ್ಯಪ್ಗಳ ಮೂಲಕ ಐಪಿಎಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆಗಳು ಶುರುವಾಗಿದ್ದು, ಆನ್ಲೈನ್ನಲ್ಲಿ ಪಂದ್ಯಗಳನ್ನು, ಆಸನಗಳನ್ನು ಪಾರ್ಕಿಂಗ್ ಸೌಲಭ್ಯವನ್ನು ಪೂರ್ವ ಬುಕಿಂಗ್ ಮಾಡುವ ವ್ಯವಸ್ಥೆ ಇದೆ. ಮಿತ ಪ್ರಮಾಣದ ಪಾರ್ಕಿಂಗ್ ಸ್ಥಳಗಳು ಇರುವುದರಿಂದ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ