- * ಮೇ 10ರವರೆಗೆ ನಡೆಯಲಿರುವ ಕಲಾ ಪ್ರದರ್ಶನ
- * 150ಕ್ಕೂ ಹೆಚ್ಚು ಕಲಾವಿದರು ಭಾಗಿ
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು (ಸಿಕೆಪಿ) ಆಯೋಜಸಿರುವ ‘ನಮ್ಮ ಆರ್ಟ್ ಬೆಂಗಳೂರು’ ರಾಷ್ಟ್ರೀಯ ಮಟ್ಟದ ಕಲಾ ಮೇಳದ ಎರಡನೇ ಆವೃತ್ತಿಗೆ ಬುಧವಾರ ಚಾಲನೆ ದೊರೆಯಿತು.
ಮೇಳದಲ್ಲಿ ಭಾರತದಾದ್ಯಂತದ ಸುಮಾರು 150ಕ್ಕೂ ಹೆಚ್ಚು ಕಲಾವಿದರು ತಮ್ಮ ಸಮಕಾಲೀನ ಮತ್ತು ಸಾಂಪ್ರದಾಯಿಕ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದು, 70ಕ್ಕೂ ಹೆಚ್ಚು ಹಿರಿಯ ಅನುಭವಿ ಕಲಾವಿದರ ಕೃತಿಗಳು ಪ್ರದರ್ಶನದ ಆಕರ್ಷಣೆಯಾಗಿವೆ.
ಕಾರ್ಯಕ್ರಮದ ಉದ್ಘಾಟಿಸಿದ ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿ. ಅಧ್ಯಕ್ಷೆ ಗೀತಾಂಜಲಿ ವಿಕ್ರಮ್ ಮಾತನಾಡಿ, ಕಲೆಯು ಸಮಾಜದ ಸಂಸ್ಕೃತಿ, ಭಾವನೆ ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ಯುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳು ಅತ್ಯಂತ ಅಗತ್ಯ. ಕಲಾಸಕ್ತರು ಹಾಗೂ ಕಲಾಪ್ರೇಮಿಗಳು ಈ ಮೇಳದ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಮಾತನಾಡಿ, ಕಲಾವಿದರಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಈ ಮೇಳವನ್ನು ನಿರಂತರವಾಗಿ ನಡೆಸಲಾಗುವುದು. ಕಲಾವಿದರ ಪ್ರತಿಭೆಗೆ ವೇದಿಕೆ ನೀಡುವುದು, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಹಾಗೂ ಕಲಾ ಸಂಸ್ಕೃತಿಯನ್ನು ನಗರದಲ್ಲಿ ಮತ್ತಷ್ಟು ವಿಸ್ತರಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನ ಬೆಂಗಳೂರು ಕೇಂದ್ರದ ಅಧ್ಯಕ್ಷ ಕೆ.ಜಿ.ರಾಘವನ್, ಕಲಾ ಇತಿಹಾಸಕಾರ ಅಶ್ರಫಿ ಎಸ್. ಭಗತ್, ಪರಿಷತ್ತಿನ ಪದಾಧಿಕಾರಿಗಳು ಇದ್ದರು.
ಪರಿಷತ್ತಿನ ಆವರಣದಲ್ಲಿನ ಚಿತ್ತಾರ ಮಳಿಗೆಗಳು ಹಾಗೂ ಗ್ಯಾಲರಿಗಳಲ್ಲಿ ಮೇ 10 ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಪ್ರದರ್ಶನ ನಡೆಯಲಿದೆ. ಮೇ 7 ರಿಂದ 9ರವರೆಗೆ ಪರಿಷತ್ತಿನ ಆವರಣದಲ್ಲಿರುವ ಗಾಂಧಿ ಕುಟೀರದಲ್ಲಿ ಮಾಸ್ಟರ್ ಕ್ಲಾಸ್ ಮತ್ತು ಚರ್ಚಾಗೋಷ್ಠಿ ನಡೆಯಲಿದೆ. ಜತೆಗೆ ಮೇ 20ರವರೆಗೆ ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಕಲಾ ಇತಿಹಾಸಕಾರ್ತಿ ಲೀನಾ ವಿನ್ಸೆಂಟ್ ಅವರು ಕ್ಯುರೇಟ್ ಮಾಡಿರುವ ಕಲಾ ಪ್ರದರ್ಶನ ನಡೆಯಲಿದೆ.