- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2026
- ಅ.11ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ
- ಸಿಎಂ ನೇತೃತ್ವದ ಸಭೆಯಲ್ಲಿ ಅಧಿಕೃತ ದಿನಾಂಕ ನಿಗದಿ
ಬೆಂಗಳೂರು: ಅ.11ರಂದು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಅಧಿಕೃತ ದಿನಾಂಕ ನಿಗದಿಪಡಿಸಲಾಗಿದೆ.
ಅಕ್ಟೋಬರ್ 11ರ ಬೆಳಗ್ಗೆ 11ರಿಂದ 11.50ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಗೊಳ್ಳಲಿದೆ. ಅ.21ರಂದು ದಸರಾ ಜಂಬೂಸವಾರಿ ನಡೆಯಲಿದ್ದು, ಮಧ್ಯಾಹ್ನ 4 ಗಂಟೆ 10 ನಿಮಿಷಕ್ಕೆ ಮೀನಾ ಲಗ್ನದಲ್ಲಿ ಜಂಬೂ ಸವಾರಿಗೆ ಸಿಎಂ ಮತ್ತು ಗಣ್ಯರು ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ಆಗಸ್ಟ್ 26ರಂದು ಗಜಪಡೆಗೆ ಅರಮನೆಯಲ್ಲಿ ಪೂಜೆ ಸಲ್ಲಿಕೆ ನಡೆಯಲಿದ್ದು, ದಸರಾ ನಡುವೆಯೇ ಎರಡು ದಿನಗಳ ಕಾಲ ಕಂಬಳ ಆಯೋಜೆನೆಗೂ ಮನವಿ ಮಾಡಲಾಗಿದೆ. ಇದಕ್ಕೆ ಕಂಬಳ ಸಮಿತಿ ಪ್ರತ್ಯೇಕ ಅನುದಾನವನ್ನೂ ಕೋರಿದೆ. ಅಕ್ಟೋಬರ್ 18 ಮತ್ತು 19ರಂದು ಕಂಬಳ ನಡೆಸಲು ನಿರ್ಧರಿಸಲಾಗಿದೆ.
2025-26ನೇ ಸಾಲಿನ ದಸರಾಗೆ 45 ಕೋಟಿ ರೂ. ಖರ್ಚು ತಗುಲಿತ್ತು. ಈ ನಿಟ್ಟಿನಲ್ಲಿ, 2026-27ನೇ ಸಾಲಿಗೆ 50 ಕೋಟಿ ರೂ. ಅನುದಾನ ಮೀಸಲಿಡುವಂತೆ ಬೇಡಿಕೆ ಇಡಲಾಗಿದೆ. ಪ್ರಸ್ತುತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಕೋಟಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ಮತ್ತು ಅರಮನೆ ಮಂಡಳಿಯಿಂದ 5 ಕೋಟಿ ರೂ. ವೆಚ್ಚ ನಿಗದಿಯಾಗಿದೆ. ಆದರೆ, ಪ್ರಸಕ್ತ ವರ್ಷದ ದಸರಾಗೆ ಭಾರಿ ಅನುದಾನ ಹೆಚ್ಚಳಕ್ಕೆ ಕೋರಲಾಗಿದೆ.