Mysterious death of over 300 peacocks? 
ರಾಜ್ಯ

300ಕ್ಕೂ ಹೆಚ್ಚು ನವಿಲುಗಳ ನಿಗೂಢ ಸಾವು ?

ಮಾಗಡಿ :ಒಂದೆಡೆ ಮಳೆ ಕೊರತೆ, ಇನ್ನೊಂದೆಡೆ ಬೆಳೆ ರಕ್ಷಣೆಯ ಚಿಂತೆ... ಈ ನಡುವೆ ತಾಲೂಕಿನಾದ್ಯಂತ ರಾಷ್ಟ್ರೀಯ ಪಕ್ಷಿ ನವಿಲುಗಳು ಸಾಲುಸಾಲಾಗಿ ಉಸಿರು ಚೆಲ್ಲುತ್ತಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.
300ಕ್ಕೂ ಹೆಚ್ಚು ನವಿಲುಗಳು ಮೃತಪಟ್ಟಿವೆ ಎಂಬ ವದಂತಿ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ನಿಖರ ಅಂಕಿಸಂಖ್ಯೆ ಸಿಕ್ಕಿಲ್ಲ.
ಕುದೂರು, ಮಲ್ಲಪ್ಪನಕಟ್ಟೆ, ಮಡಿವಾಳರಕಟ್ಟೆ ಹಾಗೂ ಮಾರಪ್ಪನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ನವಿಲುಗಳು ಅನುಮಾನಾಸ್ಪದವಾಗಿ ಮೃತಪಡುತ್ತಿವೆ. ಜಮೀನಿನ ಬದಿಯಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಅಂದದ ಗರಿ ಬಿಚ್ಚಿ ಕುಣಿಯಬೇಕಿದ್ದ ನವಿಲುಗಳು ಜೀವವಿಲ್ಲದೆ ಬಿದ್ದಿರುವುದು ಕಣ್ಣಿಗೆ ಬೀಳುತ್ತಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ನವಿಲುಗಳ ದಿಢೀರ್ ಸಾವಿಗೆ ಸ್ಪಷ್ಟ ಕಾರಣ ತಿಳಿದಿಲ್ಲ. ಬೆಳೆಗಳಿಗೆ ಹೊಡೆಯುವ ತೀವ್ರತರವಾದ ಕೀಟನಾಶಕಯುಕ್ತ ಆಹಾರ ಅಥವಾ ನೀರನ್ನು ಸೇವಿಸಿ ನವಿಲುಗಳು ಮೃತಪಡುತ್ತಿವೆಯೇ?. ಕುಡಿಯಲು ನೀರು ಸಿಗದೆ, ಹಸಿವು-ತೃಷೆಯಿಂದ ಕೊನೆಯುಸಿರೆಳೆಯುತ್ತಿವೆಯೇ? ಹಕ್ಕಿ ಜ್ವರ ಅಥವಾ ಪಕ್ಷಿಗಳಿಗೆ ತಗುಲುವ ಇನ್ಯಾವುದೋ ಮಾರಕ ವೈರಸ್ ಈ ಭಾಗದ ಬಲಿ ಪಡೆಯುತ್ತಿದೆಯೆ?. ಅಥವಾ ಮಾಂಸ ಮತ್ತು ಸುಂದರ ಗರಿಗಳಿಗಾಗಿ ಶಿಕಾರಿ ನಡೆಸುವ ಜಾಲವೇನಾದರೂ ನವಿಲುಗಳಿಗೆ ವಿಷವಿಟ್ಟು ಕೊಲ್ಲುತ್ತಿದೆಯೇ? ಹೀಗೆ ಸಾಲು ಸಾಲು ಪ್ರಶ್ನೆಗಳು ಕಾಡುತ್ತಿದ್ದರೂ, ಅರಣ್ಯ ಇಲಾಖೆಯಿಂದ ಈವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಕಾಡಿನ ವನ್ಯಜೀವಿಗಳನ್ನು ರಕ್ಷಿಸಬೇಕಾದದ್ದು ಅರಣ್ಯ ಇಲಾಖೆಯ ಕರ್ತವ್ಯ. ಆದರೆ, ರಾಷ್ಟ್ರೀಯ ಪಕ್ಷಿ ನವಿಲುಗಳು ಸರಣಿಯಾಗಿ ಸಾವನ್ನಪ್ಪುತ್ತಿದ್ದರೂ ನೆಲಮಂಗಲ ಅರಣ್ಯ ಇಲಾಖೆ ಅಧಿಕಾರಿಗಳು ನಿದ್ರೆಯಲ್ಲಿದ್ದಾಯೇ ಎಂಬ ಅನುಮಾನ ನಾಗರಿಕರ ವಲಯದಲ್ಲಿ ಮೂಡಿಬಂದಿದೆ.
ಮೃತ ನವಿಲುಗಳನ್ನು ತಕ್ಷಣವೇ ಪ್ರಯೋಗಾಲಯಕ್ಕೆ ಕಳುಹಿಸಿ, ಸಾವಿಗೆ ಕಾರಣ ಸ್ಪಷ್ಟಪಡಿಸಬೇಕು. ಕುದೂರು, ಮಲ್ಲಪ್ಪನಕಟ್ಟೆ, ಮಡಿವಾಳರಕಟ್ಟೆ, ಮಾರಪ್ಪನಹಳ್ಳಿ ಭಾಗಗಳಲ್ಲಿ ವಿಶೇಷ ಅರಣ್ಯ ಗಸ್ತು ಪಡೆ ನಿಯೋಜಿಸಿ, ಶಿಕಾರಿ ಜಾಲದ ಮೇಲೆ ಕಣ್ಣಿಡಬೇಕು. ಕಾಡಂಚಿನ ಭಾಗಗಳಲ್ಲಿ ವನ್ಯಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಬೇಕು. ಕೀಟನಾಶಕಗಳ ಸುರಕ್ಷಿತ ಬಳಕೆ ಮತ್ತು ನವಿಲುಗಳ ರಕ್ಷಣೆ ಕುರಿತು ಅರಣ್ಯ ಇಲಾಖೆ ತಾಲೂಕಿನಾದ್ಯಂತ ಜಾಗೃತಿ ಮೂಡಿಸಬೇಕು. ತುಮಕೂರು, ನೆಲಮಂಗಲ ತಾಲೂಕುಗಳಲ್ಲಿ ನವಿಲುಗಳು ಸಾವಿನ ಪ್ರಕರಣಗಳು ದಾಖಲಾಗಿದ್ದಾಗ ಹಕ್ಕಿ ಜ್ವರದಿಂದ ಕೊನೆಯುಸಿರೆಳೆದಿವೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದರು. ಅದೇ ರೀತಿ ಇಲ್ಲಿನ ನವಿಲುಗಳ ಸಾವಿನ ಹಿಂದಿನ ಸತ್ಯ ಬಯಲಾಗಬೇಕಿದೆ.
ಕುದೂರು ವ್ಯಾಪ್ತಿಯಲ್ಲಿ 2 ನವಿಲುಗಳು ಮೃತಪಟ್ಟಿರುವ ಬಗ್ಗೆ ದೂರು ಬಂದವು. ಅಷ್ಟರಲ್ಲಿ ಸ್ಥಳಕ್ಕೆ ತೆರಳುವಷ್ಟರಲ್ಲಿ ನವಿಲು ಮೃತದೇಹಗಳನ್ನು ನಾಯಿಗಳು ಚಿದ್ರಗೊಳಿಸಿದವು.
ಮಂಜುನಾಥ್, ವಲಯ ಅರಣ್ಯಾಧಿಕಾರಿ ನೆಲಮಂಗಲ
ನವಿಲು ಮೃತಪಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು. ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದು ಅವುಗಳನ್ನು ರಕ್ಷಣೆ ಮಾಡಬೇಕು.
ಹೊಸಪಾಳ್ಯ ಲೋಕೇಶ್, ತಾಲೂಕು ರೈತಸಂಘದ ಅಧ್ಯಕ್ಷ