DK Shivakumar 
ರಾಜ್ಯ

ಅಧಿಕಾರ ಹಂಚಿಕೆ ವಿಚಾರ: ನನ್ನ ಸಂಖ್ಯೆ 140, ಪಕ್ಷ ನನ್ನ ಹಿತ ಕಾಯಲಿದೆ ಎಂದ DK ಶಿವಕುಮಾರ್​

ಬೆಂಗಳೂರು: ನನ್ನದು ಯಾವುದೇ ಬಣವಿಲ್ಲ. ಒಂದು ಬಣವಿದೆ, ಅದು 'ಕಾಂಗ್ರೆಸ್ ಬಣ'.‌ ನನ್ನ ಸಂಖ್ಯೆ 140. ಸಾಮೂಹಿಕ ನಾಯಕತ್ವದಲ್ಲಿ ಈ ಪಕ್ಷವನ್ನು ಕಟ್ಟಲಾಗಿದೆ ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ಪಕ್ಷಕ್ಕೆ ನಾನೊಬ್ಬನೆ ದುಡಿದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ, ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ಶಾಸಕರ ಶ್ರಮದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದೇವೆ. ಇದನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಹಾಗೂ ನಾನು ಭೇಟಿ ಮಾಡಿ ಚರ್ಚಿಸಿದ್ದೇವೆ" ಎಂದರು.
ಎರಡೂವರೆ ವರ್ಷ ನಿಮಗೆ ಮೀಸಲಿಟ್ಟಿರುವ ಸಮಯವೇ ಎಂದು ಕೇಳಿದಾಗ, "ಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ. ಅದನ್ನೆಲ್ಲಾ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ನಮ್ಮನ್ನು ಗುರುತಿಸಿದೆ. ನಾನು, ಸಿದ್ದರಾಮಯ್ಯ ಅವರು ಹಾಗೂ ಪಕ್ಷದ ಎಲ್ಲಾ ಸಚಿವರು, ಶಾಸಕರು, ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಎಲ್ಲ ಚುನಾವಣೆಯಲ್ಲೂ ಒಟ್ಟಿಗೆ ಕೆಲಸ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಹುದ್ದೆ ಮುಖ್ಯವಲ್ಲ

"ಮುಖ್ಯಮಂತ್ರಿ ಹುದ್ದೆ ಅಥವಾ ಉನ್ನತ ಅಧಿಕಾರ ಮುಖ್ಯವಲ್ಲ. ಪಕ್ಷದ ಎಲ್ಲರೊಡನೆ ಒಟ್ಟಾಗಿ ಕೆಲಸ ಮಾಡಿ, ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ‌ ತರುವುದು ಮುಖ್ಯ" ಎಂದರು.

ಸೂಕ್ತ ಸಮಯದಲ್ಲಿ ಪಕ್ಷ ತೀರ್ಮಾನ ಮಾಡಲಿದೆ

ನಿಮಗೆ ನಾಯಕತ್ವ ನೀಡಬೇಕು ಎಂದು ದೆಹಲಿಗೆ ಒಂದಷ್ಟು ಜನ ಶಾಸಕರು ತೆರಳಿ ಹೈಕಮಾಂಡ್ ಭೇಟಿಗೆ ಪ್ರಯತ್ನಿಸಿದ್ದಾರೆ ಹಾಗೂ ಮರಳಿ ಬಂದಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, "ನನಗೆ ಇದರ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಯವರು ಸಂಪುಟ ಪುನರ್ ರಚನೆ ಮಾಡಲಾಗುವುದು ಎಂದಿದ್ದಾರೆ. ಎಲ್ಲರಿಗೂ ಮಂತ್ರಿಯಾಗಬೇಕು ಎನ್ನುವ ಆಸೆ ಇರುತ್ತದೆ. ಆದ ಕಾರಣಕ್ಕೆ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ. ಸಚಿವ ಸ್ಥಾನದ ಆಕಾಂಕ್ಷೆ ಇರುವುದರ ಬಗ್ಗೆ ನಾನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನನ್ನ ಪರವಾಗಿ ಯಾರೂ ಮಾತನಾಡುವುದು ಬೇಡ. ಪಕ್ಷ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳಲಿದೆ. ಅಧಿಕಾರದ ಬಗ್ಗೆ ಏನೇ ಚರ್ಚೆಯಗಿದ್ದರೂ ಅದು ನಾಲ್ಕು ಗೋಡೆಗಳ ಮಧ್ಯೆ ಆಗಿದೆ. ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ" ಎಂದರು.
"ಮುಖ್ಯಮಂತ್ರಿ ಹುದ್ದೆ, ಅಧಿಕಾರ ಹಸ್ತಾಂತರ ಈ ಎಲ್ಲದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು ಸೇರಿದಂತೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸುತ್ತಾರೆ. ಅವರುಗಳು ಸೂಕ್ತ ತೀರ್ಮಾನ ಮಾಡುತ್ತಾರೆ" ಎಂದರು.