ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿ ಕಳ್ಳತನ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬುಧವಾರ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಬಾಗೇವಾಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದಿನ್, ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ ಹಾಗೂ ಬಾಗೇವಾಡಿ ಸಿಪಿಐ ಗುರುಶಾಂತ ದಾಸ್ಯಳ ಮತ್ತಿತರರಿದ್ದರು.
- ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ
- ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ
- ಪರಿಶೀಲನೆ
ಢವಳಗಿ : ಸಮೀಪದ ಬಸರಕೋಡ ಗ್ರಾಮದಲ್ಲಿ ಜು. 6ರಂದು ಶ್ರೀ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬುಧವಾರ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ದೇವಸ್ಥಾನದ ಸಮಿತಿಯಿಂದ ಮಾಹಿತಿ ಸಂಗ್ರಹಿಸಿದರು.
ನಂತರ ಮಾತನಾಡಿದ ಅವರು, ಕಳ್ಳರನ್ನು ಹಿಡಿಯುವುದೇ ನಮ್ಮ ಗುರಿ. ಈಗಾಗಲೇ ಬಾಗೇವಾಡಿ ಡಿವೈಎಸ್ಪಿ, ಮತ್ತು ಮುದ್ದೇಬಿಹಾಳ ಸಿಪಿಐ ಹಾಗೂ ಪಿಎಸ್‌ಐ ಅವರ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆದಿದೆ. ಈಗಾಗಲೇ ಪೊಲೀಸ್ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಮನೆ ಮನೆಗೆ, ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ತೆರಳಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ತಿಳಿ ಹೇಳಲಾಗಿದೆ. ಇಲ್ಲಿಯ ವಿಚಾರದಲ್ಲಿ ಜೂ. 27ನೇ ತಾರೀಖಿನಂದು ಸಿಸಿ ಕ್ಯಾಮರಾಗಳು ಬಂದ್ ಆಗಿವೆ. ಕಳ್ಳತನದ ದಿನ ಅಲ್ಲಿ ಹತ್ತು, ಹನ್ನೊಂದು ಜನ ಮಲಗಿದ್ದರು. ತನಿಖೆಯಲ್ಲಿ ಹಲವಾರು ಪ್ರಶ್ನೆಗಳು ಇವೆ. ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತದೆ. ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದಕ್ಕಾಗಿ ಕಟ್ಟು ನಿಟ್ಟಿನ ಕಾರ್ಯಾಚರಣೆ ಮತ್ತು ಅತಿಯಾದ ಮುತುವರ್ಜಿ ವಹಿಸಿ ಕಾರ್ಯಾಚರಣೆ ಮಾಡಲಾಗುವುದು. ಆದಷ್ಟು ಬೇಗ ಕಳ್ಳತನವಾದ ಮೂರ್ತಿಯನ್ನು ಪತ್ತೆಹಚ್ಚಲಾಗುತ್ತದೆ. ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಬಾಗೇವಾಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದಿನ್, ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ ಹಾಗೂ ಬಾಗೇವಾಡಿ ಸಿಪಿಐ ಗುರುಶಾಂತ್ ದಾಸ್ಯಳ ಮತ್ತಿತರರಿದ್ದರು.