ದೊಡ್ಡಬಳ್ಳಾಪುರದ ಶ್ರೀ ಮುತ್ಯಾಲಮ್ಮದೇವಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಮುತ್ಯಾಲಮ್ಮ ಸೇವಾ ಸಮಿತಿ ದತ್ತಿ ಅಧ್ಯಕ್ಷ ಎಚ್​.ಹನುಮಂತು, ಗೌರವಾಧ್ಯಕ್ಷ ಡಿ.ಬಿ.ಹನುಮಂತರಾವ್​, ಉಪಾಧ್ಯಕ್ಷ ಕೆ.ನಾಗೇಶ್​, ಕಾರ್ಯದರ್ಶಿ ಆರ್​.ಪ್ರಭಾಕರ್​, ಜೆ.ವೈ.ಮಲ್ಲಪ್ಪ, ಡಿ.ಎನ್​.ತಿಮ್ಮರಾಜು, ಜೆ.ಕುಮಾರ್​, ಅಪ್ಪಿ ವೆಂಕಟೇಶ್​, ಟಿ.ಮಂಜುನಾಥ್​, ಟಿ.ಗೋವಿಂದರಾಜು, ಎಚ್​.ಅನಂತ ಭಾಗವಹಿಸಿದ್ದರು. 
ರಾಜ್ಯ

ಮುತ್ಯಾಲಮ್ಮ ರಥೋತ್ಸವ ಸಂಪನ್ನ / DODABALLAPUR

ದೊಡ್ಡಬಳ್ಳಾಪುರ : ನಗರದ ಶಾಂತಿನಗರದಲ್ಲಿರುವ ನಗರ ದೇವತೆ ಶ್ರೀ ಮುತ್ಯಾಲಮ್ಮದೇವಿ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದಲ್ಲಿ ವಿವಿಧ ಸಾಂಸತಿಕ ಕಲಾ ತಂಡಗಳು ಭಾಗವಹಿಸಿದ್ದವು.
ಮೆರವಣಿಗೆಯಲ್ಲಿ ದೊಡ್ಡಬಳ್ಳಾಪುರ ನಗರ, ಶಾಂತಿನಗರ, ದರ್ಗಾಜೋಗಿಹಳ್ಳಿ, ನಾಗಸಂದ್ರ, ಕಚೇರಿಪಾಳ್ಯ, ಕೊಡಿಗೇಹಳ್ಳಿ, ಕುರುಬರಹಳ್ಳಿ ಮತ್ತು ರೋಜಿಪುರ ಗ್ರಾಮಗಳಿಂದ ನೂರಾರು ಮಹಿಳೆಯರು ಹೊಂಬಾಳೆ ಹಾಗೂ ತಂಬಿಟ್ಟಿನ ಆರತಿ ಅರ್ಪಿಸಿದರು.
ಶ್ರೀ ಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಜಾತ್ರಾ ಮಹೋತ್ಸವದ ಭಾಗವಾಗಿ ಮಂಗಳವಾರ ಬೆಳಗ್ಗೆ 10.30ಕ್ಕೆ ದೇವಾಲಯದಿಂದ ರಥೋತ್ಸವವು ಆರಂಭವಾಯಿತು. ಶಾಂತಿನಗರದ ಮುಖ್ಯರಸ್ತೆ ಮೂಲಕ ಮುಗುವಾಳಪ್ಪ ವೃತ್ತದವರೆಗೆ ಸಂಚರಿಸಿ ಬಳಿಕ ದೇವಾಲಯಕ್ಕೆ ಹಿಂದಿರುಗಿತು. ವಿವಿಧೆಡೆ ಅರವಂಟಿಕೆಗಳು ಆಯೋಜನೆಗೊಂಡಿದ್ದವು. ಸಹಸ್ರಾರು ಜನರು ಪಾಲ್ಗೊಂಡು ಮುತ್ಯಾಲಮ್ಮ ಹಾಗೂ ದೊಡ್ಡಮ್ಮ ದೇವಿಗೆ ಪೂಜೆ ಸಲ್ಲಿಸಿದರು.
ಸಾಂಸತಿಕ ಕಾರ್ಯಕ್ರಮ : ಶ್ರೀ ಮುತ್ಯಾಲಮ್ಮ ಸಾಂಸತಿಕ ಸೇವಾ ಸಮಿತಿಯಿಂದ ವಿವಿಧ ಸಾಂಸತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡೊಳ್ಳುಕುಣಿತ, ಶಿವತಾಂಡವ, ವೀರಗಾಸೆ, ಭದ್ರಕಾಳಿ, ಗಾರುಡಿ ಗೊಂಬೆಗಳು, ಮರಗಾಲು ಮನುಷ್ಯ, ವೀರಭದ್ರನ ಕುಣಿತ, ಪೂಜಾ ಕುಣಿತ, ತಮಟೆ, ಡ್ರಮ್ಸ್​ ಸೇರಿ ಹಲವು ತಂಡಗಳು ಪಾಲ್ಗೊಂಡಿದ್ದವು. ರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಇಡೀ ಆವರಣವನ್ನು ವಿದ್ಯುದ್ದೀಪಾಲಂಕಾರದಿಂದ ಆಕರ್ಷಣೀಯಗೊಳಿಸಲಾಗಿತ್ತು.
ಗಮನ ಸೆಳೆದ ಅಲಂಕಾರ : ಈ ಬಾರಿಯ ವಿಶೇಷವಾಗಿ ನಗರದೇವತೆ ಮುತ್ಯಾಲಮ್ಮ ದೇವಿ ಮೂಲ ವಿಗ್ರಹಕ್ಕೆ ಚಾಮುಂಡೇಶ್ವರಿ ಅಲಂಕಾರ ಮಾಡಲಾಗಿದ್ದು, ಭಕ್ತರ ಆಕರ್ಷಣೆಗೆ ಪಾತ್ರವಾಯಿತು. ಸಾವಿರಾರು ಮಂದಿ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾದರು.
ಹಗಲು ಪರಿಷೆ : ಜಾತ್ರೆಯ ಅಂಗವಾಗಿ ಬುಧವಾರ ಹಗಲು ಪರಿಷೆ ನಡೆಯಲಿದೆ. ಜಾತ್ರೆಯಲ್ಲಿ ಹತ್ತಾರು ಅಂಗಡಿ ಮಳಿಗೆಗಳು ತಲೆಯೆತ್ತಿದ್ದು, ಆಟಿಕೆಗಳು, ತರಹೆವಾರಿ ಕ್ರೀಡಾ ಚಟುವಟಿಕೆಗಳು ಗಮನ ಸೆಳೆಯುತ್ತಿವೆ. ದೇವಾಲಯದ ಆವರಣದಲ್ಲಿ ವಿವಿಧ ದೇವರ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಆಕರ್ಷಣೀಯವಾಗಿವೆ.