cm siddaramaiah 
ರಾಜ್ಯ

ಮೇ 16ಕ್ಕೆ ಮುಸ್ಲೀಂ ಸಮಾವೇಶ ನಡೆಸಲು ನಿರ್ಣಯ: ಕಾಂಗ್ರೆಸ್ ಬಗ್ಗೆ ಮುಸ್ಲೀಂ ಮುಖಂಡರ ಅಸಮಾಧಾನ

ಪ್ರಮುಖ ಮುಖ್ಯಾಂಶಗಳು

  • ಮೇ 16 ಟೌನ್ ಹಾಲ್ ನಲ್ಲಿ ಸಂಘಟಿಸುವ ಮುಸ್ಲೀಂ ಸಮಾವೇಶ
  • ಕರ್ನಾಟಕ ಮುಸ್ಲಿಂ ಸಮಾವೇಶಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ಇಲ್ಲ.
ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಮರನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಲೀಂ ಮುಖಂಡರು, ಕಾಂಗ್ರೆಸ್ ಹೀಗೆಯೇ ತನ್ನ ನಡೆಯನ್ನು ಮುಂದುವರಿಸಿದರೆ, ಸಮುದಾಯ ತನ್ನ ಆಯ್ಕೆಗಳನ್ನು ಮುಕ್ತವಾಗಿಡಲು ತೀರ್ಮಾನಿಸಿದೆ.
ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು, ಸಂಘ ಸಂಸ್ಥೆಗಳು, ಉಲೇಮಾ ಸಂಘಟನೆಗಳು, ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (ಕೆಆರ್‌ಎಂಒ) ಅಡ್ ಹಾಕ್ ಸಮಿತಿಯ ಸದಸ್ಯರುಗಳು ಶಿವಾಜಿನಗರದ ಖಾಸಗಿ ಹೋಟೆಲ್ನಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಮೇ 16 ಟೌನ್ ಹಾಲ್ ನಲ್ಲಿ ಸಂಘಟಿಸುವ ಮುಸ್ಲೀಂ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದ್ದೇನು ? ಮಾಡಿದ್ದೇನು ? ಮುಂದೇನು ? ವರದಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ವರದಿಯನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಸಂದೇಶ ರವಾನಿಸಬೇಕು ಎಂದು ನಿರ್ಣಯಿಸಲಾಗಿದೆ.
ಕರ್ನಾಟಕ ಮುಸ್ಲಿಂ ಸಮಾವೇಶಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ಇರುವುದಿಲ್ಲ. ಬಿಡುಗಡೆಯಾದ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಕಾರ್ಯವೈಖರಿ ಕುರಿತ ವರದಿಯನ್ನು ಸಭೆಯ ಬಳಿಕ ಸಿಎಂ, ಡಿಸಿಎಂ, ಸಚಿವರು ಹಾಗು ಶಾಸಕರುಗಳಿಗೆ ತಲುಪಿಸಬೇಕು ಎಂದು ನಿರ್ಧರಿಸಲಾಯಿತು. ಅಂದಿನ ಸಮಾವೇಶಕ್ಕೆ ಪ್ರತಿಯೊಂದು ಜಿಲ್ಲೆಯಿಂದಲೂ ಜನರು ಬರುವ ಹಾಗೆ ಎಲ್ಲ ಸಂಘಟನೆಗಳು, ಸಂಘ ಸಂಸ್ಥೆಗಳು, ಜಮಾಅತ್ ಗಳು ಶ್ರಮಿಸಬೇಕು ಎಂದು ಕರೆ ಕೊಡಲಾಗಿದೆ.
ಶನಿವಾರ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ನಾಯಕರು, ಹಿರಿಯ ಉಲೇಮಾಗಳು, ಜಮಾಅತ್‌ಗಳ ಮುಖಂಡರು, ವಕೀಲರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ಆಕ್ಟಿವಿಸ್ಟ್‌ಗಳು, ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಅಡ್ ಹಾಕ್ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ರಾಜ್ಯ ಸರ್ಕಾರದ ಮೂರು ವರ್ಷಗಳ ಕಾರ್ಯವೈಖರಿ ಹಾಗು ಮುಸ್ಲಿಂರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ಭರವಸೆಗಳು ಎಷ್ಟು? ಈ ಸರ್ಕಾರದಲ್ಲಿ ಪ್ರಾತಿನಿಧ್ಯದ ವಿಷಯದಲ್ಲಿ ಮುಸ್ಲಿಮರು ಎದುರಿಸಿದ ತಾರತಮ್ಯ ಹಾಗೂ ಬೇಡಿಕೆಗಳ ಕುರಿತ ಸಂಪೂರ್ಣ ವರದಿಯನ್ನು ಬುಧವಾರದ ಸಭೆಯಲ್ಲಿ ಮಂಡಿಸಲಾಯಿತು.
ವರದಿಯಲ್ಲಿರುವ ಹಿಜಾಬ್ ನಿರ್ಬಂಧ, ಮೀಸಲಾತಿ ರದ್ದತಿ, ದ್ವೇಷ ಭಾಷಣ - ದ್ವೇಷ ಅಪರಾಧ, ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಫ ವಿಷಯ, ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ - ಶಿಕ್ಷಣ ಕ್ಷೇತ್ರದ ಅನುದಾನ ಸಹಿತ ವಿವಿಧ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

*ಮೇ 16 ಟೌನ್ ಹಾಲ್ ನಲ್ಲಿ ಸಂಘಟಿಸುವ ಮುಸ್ಲೀಂ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದ್ದೇನು ? ಮಾಡಿದ್ದೇನು ? ಮುಂದೇನು ? ವರದಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.