ಗುಳೇದಗುಡ್ಡದಲ್ಲಿ ವಿಶ್ವ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ನಡೆದ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಮುರುಘಾಮಠದ ಕಾಶೀನಾಥ ಸ್ವಾಮಿಗಳು ತಂಬೂರಿ ಮೀಟುವ ಮೂಲಕ ಉದ್ಘಾಟಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಡಾ. ವೆಂಕಟೇಶ ಪೂಜಾರ, ಶ್ರೀಶೈಲ ಕರಿಶಂಕರಿ ಮತ್ತಿತರರಿದ್ದರು.
- ಮುರುಘಾಮಠದ ಕಾಶೀನಾಥ ಸ್ವಾಮಿ ಹೇಳಿಕೆ
- ವಿಶ್ವ ಯೋಗ ಸಂಭ್ರಮ ಕಾರ್ಯಕ್ರಮ
ಗುಳೇದಗುಡ್ಡ: ಯೋಗ ಮತ್ತು ಸಂಗೀತವು ಮನುಷ್ಯನ ದೇಹ-ಮನಸ್ಸಿನ ಸಮತೋಲನಕ್ಕೆ ಪೂರಕವಾಗಿದ್ದು, ಇಂದಿನ ಯಾಂತ್ರಿಕ ಬದುಕಿನಲ್ಲಿ ಯುವಕರು ಇವುಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಮುರುಘಾಮಠದ ಕಾಶೀನಾಥ ಸ್ವಾಮಿಗಳು ಹೇಳಿದರು.
ಪಟ್ಟಣದ ಸಾಲೇಶ್ವರ ದೇವಸ್ಥಾನದ ಆವರಣದಲ್ಲಿ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ ಸಮಿತಿ, ಬಾಗಲಕೋಟೆ ವತಿಯಿಂದ ವಿಶ್ವ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತವು ಯೋಗದಷ್ಟೇ ಮಹತ್ವ ಹೊಂದಿದ್ದು, ಮಾನಸಿಕ ಒತ್ತಡ ನಿವಾರಿಸಿ ಆರೋಗ್ಯ ಕಾಪಾಡುವ ಶಕ್ತಿಯಿದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಸಂಗೀತ ಕಲಿಕೆಗೆ ಪಾಲಕರ ಪ್ರೋತ್ಸಾಹದ ಜೊತೆಗೆ ಮಕ್ಕಳ ಆಸಕ್ತಿ ಮುಖ್ಯವಾಗಿದೆ. ದೇಶಿ ಸಂಸ್ಕೃತಿಯ ಉಳಿವಿಗೆ ಸಂಗೀತ ಶಿಕ್ಷಣ ಅಗತ್ಯವಾಗಿದ್ದು, ಶಾಲೆಗಳಲ್ಲಿ ಸಂಗೀತ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ವಿಶ್ವ ಸಂಗೀತ ದಿನಾಚರಣೆ ಕುರಿತು ಡಾ. ವೆಂಕಟೇಶ ಪೂಜಾರ ಉಪನ್ಯಾಸ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಉಪನ್ಯಾಸಕ ಶಾಂತಗೌಡ ಎಲ್. ಪಾಟೀಲ, ಡಾ. ವಿ.ಎ. ಬೆನಕನಾಳ, ಚನ್ನಪ್ಪ ಗಿಡ್ಡಪ್ಪಗೋಳ, ಕಾರ್ಯದರ್ಶಿ ಶಂಕರ ಲಮಾಣಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬಳಿಕ ಜಯತೀರ್ಥ ತಾಸಗಾಂವ ಅವರಿಂದ ಹಿಂದೂಸ್ತಾನಿ ಗಾಯನ, ವೈಷ್ಣವಿ ಗೂಳಿ ಹಾಗೂ ರೇಖಾ ಮಡಿವಾಳ ಅವರಿಂದ ಸುಗಮ ಸಂಗೀತ, ಪವಿತ್ರಾ ಜಕ್ಕಪ್ಪನವರ ತಂಡದಿಂದ ಜಾನಪದ ಸಂಗೀತ, ಚಿದಾನಂದ ಕಾಟವಾ ಅವರಿಂದ ತತ್ವಪದ, ಯಲ್ಲಪ್ಪ ಪೂಜಾರ ತಂಡದಿಂದ ದಾಸವಾಣಿ, ಕಷ್ಣಪ್ಪ ಬೇನೂರ ಅವರಿಂದ ವಚನ ಸಂಗೀತ ಹಾಗೂ ಬನಶ್ರೀ ತಂಡದಿಂದ ಕೋಲಾಟ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.