ಬಳಿಕ ತನಿಖೆಗಿಳಿದ ಇನ್ಸ್ಪೆಕ್ಟರ್ ಸಾದಿಕ್ ಪಾಷ ಅವರ ನೇತೃತ್ವದಲ್ಲಿ ಸುನೀಲ್ ಭಾಸಗಿ, ಸಚಿನ್, ಪ್ರವಿಣ್, ಫೈರೋಜ್, ನಾರಾಯಣಸ್ವಾಮಿ, ಗಣಪತಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.
ದೊಡ್ಡಬಳ್ಳಾಪುರ : ವಿನಾಯಕ ನಗರದಲ್ಲಿ ಹೊಸ ವರ್ಷದಂದೇ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ನಿವಾಸಿಗಳಾದ ಉಜ್ವಲ್ ಪ್ರಸಾದ್ (29), ಸೂರಜ್ ರಾಮ್ (24), ಪ್ರಿನ್ಸ್ (26) ಮತ್ತು ಕಾನೂನು ಸಂರ್ಷಕ್ಕೊಳಟ್ಟ ಶಾಲೆ ಬಿಟ್ಟ 17 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲರೂ ಕಾರ್ಖಾನೆ ಕಾರ್ಮಿಕರು ಮತ್ತು ಉತ್ತರ ಪ್ರದೇಶದ ನಿವಾಸಿಗಳಾಗಿದ್ದು, 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಒಡಿಶಾ ಮೂಲದ ಸುಮಂತ ಜಮೀಂದರ್ (23) ಕೊಲೆಯಾದವ.
ಘಟನೆ ಹಿನ್ನೆಲೆ: ಬಾಶೆಟ್ಟ್ಟಿಹಳ್ಳಿಯ ವಿನಾಯಕ ನಗರದಲ್ಲಿ ಹೊಸ ವರ್ಷದಂದು ಸುಮಂತ ಜಮೀಂದರ್ ಮತ್ತು ಸ್ನೇಹಿತ ನಿಖಿಲ್ ಪಾರ್ಟಿ ಮಾಡಿ ಜ.1ರಂದು ರಾತ್ರಿ 12.30ರ ವೇಳೆಗೆ ಮನೆಯ ಕೆಳಗೆ ಬಂದಿದ್ದರು. ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಆರೋಪಿತ ನಾಲ್ವರು ಬೆಂಕಿಕಡ್ಡಿ ಕೇಳಿದ್ದಾರೆ. ಇಲ್ಲ ಎಂದರೂ ಬಿಡದೆ ತಂದು ಕೊಡುವಂತೆ ಸುಮಂತ್ಗೆ ಒತ್ತಾಯಿಸಿದ್ದರು. ಈ ವೇಳೆ ವಾಗ್ವಾದ ನಡೆದು ಸುಮಂತ್ಗೆ ಆರೋಪಿಗಳು ಥಳಿಸಿದ್ದಾರೆ. ಸುಮಂತ್ ಪ್ರಾಣ ಉಳಿಸಿಕೊಳ್ಳಲು ಮನೆಗೆ ಓಡಿಹೋಗಿದ್ದಾನೆ. ಆದರೂ, ಬಿಡದ ಆರೋಪಿಸಿಗಳು ಹಿಂಬಾಲಿಸಿ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ವೇಳೆ ಜತೆಯಲ್ಲಿದ್ದ ನಿಖಿಲ್ ಗಾಬರಿಗೊಂಡು, ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದ ಮತ್ತೊಬ್ಬ ಸ್ನೇಹಿತನಿಗೆ ಗಲಾಟೆಯಲ್ಲಿ ಗಾಯವಾಗಿದೆ, ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ಪತ್ತೆಯಾಗಿರಲಿಲ್ಲ. ಆದರೆ, ನೈಟ್ ಶಿಫ್ಟ್ ಮುಗಿಸಿಕೊಂಡು ಬಂದ ನಿಖಿಲ್ ಸ್ನೇಹಿತನಿಗೆ ಸುಮಂತ್ ಶವದ ರೂಪದಲ್ಲಿ ಪತ್ತೆಯಾಗಿದ್ದು, ಮಾಹಿತಿ ತಿಳಿದ ಸುಮಂತ್ ಭಾವ ಇದು ಕೊಲೆಯೆಂದು ಶಂಕಿಸಿ ದೂರು ದಾಖಲಿಸಿದ್ದರು.
ಎಸ್ಪಿ ಎಂ.ವಿ. ಚಂದ್ರಕಾಂತ್, ಎಎಸ್ಪಿ ವೆಂಕಟೇಶ್ ಪ್ರಸನ್ನ, ನಾಗರಾಜು, ಡಿವೈಎಸ್ಪಿ ಪಾಂಡುರಂಗ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಸ್ಥಳ ಪರಿಶೀಲಿಸಿ, ತನಿಖೆ ಆರಂಭಿಸಿದ್ದರು.
ಇದರ ನಡುವೆ, ನಿಖಿಲ್ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಂಡು ರೈಲು ಮೂಲಕ ಒಡಿಶಾ ಕಡೆ ಹೋಗಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡಿ ಪ್ರಕರಣದ ಮಾಹಿತಿ ನೀಡಿದ್ದಾನೆ. ಕೊಲೆ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು, ಹಾಗಾಗಿ ಭಯದಿಂದ ಊರಿಗೆ ಹೋಗಿದ್ದೆ ಎಂದು ನಿಖಿಲ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.
ಬಳಿಕ ತನಿಖೆಗಿಳಿದ ಇನ್ಸ್ಪೆಕ್ಟರ್ ಸಾದಿಕ್ ಪಾಷ ಅವರ ನೇತೃತ್ವದಲ್ಲಿ ಸುನೀಲ್ ಭಾಸಗಿ, ಸಚಿನ್, ಪ್ರವಿಣ್, ಫೈರೋಜ್, ನಾರಾಯಣಸ್ವಾಮಿ, ಗಣಪತಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.