ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
- ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು: ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿಯಾಗುತ್ತಿದ್ದಾಳೆ ಎಂದು ಮತ್ತುಬರುವ ನಿದ್ರೆ ಮಾತ್ರೆ ನೀಡಿ, ಕುತ್ತಿಗೆಗೆ ದುಪ್ಪಟ್ಟ ಸುತ್ತಿ ಹತ್ಯೆ ಮಾಡಿದ್ದ ಅಪರಾಧಿಗೆ 71ನೇ ಸಿಸಿಎಚ್ ನ್ಯಾಯಾಲಯದ ನ್ಯಾ. ಕೃಷ್ಣಮೂರ್ತಿ ಅವರು ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ನಾರಾಯಣಪುರ ನಿವಾಸಿ ವಿನಯ್ ಕುಮಾರ್ (33) ಜೀವಾವಧಿ ಶಿಕ್ಷೆಗೆ ಒಳಗಾದವನು. ಆತನ ಪತ್ನಿ ಡಿ.ಅಶ್ವಿನಿ (29) ಹತ್ಯೆಯಾದವಳು. ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಪ್ರಿಲ್ 16, 2021 ರಂದು ಈ ಘಟನೆ ನಡೆದಿತ್ತು. ಮೃತಳ ಸಂಬಂಧಿಕರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ವಿನಯ್ ಕುಮಾರ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಕೊಲೆ ಕೃತ್ಯದಿಂದ ಭಾಗಿದ್ದ ಹಾಗೂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ರೂಪಾ, ಚಾಮರಾಜನಗರದ ಶೇಷಾದ್ರಿ, ಚಂದ್ರು, ನಾಗರತ್ನಾ, ಮಾಲಾ ಸೇರಿ 6 ಜನರ ವಿರುದ್ಧ ಮಹಾದೇವರಪುರ ಠಾಣೆಯಲ್ಲಿ 17.4.2021ರಂದು ಪ್ರಕರಣ ದಾಖಲಾಗಿತ್ತು.
ಅಪರಾಧಿ ವಿನಯ್ ಕುಮಾರ್ ಕಾಲೇಜಿನಲ್ಲಿ ಡಿ. ಅಶ್ವಿನಿಯನ್ನು ಪ್ರೀತಿಸುತ್ತಿದ್ದನು.ಈ ವಿಷಯ ಕುಟುಂಬಸ್ಥರಿಗೆ ತಿಳಿದು ಇಬ್ಬರನ್ನು ಹಾಸನ ಜಿಲ್ಲೆ ಹೊಳೇನರಸೀಪುರಲ್ಲಿ 2018 ರಂದು ಅದ್ಧೂರಿಯಾಗಿ ಮದುವೆ ಮಾಡಿಸಿದ್ದರು.
ವಿನಯ್ ಕುಮಾರ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರಿಂದ ಮಹಾದೇವಪುರ ಕಾವೇರಿ ವಾಟರ್ ಟ್ಯಾಂಕ್ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪತ್ನಿಯೊಂದಿಗೆ ವಾಸವಾಗಿದ್ದನು. ರೂಪಾ ಎಂಬುವಳ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪಿ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ನಿನಗೆ ಮಕ್ಕಳು ಆಗಿಲ್ಲ. ಇನ್ನೊಬ್ಬರ ಜತೆ ಇರುತ್ತೇನೆ ಎಂದು ಹೇಳುತ್ತಿದ್ದನು.
ಪತ್ನಿಯನ್ನು ಕೊಲೆ ಮಾಡುವ ಯೋಜನೆ ರೂಪಿಸಿಕೊಂಡಿದ್ದ ಪತಿ, ಮನೆಗೆ ಬಿಯರ್ ಬಾಟಲ್ ಮತ್ತು ಖಾಸಗಿ ಮೆಡಿಕಲ್ ಶಾಪ್‌ನಲ್ಲಿ ಮತ್ತುಬರುವ 10 ಮಾತ್ರೆಗಳನ್ನು ತಂದು, ಅಂದು ರಾತ್ರಿ ಚಿಕ್ಕನ್ ಅಡುಗೆ ಮಾಡಿಸಿ ಬಿಯರ್‌ನಲ್ಲಿ ಮಾತ್ರೆಗಳನ್ನು ಬೆರೆಸಿ ಪತ್ನಿಗೆ ಕುಡಿಸಿದ್ದ. ಬೆಳಗ್ಗೆ 5 ಗಂಟೆಯಾದರೂ ಪತ್ನಿ ಉಸಿರಾಡುತ್ತಿದ್ದನ್ನು ಗಮನಿಸಿ, ಆಕೆಯ ದುಪ್ಪಟ್ಟಾದಿಂದ ಕುತ್ತಿಗೆಗೆ ಸುತ್ತಿ ಹತ್ಯೆಗೈದಿದ್ದ. ಬೆಳಗ್ಗೆ ಹೆಂಡ್ತಿ ಮೂರ್ಚೆ ಹೋಗಿದ್ದಾಳೆ ಎಂದು ಸ್ಥಳೀಯರ ಸಹಾಯದಿಂದ ಸಮೀಪದ ಆಸ್ತತ್ರೆಗೆ ದಾಖಲಿಸಿದ್ದ. ಯಾರಿಗೂ ಅನುಮಾನ ಬಾರದಂತೆ ನಾಟಕವಾಡಿದ್ದ.
ಮೃತ ಡಿ.ಅಶ್ವಿನಿ ಪೋಷಕರು ನೀಡಿದ್ದ ದೂರಿನನ್ವಯ ತನಿಖೆ ನಡೆಸಿದಾಗ ಆರೋಪಿ ಪತಿಯ ಕೃತ್ಯ ಬಯಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಎಂದು ಪಿಪಿ ಎಚ್.ಆರ್.ಸತ್ಯವತಿ ತಿಳಿಸಿದ್ದಾರೆ. ಪ್ರಕರಣದ ವಾದವನ್ನು ಸತ್ಯವತಿ ಮಂಡಿಸಿದ್ದರು.