ವಿಜಯಪುರ ಪಟ್ಟಣದ ಬಸ್​ ನಿಲ್ದಾಣದ ಬಳಿ ಪುರಸಭೆ ಸಿಬ್ಬಂದಿ ಹಾಗೂ ಎನ್​ಜಿಒ ತಂಡದವರು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲು ಹಿಡಿಯುತ್ತಿರುವುದು. 
ರಾಜ್ಯ

ಬೀದಿನಾಯಿಗಳ ಹಾವಳಿ ತಡೆಗೆ ಮುಂದಾದ ಪುರಸಭೆ ಆಡಳಿತ / TUBAGERE

ವಿಜಯಪುರ : ಕಳೆದ ಹಲವು ವರ್ಷಗಳಿಂದ ಪಟ್ಟಣದ ಸಾರ್ವಜನಿಕರಿಗೆ ಕಂಟಕವಾಗಿದ್ದ ಬೀದಿನಾಯಿಗಳ ಉಪಟಳ ತಡೆಗೆ ವಿಜಯಪುರ ಪುರಸಭೆ ಕೊನೆಗೂ ಮುಂದಾಗಿದೆ. ನಾಯಿಗಳನ್ನು ಸಂತಾನಶಕ್ತಿ ಹರಣ ಮಾಡುವ ಬೃಹತ್​ ಯೋಜನೆಗೆ ಪುರಸಭೆ ಆಡಳಿತ ಅಧಿಕೃತವಾಗಿ ಚಾಲನೆ ನೀಡಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಪಟ್ಟಣದಲ್ಲಿ ಸುಮಾರು 150ಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಎವರ್​ಗ್ರೀನ್​ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ನಾಯಿ ತೀವ್ರವಾಗಿ ಕಚ್ಚಿದ್ದರಿಂದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಯಿಂದ ಸಾರ್ವಜನಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತುರ್ತು ಕ್ರಮಕ್ಕೆ ಆಗ್ರಹಿಸಿದ್ದರು.
ದತ್ತುದಾರರಿಗೆ ಆರ್ಥಿಕನೆರವು? : ಪುರಸಭೆ ಇಂಜಿನಿಯರ್​ ಶೇಖರ್​ ರೆಡ್ಡಿ ಮಾತನಾಡಿ, ನಾಯಿಗಳ ಸಂಖ್ಯೆ ನಿಯಂತ್ರಿಸಲು ದತ್ತು ಯೋಜನೆಯನ್ನು ರೂಪಿಸಲಾಗಿದೆ.ಬಸ್​ ನಿಲ್ದಾಣ, ಆಸ್ಪತ್ರೆ ಆವರಣದಲ್ಲಿರುವ ನಾಯಿಗಳನ್ನು ಪ್ರಾಣಿ ಪ್ರಿಯರು ದತ್ತು ಪಡೆಯಬಹುದು. ಇವುಗಳ ಪಾಲನೆ ಮಾಡುವ ದಾನಿಗಳಿಗೆ ಆರ್ಥಿಕ ನೆರವು ನೀಡಲು ಅವಕಾಶವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್​ ತಿಳಿಸಿದರು.
ಮಾಸಿಕ ಭತ್ಯೆ: ಬಿಬಿಎಂಪಿ ಮಾದರಿಯಲ್ಲಿ ನಾಯಿಗಳನ್ನು ದತ್ತು ಪಡೆದು ಮನೆಯಲ್ಲೇ ಸಾಕಿ ಹೊರಗೆ ಬಿಡದಂತೆ ನೋಡಿಕೊಳ್ಳುವವರಿಗೆ ಪ್ರತಿ ನಾಯಿಗೆ ತಿಂಗಳಿಗೆ 3,000 ರೂ.ಗಳವರೆಗೆ ಪಾಲನಾ ಭತ್ಯೆ ನೀಡುವ ಸರ್ಕಾರದ ಯೋಜನೆಗಳ ಬಗ್ಗೆಯೂ ಪುರಸಭೆ ಚಿಂತನೆ ನಡೆಸಿದೆ.
800 ನಾಯಿಗಳಿಗೆ ಶಸ್ತ್ರಚಿಕಿತ್ಸೆ : ಈ ಕುರಿತು ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್​ ಅವರು, ಬೆಂಗಳೂರಿನ ವಾಯ್ಸ್​ ಆಫ್​ ವಾಯ್ಸ್​ಲೆಸ್​' ಎಂಬ ಎನ್​ಜಿಒ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಾಚರಣೆ ಕೈಗೊಂಡಿದೆ. ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಮುಂದಿನ ಮೂರು ತಿಂಗಳಲ್ಲಿ 800 ನಾಯಿಗಳನ್ನು ಹಿಡಿಯುವ ಗುರಿ ಹೊಂದಲಾಗಿದೆ. ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ನಡೆಸಿ, ಮೂರು ದಿನಗಳವರೆಗೆ ಆರೈಕೆ ಮಾಡಿದ ನಂತರ ಅವುಗಳನ್ನು ಹಿಡಿದ ಜಾಗದಲ್ಲೇ ಮರಳಿ ಬಿಡುವ ಕಾರ್ಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.