ಸುರಪುರ ನಗರದಲ್ಲಿ ಶುಕ್ರವಾರ ಮೊಹರಂ ನಿಮಿತ್ತ ಹಿಟ್ಟಿನ್ ಬಾಬಾ ಪೀರಾನ ಭರ್ಜರಿ ಸವಾರಿಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ.
- ಹಿಟ್ಟಿನ್ ಬಾಬಾ ಪೀರಾ ಸವಾರಿಗೆ ಜನಸಾಗರ
- ಸುರಪುರದಲ್ಲಿ ಅದ್ದೂರಿ ಹಬ್ಬ ಆಚರಣೆ
ಸುರಪುರ: ಶಹನಾಯಿ, ಡೋಲು ಮಂಗಳ ವಾದ್ಯಗಳ ಇಂಪಾದ ನಾದ. ಧುಲೇ.. ಧುಲೇ..(ಮದು ಮಗ) ಎಂಬ ಭಕ್ತರ ಘೋಷಣೆ, ಸಾವಿರಾರು ಜನರ ಭಕ್ತಿಸಾಗರ ಹಾಗೂ ಹಿಟ್ಟಿನ ಬಾಬಾ ಪೀರಾನ ಭವ್ಯ ಸವಾರಿ.. ಮೊಹರಂ ಹಬ್ಬ ನಿಮಿತ್ತ ಶುಕ್ರವಾರ ಸುರಪುರ ನಗರದಲ್ಲಿ ನಡೆದ ಈ ಅದ್ದೂರಿ ಆಚರಣೆ ಹಿಂದೂ&ಮುಸ್ಲಿಂ ಭಾವೈಕ್ಯತೆ ಮತ್ತು ಶ್ರದ್ಧಾ-ಭಕ್ತಿಯ ಅಪೂರ್ವ ಸಂಗಮವಾಗಿ ಗಮನ ಸೆಳೆಯಿತು.
ಮೊಹರಂನ ಕೊನೆಯ ದಿನವಾದ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಆರಂಭವಾದ ಹಿಟ್ಟಿನ್ ಬಾಬಾ ಪೀರಾನ ಸವಾರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದೈವಾವೇಶದಲ್ಲಿದ್ದ ಭಕ್ತರು ಪಂಜೆ ಹಿಡಿದು ಸಾಗುತ್ತಿದ್ದರೆ, ಸಾವಿರಾರು ಸಂಖ್ಯೆಯ ಭಕ್ತರು ಸವಾರಿಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಯುವಕರ ಉತ್ಸಾಹ, ಭಕ್ತರ ಜೈೂಷ ಹಾಗೂ ವಾದ್ಯಗಳ ನಿನಾದ ಇಡೀ ನಗರವನ್ನು ಹಬ್ಬದ ಸಂಭ್ರಮದಲ್ಲಿ ತೇಲುವಂತೆ ಮಾಡಿತು.
ಸುಮಾರು 5ರಿಂದ 6 ಗಂಟೆಗಳ ಕಾಲ ನಡೆದ ಸವಾರಿಯುದ್ದಕ್ಕೂ ವಿವಿಧೆಡೆ ಭಕ್ತರು ಬಾಬಾಗೆ ಪೂಜೆ ಸಲ್ಲಿಸಿ, ಪುಷ್ಪ ಮಾಲೆ ಅರ್ಪಿಸಿ, ಪಾದಕ್ಕೆ ನೀರು ಹಾಕಿ ಭಕ್ತಿ ಸಮರ್ಪಿಸಿದರು. ಸಂಪ್ರದಾಯದಂತೆ ಬಾಬಾ ಪೀರಾ ಅನೇಕ ಹಿಂದೂ ಮನೆಗಳಿಗೆ ಭೇಟಿ ನೀಡಿದ್ದು, ಎರಡೂ ಸಮುದಾಯಗಳ ಜನರು ಸಮಾನ ಭಕ್ತಿಯಿಂದ ಸ್ವಾಗತಿಸಿದರು. ಸವಾರಿಯ ರೋಮಾಂಚಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮನೆಗಳ ಛಾವಣಿ ಹಾಗೂ ಕಟ್ಟಡಗಳ ಮೇಲೂ ಜನ ನೆರೆದಿದ್ದರು.
ಮೊಹರಂ ಆಚರಣೆ ಕೇವಲ ಧಾರ್ಮಿಕ ಹಬ್ಬವಾಗಿರದೆ, ಸುರಪುರದಲ್ಲಿ ಈ ಹಿಂದಿನಿಂದಲೂ ಸೌಹಾರ್ದ, ಸಹಬಾಳ್ವೆ ಮತ್ತು ಸಾಮರಸ್ಯದ ಸಂಕೇತವಾಗಿ ಆಚರಿಸಲಾಗುತ್ತದೆ. ಹಿಟ್ಟಿನ್ ಬಾಬಾ ಹಾಗೂ ಸೈಯದ್ ಕಾಸಿಂ ಪೀರಾಗಳ ಸವಾರಿಗಳು ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತವೆ. ಪ್ರತಿ ವರ್ಷದಂತೆ ಈ ಬಾರಿಯೂ ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು.
ಮೊಹರಂ ನಿಮಿತ್ತ ಗುರುವಾರ ರಾತ್ರಿ ಭಕ್ತರು ಬೋಸಾಯಿ ಹಾಡಿ ಭಕ್ತಿ ಸಲ್ಲಿಸಿದರು. ಪೂಜಾರಿಗಳು ಕೆಂಡ ತುಳಿದು ಹರಕೆ ನರವೇರಿಸಿದರು. ಹಿಂದೂ-ಮುಸ್ಲಿಂ ಸಮುದಾಯದವರು ಸಕ್ಕರೆ ಓದಿಕೆ ಮಾಡಿಸಿ ಹರಕೆ ತೀರಿಸಿಕೊಂಡರು. ಸುರಪುರ, ಕುಂಬಾರಪೇಟೆ, ರಂಗಂಪೇಟೆ&ತಿಮ್ಮಾಪುರ, ಬೋನ್ಹಾಳ ಸೇರಿ ವಿವಿಧೆಡೆ ಪಂಜೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.