ಮೃತ್ಯುಂಜಯ ದೊಡ್ಡವಾಡಗೆ ‘ಭಾವ ಗಾರುಡಿಗ’ ಪುರಸ್ಕಾರ ಪ್ರದಾನ
- ಸಂಗೀತ ನಿರ್ದೇಶಕನ 52ನೇ ಹುಟ್ಟುಹಬ್ಬ ಆಚರಣೆ
- ‘ಭಾವ ಕೋಗಿಲೆ’ ಪುಸ್ತಕ ಬಿಡುಗಡೆ
- ‘ಬಿಂಕಾ ಬಿಡ ಬಿನ್ನಾಣಗಿತ್ತಿ’ ದೃಶ್ಯಗೀತೆ
ಬೆಂಗಳೂರು: ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ವರಕವಿ ದ.ರಾ. ಬೇಂದ್ರೆ, ಡಾ.ಬೆಟಗೇರಿ ಕೃಷ್ಣಶರ್ಮ ಆದಿಯಾಗಿ ಹಲವಾರು ಕವಿಗಳ ಕವಿತೆಗಳು ಹಾಡುಗಳ ಹೊಳೆಯಾಗಿ ಹರಿದವು. ಗಾಯಕರ ರಾಗಕ್ಕೆ ಸಂಗೀತಕಾರರು ತಾಳವಾದರು. ಪ್ರೇಕ್ಷಕರು ತಲೆದೂಗುತ್ತ ಸಂಗೀತ ಕಡಲಲ್ಲಿ ತೇಲಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ ಬುಧವಾರ ಸಂಜೆ ರಾಗ ತಾಳಗಳಲ್ಲಿ ಮಿಂದೆದ್ದಿತು. ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ 52ನೇ ಹುಟ್ಟುಹಬ್ಬ ಅಂಗವಾಗಿ ಮೃತ್ಯುಂಜಯ ದೊಡ್ಡವಾಡ ಸ್ನೇಹ ಬಳಗ ಆಯೋಜಿಸಿದ್ದ ‘ಭಾವ ಝೇಂಕಾರ’ ಕಾರ್ಯಕ್ರಮದಲ್ಲಿ ಹಲವಾರು ಗಾಯಕರು ಭಾವಗೀತೆಗಳನ್ನು ಹಾಡಿ ರಂಜಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಮೃತ್ಯುಂಜಯ ಅವರಿಗೆ ‘ಭಾವ ಗಾರುಡಿಗ’ ಗೌರವ ಪುರಸ್ಕಾರ ಪ್ರದಾನ ಮಡಿದರು. ಇದೇ ವೇಳೆ ದೊಡ್ಡವಾಡ ಗಾಯನ- ಅಭಿನಯಿಸಿರುವ ‘ಬಿಂಕಾ ಬಿಡ ಬಿನ್ನಾಣಗಿತ್ತಿ’ ದೃಶ್ಯಗೀತೆಯನ್ನು ಕಸಾಪ ಮಾಜಿ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಬಿಡುಗಡೆ ಮಾಡಿದರು. ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು 52 ಭಾವ ಗೀತೆಗಳನ್ನು ಹೊಂದಿರುವ ‘ಭಾವ ಕೋಗಿಲೆ’ ಪುಸ್ತಕ ಬಿಡುಗಡೆಗೊಳಿಸಿದರು. ಈ ಪುಸ್ತಕ ಮೂರು ಆಯಾಮಗಳನ್ನು ಒಳಗೊಂಡಿದ್ದು, ಕವಿತೆಯ ಪಠ್ಯ, ಕ್ಯೂಆರ್ ಕೋಡ್ ಹೊಂದಿದೆ. ಕವಿತೆ ಓದುವುದರ ಜತೆಗೆ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಲಿರಿಕ್ ಮತ್ತು ಕರೋಕೆ ಕೇಳಬಹುದಾಗಿದೆ.
ಡಾ. ಸಿ. ಸೋಮಶೇಖರ್ ಮಾತನಾಡಿ, ಕವಿಗಳ ಎದುರು ಅವರ ಭಾವನಾತ್ಮಕ ಕವಿತೆಗಳಿಗೆ ಸಂಗೀತ ನೀಡಿ ಹಾಡುವಾಗ ರೋಮಾಂಚನದ ಜತೆಗೆ ಕವಿಯಲ್ಲಿ ಸಾರ್ಥಕ ಭಾವ ಮೂಡುತ್ತದೆ. ಅಂತಹ ಕಾರ್ಯ ಈ ವೇದಿಕೆಯಲ್ಲಿ ಇಂದು ಸಾಕಾರಗೊಂಡಿದೆ. ಅಪಾರ ಸ್ನೇಹ ಬಳಗ ಹೊಂದಿರುವ ಮೃತ್ಯುಂಜಯ ದೊಡ್ಡವಾಡ ಅವರು ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಗಾಯಕ, ಸಂಯೋಜಕ, ಸ್ವತಃ ಕವಿಯೂ ಆಗಿದ್ದಾರೆ. ಕವಿಗಳ ಗೀತೆಗಳಿಗೆ ಮಾತ್ರವಲ್ಲದೆ ವಚನಕಾರರ ವಚನಗಳಿಗೂ ರಾಗ ಸಂಯೋಜನೆ ಮಾಡಿದ್ದಾರೆ. ತಮ್ಮ ವ್ಯಕ್ತಿತ್ವದ ಮೂಲಕ ಅವರು ತಮ್ಮ ಸುತ್ತ ಮಧುರ ವಾತಾವರಣ ಸೃಷ್ಟಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡವಾಡ ಅವರ ಹುಟ್ಟು ಹಬ್ಬಕ್ಕೆ ಗಾಯಕರು ಹಾಗೂ ವಿದ್ಯಾರ್ಥಿ ವೃಂದ ಹಾಡುಗಳ ಮೂಲಕ ಶುಭಕೋರಿದರು.