ಸಂಸದ ರಮೇಶ ಜಿಗಜಿಣಗಿ ಕ್ಷಮೆ ಯಾಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ದಲಿತ ಸಂರ್ಷ ಸಮಿತಿ (ನಾಗವಾರ ಸ್ಥಾಪಿತ) ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಶಹಾಪುರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ಶರಣಪ್ಪ ಭೂತಾಳಿ, ಹೊನ್ನಪ್ಪನ ಗಂಗನಾಳ, ಶಿವಶರಣಪ್ಪ ಯಾಳಗಿ, ಹೊನ್ನಪ್ಪ ದಸ್ತಾಪುರ, ಬಸವರಾಜ ಚಿಂಚೋಳಿ, ಮರೆಪ್ಪ ಸದಲಾಪುರ, ಬಸವರಾಜ ಭಜಂತ್ರಿ ಇತರರಿದ್ದರು.
- ದಲಿತ ಸಂರ್ಷ ಸಮಿತಿ ಒತ್ತಾಯ
- ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ
ಶಹಾಪುರ: ನೋಂದಣಿ ಇಲ್ಲದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ನಿಷೇಧಿಸಬೇಕು. ಜೀವ ಬೆದರಿಕೆಗಳಂತಹ ಹೇಳಿಕೆ ನೀಡುತ್ತಿರುವ ಸಂಸದ ರಮೇಶ ಜಿಗಜಿಣಗಿ ಕ್ಷಮೆಯಾಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ರಾಜ್ಯ ದಲಿತ ಸಂರ್ಷ ಸಮಿತಿ (ನಾಗವಾರ ಸ್ಥಾಪಿತ) ತಾಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಕುರಿತು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ತಾಲೂಕು ಸಂಚಾಲಕ ಶರಣಪ್ಪ ಭೂತಾಳಿ ಮಾತನಾಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಸ್ಪಿಜಿ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನೋಂದಣಿಯಾಗದ ಆರ್ಎಸ್ಎಸ್ ಸಂಘವನ್ನು ಕೂಡಲೇ ನೋಂದಣಿ ಮಾಡಿಸಿ ಕಾನೂನು ಪ್ರಕಾರ ಕೆಲಸ ಮಾಡಿ ಎಂದು ಹೇಳಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿದ ಮಾತು ಅರಗಿಸಿಕೊಳ್ಳಲು ಆಗದ ಬಿಜೆಪಿ ನಾಯಕರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವ ಮೂಲಕ ನೆಲದ ಕಾನೂನು ಉಲ್ಲಂಘಸುತ್ತಿದ್ದಾರೆಂದು ಆರೋಪಿಸಿದರು.
ಸಚಿವ ಹೇಳಿಕೆ ಆರ್ಎಸ್ಎಸ್ ನಾಯಕರಿಗಿಂತ ಬಿಜೆಪಿ ನಾಯಕರಿಗೆ ಭಾರಿ ಮುಜಗರ ಉಂಟು ಮಾಡಿದೆ. ಕಾರಣ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಆರ್ಎಸ್ಎಸ್ ಬಹಳ ಡೆಂಜರ್ ಇದೆ. ಅದರ ತಂಟೆಗೆ ಬರಬೇಡಿ ಮತ್ತು ದಲಿತರಿಗೆ ಇದರ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದು ಹೇಳುವ ಮೂಲಕ ಸಂವಿಧಾನ ವಿರೋಧಿ ನಿಲುವು ತಾಳಿರುವ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಸತ್ಯವಾದ ಮಾತು ಹೇಳುತ್ತಿರುವ ಸಚಿವ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಎಸ್ಪಿಜಿ ಭದ್ರತೆ ನೀಡಬೇಕು ಎಂದರು. ಈ ಎಲ್ಲ ಬೇಡಿಕೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೊಂದು ವೇಳೆ ನಿರ್ಲಕ್ಷ್ಯವಹಿಸಿದರೆ ರಾಜ್ಯದ ಎಲ್ಲೆಡೆ ಸಂಘಟನೆಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪದಾಧಿಕಾರಿಗಳಾದ ಹೊನ್ನಪ್ಪನ ಗಂಗನಾಳ, ಶಿವಶರಣಪ್ಪ ಯಾಳಗಿ, ಹೊನ್ನಪ್ಪ ದಸ್ತಾಪುರ, ಬಸವರಾಜ ಚಿಂಚೋಳಿ, ಮರೆಪ್ಪ ಸದಲಾಪುರ, ಬಸವರಾಜ ಭಜಂತ್ರಿ, ಮಂಜು ಕೊಂಬಿನ್, ಹಣಮಂತ ಭಜಂತ್ರಿ, ಮಲ್ಲಪ್ಪ ಸಲಾದಪುರ, ಸಾಬಣ್ಣ, ರಾಮು, ಅಂಬರೀಶ, ಗುರಪ್ಪ ಇತರರಿದ್ದರು.