- ಮೂಡಿಗೆರೆ ಮಾಜಿ ಶಾಸಕರ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಚೆಕ್ಬೌನ್ಸ್ ಪ್ರಕರಣದಲ್ಲಿ ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಶಿಕ್ಷೆ ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.
ಏನಿದು ಪ್ರಕರಣ:
ಎಂ.ಪಿ. ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬವರಿಂದ ಒಟ್ಟು 1.66 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಅದರ ಮರುಪಾವತಿಗೆ ಎಂದು ಹಲವು ಚೆಕ್ಗಳನ್ನು ಹೂವಪ್ಪ ಗೌಡ ಅವರಿಗೆ ನೀಡಿದ್ದರು. ಈ ಚೆಕ್ಗಳು ಬೌನ್ಸ್ ಆದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. 2018ರ ವಿಧಾನಸಭೆ ಚುನಾವಣೆ ವೇಳೆ ಪ್ರಕರಣ ಇತ್ಯರ್ಥಪಡಿಸಲು ಮುಂದಾದ ಕುಮಾರಸ್ವಾಮಿ, 1.40 ಕೋಟಿ ರೂ. ಮರುಪಾವತಿಸಿ, ಉಳಿದ ಹಣವನ್ನು ನಂತರ ನೀಡುವುದಾಗಿ ತಿಳಿಸಿದ್ದರು. ಇದರಿಂದಾಗಿ ಹೂವಪ್ಪ ಗೌಡ ದಾವೆಯನ್ನು ಹಿಂಪಡೆದಿದ್ದರು.
ಇದಾದ ನಂತರ ಹೂವಪ್ಪ ಗೌಡ ಅವರಿಂದ ಮತ್ತೆ 68 ಲಕ್ಷ ರೂ. ಸಾಲ ಪಡೆದಿದ್ದ ಕುಮಾರಸ್ವಾಮಿ, ಎಂಟು ಚೆಕ್ಗಳನ್ನು ನೀಡಿದ್ದರು. ಈ ಚೆಕ್ಗಳು ಬೌನ್ಸ್ ಆದ ಕಾರಣ ಹೂವಪ್ಪ ಗೌಡ ಅವರು 8 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ಎಂ.ಪಿ. ಕುಮಾರಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟು 1.38 ಕೋಟಿ ರೂ. ಗಳನ್ನು ಅರ್ಜಿದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿ, ಪ್ರತಿ ಪ್ರಕರಣಕ್ಕೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.