ಕನಕಪುರ ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡಲು ವಿಳಂಬ ಹಾಗೂ ಆಶ್ರಯ ಮನೆ ನಿವೇಶಗಳಲ್ಲಿ ದಲ್ಲಾಳಿಗಳ ಹಸ್ತಕ್ಷೇಪ ತಡೆಯುವಂತೆ ಒತ್ತಾಯಿಸಿ ಕರ್ನಾಟಕ ಯುವ ಶಕ್ತಿ ವೇದಿಕೆಯಿಂದ ಕಂದಾಯ ಅಧಿಕಾರಿ ಜ್ಯೋತಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಲೀಂ ಪಾಷ, ವೆಂಕಟಾಚಲ, ಚಾಂದ್‌ಪಾಷ, ಸಿದ್ದರಾಜು, , ಚಂದ್ರ, ಸಾಕಮ್ಮ, ಅಲಮೇಲಮ್ಮ, ಉಪಸ್ಥಿತರಿದ್ದರು.
ಕನಕಪುರ :ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡಲು ಸಾರ್ವಜನಿಕರನ್ನು ನಿತ್ಯ ವಿನಾಕಾರಣ ಅಲೆದಾಡಿಸುತ್ತಿದ್ದಾರೆ, ಜತೆಗೆ ಆಶ್ರಯ ವಸತಿ ಯೋಜನೆಯಲ್ಲಿ ಮಂಜೂರಾದ ನಿವೇಶನಗಳ ಹಕ್ಕು ವಿತರಣೆಯಲ್ಲಿ ಆಗುತ್ತಿರುವ ದಲ್ಲಾಳಿಗಳ ಹಾವಳಿಯನ್ನು ಕೂಡಲೇ ತಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಪ್ರತಿಭಟಿಸಿ ಕಂದಾಯ ಅಧಿಕಾರಿ ಜ್ಯೋತಿ ಅವರಿಗೆ ಮನವಿ ಸಲ್ಲಿಸಿತು.
ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡದೆ ಅಲೆದಾಡಿಸುತ್ತಿದ್ದಾರೆ. ಕಂದಾಯ ಶಾಖೆಯ ಅಧಿಕಾರಿಗಳು ವಿನಾಕಾರಣ ಜನರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಕೆಲಸ ಮಾಡಿಕೊಡಲು ಸತಾಯಿಸುತ್ತಿರುವುದಲ್ಲದೆ, ಹಣ ಕೊಟ್ಟರೂ ಕೆಲಸ ಮಾಡಿಕೊಡುತ್ತಿಲ್ಲ.
ನಗರಸಭೆಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ. ಕಾನೂನು ಬದ್ದವಾಗಿ ನಿಗದಿತ ಸಮಯದಲ್ಲಿ ಆಗಬೇಕಾಗಿರುವ ಕೆಲಸಗಳನ್ನು ಕಂದಾಯ ಇಲಾಖೆ ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಶ್ರಯ ಯೋಜನೆ, ಬಸವ ವಸತಿ ಯೋಜನೆ ಹಾಗೂ ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ಮನೆಗಳು ಮಂಜೂರಾಗಿದ್ದರೂ ಹಕ್ಕುಪತ್ರ ಪಡೆಯದೆ ಇರುವ ಫಲಾನುಭವಿಗಳಿಂದ ಈಗಾಗಲೇ ಮನೆಗಳನ್ನು ಹೆದರಿಸಿ ಬೆದರಿಸಿ ದಲ್ಲಾಳಿಗಳು ಖರೀದಿಸುತ್ತಿದ್ದಾರೆ. ಕೊಡದೆ ಇರುವವರಿಗೆ ಧಮ್ಕಿ ಹಾಕಿ ಹೆದರಿಸುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಿ ಅಂತಹಬರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಸಲೀಂ ಪಾಷ, ವೆಂಕಟಾಚಲ, ಚಾಂದ್‌ಪಾಷ, ಸಿದ್ದರಾಜು, ನವೀನ್, ಸಲೀಂ, ಚಂದ್ರ, ಸಾಕಮ್ಮ, ಅಲಮೇಲಮ್ಮ, ಪಾಂಡು, ಸಾಂಧು ಹಾಜರಿದ್ದರು.