ಅವರೆಕಾಯಿ ಮಾರಾಟ ಎಪಿಎಂಸಿಗೆ ಸ್ಥಳಾಂತರಿಸಿ apmc 
ರಾಜ್ಯ

ಅವರೆಕಾಯಿ ಮಾರಾಟ ಎಪಿಎಂಸಿಗೆ ಸ್ಥಳಾಂತರಿಸಿ apmc

ಪ್ರಮುಖ ಮುಖ್ಯಾಂಶಗಳು

  • ಶ್ರೀನಿವಾಸಪುರದಲ್ಲಿ ವಿವಿಧ ಸಂಟನೆಗಳ ಪ್ರತಿಭಟನೆ
  • ಸಂಚಾರ ಸಿಕ್ಕು ತೊಂದರೆ
ಶ್ರೀನಿವಾಸಪುರ: ಪಟ್ಟಣದ ಎಂಜಿ ರಸ್ತೆಯಲ್ಲಿ ಅವರೆಕಾಯಿ ಮಾರಾಟ ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಕನ್ನಡ, ರೈತ ಪ್ರಗತಿಪರ ಸಂಘಟನೆಗಳು ರಸ್ತೆಯಲ್ಲಿ ಪ್ರತಿಭಟನೆ ಮಾಡಿ ಎಪಿಎಂಸಿಗೆ ಸ್ಥಳಾಂತರಿಸುವ ತನಕ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. apmc
ಪಟ್ಟಣದಲ್ಲಿನ ಪ್ರಮುಖ ರಸ್ತೆ ಇದಾಗಿದ್ದು, ರಸ್ತೆ ಬದಿಯಲ್ಲೇ ಅವರೆಕಾಯಿ ಅಂಗಡಿ ತೆರೆದು ಮಾರಾಟ ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಶಾಲಾ ವಾಹನ, ಬಸ್​, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಉಪಾಧ್ಯಕ್ಷ ಬೈಚೇಗೌಡ, ಬಯಲುಸೀಮೆ ಕಾರ್ಯದರ್ಶಿ ಸಿ.ವಿ.ಪ್ರಭಾಕರಗೌಡ, ತಾಲೂಕು ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಕಸ್ತೂರಿ ಜನಪರ ವೇದಿಕೆಯ ಜಿಲ್ಲಾ ಮುಖಂಡ ಸುಬ್ರಹ್ಮಣಿ, ಬಿಜೆಪಿ ಮುಖಂಡ ಆರ್​.ಎನ್​.ಚಂದ್ರಪ್ಪ, ರಾಮಾಂಜಿ, ದಲಿತ ಮುಖಂಡ ಈರಪ್ಪ, ವೆಂಕಟೇಶ್​, ನಾಗಭೂಷಣ್​, ರಮೇಶ್​ ಸೇರಿ ಅನೇಕರು ಪಟ್ಟು ಹಿಡಿದರು.
ಮುಖ್ಯಾಧಿಕಾರಿ ಭರವಸೆ: ಮುಖ್ಯಾಧಿಕಾರಿ ವಿ.ನಾಗರಾಜ್​ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಕಾರರನ್ನು ಸಮಾಧಾನಪಡಿಸಿದರು. ನಿಮ್ಮ ಬೇಡಿಕೆಯಂತೆ ನಾಳೆಯಿಂದಲೇ ಅವರೇಕಾಯಿ ವ್ಯಾಪಾರ ವಹಿವಾಟು ಎಪಿಎಂಸಿಗೆ ವರ್ಗಾಯಿಸಲಾಗುತ್ತದೆ. ಒಂದು ದಿನ ಗಡುವು ಕೊಡಿ ಎಂದು ಮನವಿ ಮಾಡಿಕೊಂಡರು.
ಪ್ರತಿಭಟನೆ ವೇಳೆ ಹೈಡ್ರಾಮ: ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಪುರಸಭಾ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್​ ಹೋರಾಟಗಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸುಮಾರು ವರ್ಷಗಳಿಂದ ಇಲ್ಲಿ ಅವರೆಕಾಯಿ ವ್ಯಾಪಾರ- ನಡೆಯುತ್ತಿದೆ. ಸಂಚಾರಕ್ಕೆ ಅಡ್ಡಿಯಾಗದಂತೆ ರ್ನಿದಿಷ್ಟ ಸ್ಥಳದಲ್ಲಿ ಮಾರಾಟವಾಗುತ್ತಿದೆ. ಎಪಿಎಂಸಿಯಲ್ಲಿ ಸ್ಥಳಾವಕಾಶವಿಲ್ಲ. ಉದ್ದೇಶಪೂರ್ವಕವಾಗಿ ನೀವು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಹೇಳಿದಾಗ ಪ್ರತಿಭಟನಾಕಾರರು ಮತ್ತು ಪ್ರಕಾಶ್​ ನಡುಗೆ ಮಾತಿನ ಚಕಮಕಿ ನಡೆಯಿತು.
ಪೊಲೀಸ್​ ಠಾಣೆಗೆ ದೂರು ದಾಖಲು: ಪ್ರತಿಭಟನೆ ವೇಳೆ ಹೋರಾಟಗಾರರ ಮೇಲೆ ಪುರಸಭಾ ಮಾಜಿ ಅಧ್ಯಕ್ಷ ಬಿ.ಎಂ. ಪ್ರಕಾಶ್​ ಗೂಂಡಾ ವರ್ತನೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಪ್ರಕರಣ ದಾಖಲು ಮಾಡಬೇಕೆಂದು ಒತ್ತಾಯಿಸಿ ಪಟ್ಟಣದ ಪೊಲೀಸ್​ ಠಾಣೆಗೆ ಮತ್ತು ಜಿಲ್ಲಾ ವರಿಷ್ಠಾಧಿಕಾರಿಗೆ ಪ್ರತಿಭಟನಾಕಾರರು ದೂರು ಸಲ್ಲಿಸಿದರು.