- ಡಾ.ಬಿ.ಆರ್.ಅಂಬೇಡ್ಕರ್ ಅವರು ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ ಪತ್ರಿಕಾ ರಂಗದಲ್ಲಿ ಮೀಸಲಾತಿ ಇಲ್ಲ
- ಇಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಗಳ ನಡುವೆ ನಾವು ಬದುಕುತ್ತಿದ್ದೇವೆ.
ಊಹಾ ಪತ್ರಿಕೋದ್ಯಮ ಬಿಟ್ಟು, ಮಾಧ್ಯಮಗಳು ಸತ್ಯವಾದ ಸುದ್ದಿಗಳನ್ನು ಬರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ನಗರದ ಎನ್‌ಜಿಒ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪತ್ರಿಕಾ ಸಂಪಾದಕರ ಸಂಘ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ ಪತ್ರಿಕಾ ರಂಗದಲ್ಲಿ ಮೀಸಲಾತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಯಾರಿಗೇನು ಕಡಿಮೆಯಿಲ್ಲ. ಆದರೆ ಅವಕಾಶಗಳಿಂದ ವಂಚಿತರಾಗಿದ್ದೇವೆ. ಎದೆಗುಂದುವ ಅಗತ್ಯವಿಲ್ಲ. ನಾವು ಪ್ರಾಮಾಣಿಕರಾಗಿದ್ದೇವೆ, ವಿದ್ಯಾವಂತರಾಗಿದ್ದೇವೆ ಎಂದು ಅವರು ಹೇಳಿದರು.
ಇಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಗಳ ನಡುವೆ ನಾವು ಬದುಕುತ್ತಿದ್ದೇವೆ. ಅಂಬೇಡ್ಕರ್ ಅವರ ತತ್ವಗಳನ್ನು ಏಕೆ ಅಳವಡಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಂವಿಧಾನ ವಿರೋಧಿ ಹಾಗೂ ಮನುವಾದಿ ಶಕ್ತಿಗಳೊಂದಿಗೆ ಸಾಗುವುದರಿಂದ ಸಾಮಾಜಿಕ ಬದಲಾವಣೆ ಸಾಧ್ಯವೇ ಎಂದು ಪ್ರಶ್ನಿಸಿದರು.
ದೇಶದಲ್ಲಿ ಇಷ್ಟು ವರ್ಷಗಳಾದರೂ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿಲ್ಲ. ಜಾತಿ ವ್ಯವಸ್ಥೆ ಚಲನರಹಿತವಾಗಿದೆ. ಶೋಷಿತ ಸಮುದಾಯಗಳ ಜನರು ಬದಲಾವಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಅಂಬೇಡ್ಕರ್ ಅವರ ಸಂವಿಧಾನದಿಂದಲೇ ತಾವು ಮುಖ್ಯಮಂತ್ರಿಯಾಗಲು ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಕಾಯ್ದೆಯನ್ನು ಜಾರಿಗೆ ತಂದಿದ್ದಾಗಿ ತಿಳಿಸಿದರು. ಅಂದಿನ ಸಚಿವ ಎಚ್.ಆಂಜನೇಯ ಅವರು ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಓಖಿಒ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಪತ್ರಕರ್ತರ ಸಮುದಾಯಕ್ಕೆ ಬಸ್ ಪಾಸ್ ಸೇರಿದಂತೆ ಹಲವು ಸೌಲಭ್ಯಗಳು ದೊರೆತಿರುವುದನ್ನು ಸ್ಮರಿಸಿ, ಧನ್ಯವಾದ ಸಲ್ಲಿಸಿದರು.
ಎಸ್ಸಿಎಸ್ಟಿ ಸಂಪಾದಕರ ಹಿತ ಕಾಯಲು ಕೆಯುಡಬ್ಲ್ಯೂಜೆ ಬದ್ದ ಎಂದರು.
ಇದೇ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರ ಬರಹಗಳ ಕುರಿತು ಹಿರಿಯ ಪತ್ರಕರ್ತ ಎನ್.ರವಿಕುಮಾರ್ (ಟೆಲೆಕ್ಸ್) ಅವರು ರಚಿಸಿರುವ ಪುಸ್ತಕದ ಪ್ರತಿಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣಮೂರ್ತಿ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಸಿದ್ದರಾಮಯ್ಯ ಅವರ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಎಚ್.ಬಿ.ಮದನಗೌಡ, ಎಸ್‌ಸಿ/ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚಲುವರಾಜು, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕೆ.ದೀಪಕ್, ಮಾಹಿತಿ ಹಕ್ಕು ಆಯುಕ್ತ ಕೆ.ಬದ್ರುದ್ದೀನ್, ಯತಿರಾಜ್ ಬ್ಯಾಲಹಳ್ಳಿ, ಗುರುಪ್ರಸಾದ್ ಕೆರೆಗೋಡು, ಚಂದ್ರಣ್ಣ, ದೇವೇಂದ್ರಪ್ಪ ಕಪನೂರು, ಸುಭಾಶ್ ಹೊದ್ಲೂರು,ಅನೂಪ ಕುಮಾರ್, ಕರಿಯಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
*ನಾನೀಗ ಮುಖ್ಯಮಂತ್ರಿ ಅಲ್ಲ. ಆದರೂ, ಈ ಸರ್ಕಾರದಲ್ಲಿ ನನ್ನ ಮಾತು ಎಷ್ಟು ನಡೆಯುತ್ತದೆ ಎಂದು ನೀವು ಅಂದುಕೊಂಡಿದ್ದೀರಿ. ನಾನು ಹಾಗೆ ಅಂದುಕೊಂಡಿದ್ದೇನೆ. ಆದರೆ ಎಷ್ಟು ನಡೆಯುತ್ತದೆ ಎನ್ನುವುದು ನನಗೆ ಗೊತ್ತು.-ಸಿದ್ದರಾಮಯ್ಯ, ಮಾಜಿ ಸಿಎಂ