ಜಿಲ್ಲಾ ಉತ್ಸವ ನಿಮಿತ್ತ ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಮಳಿಗೆಯೊಂದಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಆಹಾರ ಮೇಳದಲ್ಲಿ ಸೇರಿದ್ದ ಜನಸಮೂಹ. 
ರಾಜ್ಯ

ರಾಯಚೂರು ಜಿಲ್ಲಾ ಉತ್ಸವದಲ್ಲಿ ಬಾಯಲ್ಲಿ ನೀರೂರಿಸಿದ ವೈವಿಧ್ಯಮಯ ಆಹಾರ

ಪ್ರಮುಖ ಮುಖ್ಯಾಂಶಗಳು

  • ಫುಡ್ ಫೆಸ್ಟ್‌ನಲ್ಲಿ ವಿವಿಧ ಬಗೆಯ ತಿಂಡಿ-ತಿನಿಸುಗಳಿಗೆ ಮುಗಿಬಿದ್ದ ಜನ
  • ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಆಹಾರ ಮೇಳ
ರಾಯಚೂರು: ಸಾಂಪ್ರದಾಯಿಕ ಜತೆಗೆ ಆಧುನಿಕ ಶೈಲಿಯ ಬಗೆಬಗೆಯ ಸಸ್ಯಾಹಾರಗಳು, ಘಮಘಮಿಸುವ ಮಸಾಲೆ ತಿಂಡಿಗಳು, ಮಾಂಸಾಹಾರದ ಖಾದ್ಯಗಳು, ಬಾಯಿ ಚಪ್ಪರಿಸಿ ತಿನ್ನುತ್ತಿರುವ ಗ್ರಾಹಕರು...
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಗುರುವಾರ ಕಂಡು ಬಂದ ದೃಶ್ಯಗಳಿವು.
ದಕ್ಷಿಣ ಉತ್ತರ ಕರ್ನಾಟಕದ ನಾನಾ ಶೈಲಿಯ ಅಡುಗೆಗಳು ಜನರ ಗಮನ ಸೆಳೆಯುತ್ತಿವೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಸಾಂಪ್ರದಾಯಿಕ ತಿನಿಸುಗಳಾದ ಮಸಾಲೆ ದೋಸೆ, ಪಲಾವ್, ಪುಳಿಯೋಗರೆ, ಸಕ್ಕರೆ ಪೊಂಗಲ್, ದಾವಣಗೆರೆಯ ಬೆಣ್ಣೆ ಮಸಾಲೆ, ಉತ್ತರದ ಜವಾರಿ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ಜತೆಗೆ ಫಾಸ್ಟ್ ಫುಡ್ ತಿನಿಸುಗಳಿಂದ ಮೊದಲುಗೊಂಡು, ವಿವಿಧ ಬಗೆಯ ಹಣ್ಣುಗಳ ಜ್ಯೂಸ್ ಅಂಗಡಿಗಳು, ಮಂಡಾಳು ಒಗ್ಗರಣೆ, ಮಿರ್ಚಿ ಬಜ್ಜಿ, ಪಾಪ್ ಕಾರ್ನ್, ಗೋಬಿ ಮಂಚೂರಿ, ನೂಡಲ್ಸ್, ಆಂಧ್ರಾ ಸ್ವೀಟ್ಸ್, ನಾನಾ ಬಗೆಯ ಹಪ್ಪಳ, ಸಂಡಿಗೆ ಸೇರಿದಂತೆ ನಾನಾ ಬಗೆಯ ತಿಂಡಿ ತಿನಿಸುಗಳು ಬಾಯಲ್ಲಿ ನೀರೂರಿಸಿದವು.
ಸಿಹಿಪ್ರಿಯರಿಗೆಂದು ಗೋಕಾಕ್ ಕರದಂಟು, ಧಾರವಾಡ ಪೇಢಾ, ಪಾಯಸ ಮೊದಲಾದ ತಿನಿಸುಗಳು ಚಾಟ್ಸ್ ಪ್ರಿಯರನ್ನು ಆಕರ್ಷಿಸುತ್ತಿವೆ. ಮಾಂಸಾಹಾರ ಪ್ರಿಯರ ಮನ ತಣಿಸುವ ಮಳಿಗೆಗಳನ್ನು ತೆರೆದಿದ್ದು, ನಾಟಿಕೋಳಿ, ಏಡಿ ಸಾರು ಹಾಗೂ ಧಮ್ ಬಿರಿಯಾನಿ, ಮಸ್ಕಿಯ ಗಡಿಗೆ ಚಿಕನ್ ಸೇರಿದಂತೆ ವಿವಿಧ ಬಗೆಯ ಬಿರಿಯಾನಿಗಳು, ಮೀನಿನ ಖಾದ್ಯಗಳು ಬಾಯೂರಿಸುತ್ತಿವೆ. ಇದರೊಟ್ಟಿಗೆ ಐಸ್‌ಕ್ರೀಮ್, ತಂಪು ಪಾನೀಯಗಳ ಮಾರಾಟಕ್ಕಿಡಲಾಗಿದೆ.

ವಿವಿಧ ಜಿಲ್ಲೆಗಳ ವ್ಯಾಪಾರಿಗಳು ಭಾಗಿ

ಆಹಾರ ಮೇಳದಲ್ಲಿ ಚಿಕ್ಕಮಗಳೂರು, ಗದಗ, ಮೈಸೂರು, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಹಲವು ಬಗೆಯ ತಿಂಡಿ, ಖಾದ್ಯಗಳ ತಯಾರಕರು, ಗ್ರಾಹಕರಿಗೆ ಆಹಾರದ ವಿಶೇಷ ತಿಳಿಸಿ ಸವಿಯಲೂ ನೀಡಿದರು.
ಉತ್ಸವ ಆರಂಭಗೊಂಡ ಮೊದಲ ದಿನವೇ ಬೆಳಗ್ಗೆಯಿಂದಲೇ ಆಹಾರ ಮೇಳಕ್ಕೆ ಸಾಗರೋಪಾದಿಯಲ್ಲಿ ಹರಿದುಬಂದ ಜನ ವಿವಿಧ ಬಗೆಯ ತಿನಿಸುಗಳ ರುಚಿ ಸವಿದರು. ರಾಯಚೂರು ಜಿಲ್ಲೆಯೂ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ, ತಾಲೂಕುಗಳ ಜನರು ಕೂಡ ಬರುತ್ತಿರುವುದು ಕಂಡುಬಂತು. ಹಲವು ಶಾಲೆಗಳ ಮಕ್ಕಳು ಶಾಲಾ ಶಿಕ್ಷಕರೊಂದಿಗೆ ಭೇಟಿ ನೀಡಿ, ಇಷ್ಟವಾದ ತಿಂಡಿ-ತಿನಿಸುಗಳ ರುಚಿ ನೋಡಿದರು.

ಸಿರಿಧಾನ್ಯದ ಪದಾರ್ಥಗಳಿಗೆ ಬೇಡಿಕೆ

ಆಹಾರ ಮೇಳದಲ್ಲಿ ಒಟ್ಟು 89 ಮಳಿಗೆಗಳನ್ನು ತೆರೆಯಲಾಗಿದೆ. ಹೊರ ಜಿಲ್ಲೆಯಿಂದ ಆಗಮಿಸಿದ ವ್ಯಾಪಾರಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಸಂಜೆ ವೇಳೆ ಮೇಳದ ಮಳಿಗೆಗಳಲ್ಲಿ ಜನಜಂಗುಳಿ ಇತ್ತು. ಸಜ್ಜೆ, ನವಣೆ, ಸಾವೆ, ಊದಲು, ಬಾರ್ಲಿ, ಜೋಳ, ರಾಗಿ ಸೇರಿದಂತೆ ವಿವಿಧ ಸಿರಿಧಾನ್ಯಗಳು ಹಾಗೂ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಧಾನ್ಯಗಳ ಪ್ರದರ್ಶನ ಗಮನ ಸೆಳೆಯಿತು.
ನೈಸರ್ಗಿಕವಾಗಿ ತೆಗೆದ ಕಬ್ಬಿನ ರಸ, ಶೇಂಗಾ, ಕುಸುಬೆಯಿಂದ ಮಾಡಿದ ಅಡುಗೆಎಣ್ಣೆ, ಹುಣಸೆ ಹಣ್ಣಿನ ಚಟ್ನಿ, ವಿವಿಧ ಚೂರ್ಣಗಳು, ಗಂಜಿ ಮಾಡುವ ಪದಾರ್ಥಗಳು, ಮಧುಮೇಹ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗುವ ಪೇಯಗಳು, ಸಿರಿಧಾನ್ಯಗಳಿಂದ ಮಾಡಿದ ಬಿಸ್ಕತ್ತು, ಚಾಕೋಲೆಟ್, ಐಸ್ಕ್ರೀಂ, ಕೇಕ್ ಮುಂತಾದ ತಿನಿಸುಗಳನ್ನು ಜನ ಮುಗಿಬಿದ್ದು ಖರೀದಿಸಿದರು.
ಒಟ್ಟಾರೆ ಆಹಾರ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಒಳ್ಳೆಯ ವಹಿವಾಟು ನಡೆದಿದೆ. ಜಿಲ್ಲಾ ಉತ್ಸವ ಫೆ.7ರವರೆಗೂ ನಡೆಯಲಿದ್ದು, ಆಹಾರ ಮೇಳದಲ್ಲಿ ಇನ್ನೂ ಹೆಚ್ಚಿನ ವ್ಯಾಪಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.

ಜಿಲೇಬಿ ಸವಿದ ಮಿನಿಸ್ಟರ್

ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಆಹಾರ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಪಡೆದರು. ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯೊಬ್ಬರು ಮಳಿಗೆಯಲ್ಲಿ ಆಗಷ್ಟೇ ತಯಾರಿಸಿದ್ದ ಜಿಲೇಬಿ ರುಚಿ ಸವಿದರು.ಅವರೊಂದಿಗೆ ಆಗಮಿಸಿದ್ದ ವಿವಿಧ ಗಣ್ಯರು ಕೂಡ ಜಿಲೇಬಿಯ ಸವಿಯನ್ನು ಸವಿದರು. ಬಳಿಕ ವಿಶೇಷವಾಗಿ ತಯಾರಿಸಿದ್ದ ಕೇಕ್ ಕತ್ತರಿಸಿ, ಶುಭ ಹಾರೈಸಿದರು.