ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ 
ರಾಜ್ಯ

ತಾಯಿ,ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ!

ಪ್ರಮುಖ ಮುಖ್ಯಾಂಶಗಳು

  • ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ
  • ಚಿಕ್ಕೋಡಿ ತಾಯಿ ಮಕ್ಕಳ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ
  • ಬಡ ಜನರಿಗೆ ಸಿಗದ ವೈದ್ಯಕೀಯ ಸೌಲಭ್ಯ
ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರಿಲ್ಲ!
| ಸುಸಜ್ಜಿತ ಕಟ್ಟಡದ ಸೌಲಭ್ಯಗಳ ಮರಿಚಿಕೆ | ಹೆಸರಿಗೆ ಮಾತ್ರ ಆಸ್ಪತ್ರೆ
ಆನಂದ ಭಮ್ಮನ್ನವರ ,ಚಿಕ್ಕೋಡಿ:
ಬಡ ಜನರಿಗೆ ಅನುಕೂಲವಾಗಲೆಂದು ಚಿಕ್ಕೋಡಿ ಪಟ್ಟಣದ ಹೊರವಲಯದ ಬಾಣಂತಿಕೋಡಿಯಲ್ಲಿ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾದ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರ ನಿರ್ಮಿಸಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಎಲ್ಲಾ ಅವ್ಯವಸ್ಥೆಗಳಿಂದ ಮೇಲೆ ಹೊಳಪು ಒಳಗೆ ಹುಳುಕು ಎಂಬಂತಾಗಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರ ಮಾಡಿ ಸುಸಜ್ಜಿತವಾದ ಕಟ್ಟಡ, ಅಗತ್ಯ ವೈದ್ಯಕೀಯ ಸಲಕರಣೆ ನೀಡಲಾಗಿದೆ. ಆದರೆ ಅಗತ್ಯ ವೈದ್ಯರ ನೇಮಕಾತಿ ಮಾಡದೆ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸೂಕ್ತ ಸೌಕರ್ಯಗಳು ಸಿಗದೆ, ಖಾಸಗಿ ಆಸ್ಪತ್ರೆಗಳ ಮುಖ ಮಾಡುವಂತಾಗಿದೆ.
ಆಸ್ಪತ್ರೆ ತಲುಪುವುದೇ ತಾಪತ್ರೆ:
ಪಟ್ಟಣದ ಹೊರವಲಯದಲ್ಲಿ ಸಾರಿಗೆ ಬಸ್ ನಿಲ್ದಾಣದಿಂದ 4 ಕಿ.ಮಿ ದೂರದಲ್ಲಿರುವ ಆಸ್ಪತ್ರೆಯವರೆಗೂ ತಲುಪಲು ಸಾರಿಗೆ ಬಸ್ ವ್ಯವಸ್ಥೆ ಇಲ್ಲ. ಆಸ್ಪತ್ರೆಯಿಂದ 300 ಮೀಟರ್ ದೂರದಲ್ಲಿ ಜೋಡ ಕುರಳಿ ಗ್ರಾಮಕ್ಕೆ ಸಂಚರಿಸುವ ಬಸ್‌ಗಳು ನಿಲ್ಲುತ್ತವೆ. ಆಸ್ಪತ್ರೆಯವರೆಗೂ ಬಸ್ ಸೇವೆ ಇಲ್ಲ. ಪರಿಣಾಮ ಆಟೊ ಮೂಲಕ ಕಡಿಮೆ ಎಂದರೇ 100-200 ರೂ.ಹಣ ನೀಡಿ ಆಸ್ಪತ್ರೆ ತಲುಪಬೇಕಿದೆ.ಬಡ ಜನರಿಗೆ ಇದು ದುಬಾರಿಯಾಗುತ್ತಿದೆ.ಆಸ್ಪತ್ರೆವರೆಗೂ ಬಸ್ ಸಂಚಾರಕ್ಕೆ ಒತ್ತಾಯವಿದೆ.
ತಿಂಗಳಿಗೆ 100ಕ್ಕೂ ಅಧಿಕ ಹೆರಿಗೆ:
ಆಸ್ಪತ್ರೆಯಲ್ಲಿ ನಿತ್ಯ 80-100 ಜನರು ಹೊರ ರೋಗಿಗಳ ತಪಾಸಣೆಗೆ ಒಳಗಾಗುತ್ತಾರೆ, ಜತೆಗೆ ಕಳೆದ ಮೂರು ತಿಂಗಳಲ್ಲಿ ಸಿಜರಿನ್ -೧೩೦, ಸಾಮಾನ್ಯ ೨೧೯ ಹೀಗೆ ಒಟ್ಟು ೩೪೯ ಹೆರಿಗೆ ಮಾಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ರೋಗಿಗಳು ಆಗಮಿಸುತ್ತಾರೆ, ಅದಕ್ಕೆ ತಕ್ಕಂತೆ ವೈದ್ಯರು ಬೇಡವೆ, ಆಸ್ಪತ್ರೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳು ಸರ್ಕಾರ ನೀಡಿದರೆ,ಇನ್ನಷ್ಟು ಬಡ ಜನರಿಗೆ ಅನುಕೂಲವಾಗುತ್ತದೆ ಎಂಬುದಕ್ಕೆ ಸಾರ್ವಜನಿಕ ಅಭಿಲಾಷೆಯಾಗಿದೆ.
ಯಾವ ಹುದ್ದೆ ಖಾಲಿ:
ಸ್ತ್ರೀ ರೋಗ ತಜ್ಞ -೧,ಅರವಳಿಕೆ ತಜ್ಞ -೨, ಮಕ್ಕಳ ತಜ್ಞ -೧, ಶುಶ್ರೂಷಕ-೨೧,ರೇಡಿಯೋಲಾಜಿಸ್ಟ್-೧,ಫಾರ್ಮಾಸಿಸ್ಟಿ-೧, ಡಿ,ಗ್ರೂಪ್-೬ ಹುದ್ದೆಗಳನ್ನು ಸರ್ಕಾರ ಮಂಜೂರ ಮಾಡಿತ್ತು. ಇದರಲ್ಲಿ ಅಗತ್ಯವಿರುವ ಸ್ತ್ರೀ ರೋಗ ತಜ್ಞ -೧,ಅರವಳಿಕೆ ತಜ್ಞ -೧, ಮಕ್ಕಳ ತಜ್ಞ -೧ ಪ್ರಮುಖ ಹುದ್ಧೆಗಳು ಖಾಲಿ ಇವೆ.ಸರ್ಕಾರ ಆಸ್ಪತ್ರೆಗೆ ವೈದ್ಯರು ನೇಮಕಕ್ಕೆ ಎಷ್ಟು ದಿನ ಬೇಕು ಎಂಬುವುದೇ ಪ್ರಶ್ನೆಯಾಗಿದೆ.
ಪ್ರಮುಖ ವೈದ್ಯರೇ ಇಲ್ಲ!
ಹೆಸರಿ ಸೂಚಿಸುವಂತೆ ಇದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಾಗಿದೆ. ಆದರೆ ಆಸ್ಪತ್ರೆಯಲ್ಲಿ ತಜ್ಞ ಸ್ತ್ರೀ ರೋಗ,ಚಿಕ್ಕ ಮಕ್ಕಳ ತಜ್ಞ ವೈದ್ಯರು ಇಲ್ಲದೇ ಇರುವುದು ಸಾಕಷ್ಟು ತೊಂದರೆಗೆ ಕಾರಣವಾಗಿದ್ದು, ಚಿಕ್ಕೋಡಿ ಭಾಗದ ಜನರು ಚಿಕ್ಕ ಮಕ್ಕಳ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಹಾಗೂ ತಾತ್ಕಾಲಿಕವಾಗಿ ಬರುವ ಚಿಕ್ಕ ಮಕ್ಕಳ ವೈದ್ಯರು ವಾರದಲ್ಲಿ ಎರಡೇ ದಿನ ಬರುವುದರಿಂದ ಚಿಕ್ಕ ಮಕ್ಕಳ ಚಿಕಿತ್ಸೆ ಆಸ್ಪತ್ರೆಯಲ್ಲಿ ಮರಿಚಿಕೆಯಾಗಿದೆ.
ಭಾಕ್ಸ್
ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆ !
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಸ್ಥಳಿಯ ಶಾಸಕರು,ಸಂಸದರು ಕಾಂಗ್ರೆಸ್ ಪಕ್ಷದವರೇ ಆಗಿದ್ದರು. ಬಡ ಜನರ ಪಾಲಿನ ತಾಯಿ ಮಕ್ಕಳ ಆಸ್ಪತ್ರೆಯ ಸಮಸ್ಯೆ ನಿವಾರಿಸಲು ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಶಾಸಕರು ಮಂಜೂರಾದ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುತ್ತಾರೆಯೇ? ವೈದ್ಯರ ನೇಮಕಕ್ಕೆ ಒತ್ತಡ ಹಾಕಬೇಕೆಲ್ಲವೆ ಎಂಬುವುದು ಜನರ ಪ್ರಶ್ನೆಯಾಗಿದೆ.
ಕೋಟ್-
ವೈದ್ಯರ ಕೊರತೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಬರುವ ಮಾರ್ಚ್ ಒಳಗೆ ಖಾಲಿ ಇರುವ ಹುದ್ಧೆಗಳು ಭರ್ತಿಯಾಗುವ ವಿಶ್ವಾಸವಿದೆ.ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.
ಡಾ,ಮಹೇಶ ನಾಗರಬೆಟ್ಟ
ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ,
ತಾಯಿ ,ಮಕ್ಕಳ ಆಸ್ಪತ್ರೆ,ಚಿಕ್ಕೋಡಿ