ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹಿಂದೂ ಸಮಾಜೋತ್ಸವದ ಮಾಹಿತಿ ಹಂಚಿಕೊಳ್ಳಲಾಾಯಿತು. 
ರಾಜ್ಯ

ಜ.18ರಿಂದ ರಾಜ್ಯಾದ್ಯಂತ ಮೂರು ಸಾವಿರಕ್ಕೂ ಅಧಿಕ ಹಿಂದೂ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಧರ್ಮದ ಆಚಾರ-ವಿಚಾರಗಳು, ಪರಿಸರ ಕಾಳಜಿ, ರಾಷ್ಟ್ರ ನಿರ್ಮಾಣ, ಮಾತೃಭಾಷೆ ಸೇರಿ ಹಲವು ವಿಚಾರಗಳ ಬಗ್ಗೆ ಜಾಗೃತಿ
  • ಜ.18ರಿಂದ ಫೆ.28ರವರೆಗೆ ರಾಜ್ಯಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಹಿಂದು ಸಮಾಜೋತ್ಸವ
  • ಮೊದಲ ಕಾರ್ಯಕ್ರಮವಾಗಿ ಬೆಂಗಳೂರಿನ ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ ಆಟದ ಮೈದಾನ (ಶಾಲಿನಿ ಗ್ರೌಂಡ್ಸ್) ದಲ್ಲಿ ಶನಿವಾರ (ಜ.18)ರಂದು ಸಂಜೆ 5.30ಕ್ಕೆ ನಡೆಯಲಿದೆ.
ಬೆಂಗಳೂರು: ಹಿಂದೂ ಧರ್ಮದ ಆಚಾರ-ವಿಚಾರಗಳು, ಪರಿಸರ ಕಾಳಜಿ, ರಾಷ್ಟ್ರ ನಿರ್ಮಾಣ, ಮಾತೃಭಾಷೆ ಸೇರಿ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯು ಜ.18ರಿಂದ ಫೆ.28ರವರೆಗೆ ರಾಜ್ಯಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಹಿಂದು ಸಮಾಜೋತ್ಸವಗಳನ್ನು ಆಯೋಜಿಸುತ್ತಿದೆ.
ಈ ಕುರಿತು ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಾರ್ಗದರ್ಶಕ ನಾ. ತಿಪ್ಪೇಸ್ವಾಮಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ವರ್ಷಾಚರಣೆ ಹಿನ್ನೆಲೆಯಲ್ಲಿ ಸಮಿತಿಯು ನಡೆಸಿದ ಮಂಡಲಗಳಲ್ಲಿ ಗಣವೇಷಗಳಲ್ಲಿ ವಿಜಯದಶಮಿಗಳು, ತಾಲೂಕು ಮಟ್ಟದಲ್ಲಿ ಯುವ ಸಮಾವೇಶಗಳು, ಮನೆಮನೆ ಸಂಪರ್ಕ ಅಭಿಯಾನ, ವಸತಿ/ಮಂಡಲಗಳಲ್ಲಿ ಹಿಂದು ಸಮ್ಮೇಳನ, ಉದ್ಭಾವನಾ ಸಮಾವೇಶಗಳು ಯಶಸ್ವಿಯಾಗಿ ಜರುಗಿವೆ. ಇದರ ಮುಂದುವರಿದ ಭಾಗವಾಗಿ ‘ಹಿಂದೂ ಸಮಾಜೋತ್ಸವ ಅಥವಾ ಹಿಂದೂ ಸಮ್ಮೇಳನ’ಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಇಂದು ಬೆಂಗಳೂರಿನಲ್ಲಿ ಚಾಲನೆ:

ಸಮಾಜೋತ್ಸವದ ಮೊದಲ ಕಾರ್ಯಕ್ರಮವಾಗಿ ಬೆಂಗಳೂರಿನ ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ ಆಟದ ಮೈದಾನ (ಶಾಲಿನಿ ಗ್ರೌಂಡ್ಸ್) ದಲ್ಲಿ ಶನಿವಾರ (ಜ.18)ರಂದು ಸಂಜೆ 5.30ಕ್ಕೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಹಿಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ, ಸಂಸ್ಕೃತ ವಿದುಷಿ ಡಾ. ಆರತಿ ವಿ.ಬಿ. ಮತ್ತು ಚಿತ್ರನಟ ಜಗ್ಗೇಶ್ ಭಾಗವಹಿಸಲಿದ್ದಾರೆ.
ದಕ್ಷಿಣ ಕರ್ನಾಟಕದಲ್ಲಿ ಜ.18ರಿಂದ ಫೆ.1ರವರೆಗೆ ಹಾಗೂ ಉತ್ತರ ಕರ್ನಾಟಕದಲ್ಲಿ ಫೆ.28ರವರೆಗೆ ಜನಜಾಗೃತಿ ಸಭೆಗಳು ನಡೆಯಲಿವೆ. ಇದಕ್ಕಾಗಿ ತಾಲೂಕು ಮಟ್ಟದ ಸ್ಥಾನೀಯ ಸಮಿತಿ ಆಯೋಜಿಸಲಾಗಿದೆ. ಸಮಾಜದ ಗಣ್ಯರು, ಮುಖಂಡರು, ವಿವಿಧ ಸಾಮಾಜಿಕ ಹಿನ್ನೆಲೆಯ ಪ್ರಮುಖರು ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯಕ್ರಮ ಆಯೋಜಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂಬಂಧ ಗೋಪೂಜೆ, ಶೋಭಾಯಾತ್ರೆ, ಬೈಕ್ ರ‌್ಯಾಲಿ, ಸ್ವದೇಶೀ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಯನಗರ ಅಧ್ಯಕ್ಷೆ ಸಾಧನಾ ರಾಜಶೇಖರ್, ಕೆಂಗೇರಿ ಅಧ್ಯಕ್ಷ ಮುನಿ ಆಂಜನಪ್ಪ ಮತ್ತು ಹನುಮಂತನಗರದ ಅಧ್ಯಕ್ಷ ರಾಜೇಂದ್ರ ನಾಯ್ಡು ಉಪಸ್ಥಿತರಿದ್ದರು.