ಶಹಾಪುರ ತಾಲೂಕಿನ ಹತ್ತಿಗೂಡುರನಲ್ಲಿನ ಸರ್ಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೀರನೂರಿನ ಗ್ರಾಮಸ್ಥರು. 
ರಾಜ್ಯ

ಕಲುಷಿತ ನೀರು ಸೇವಿಸಿ 60ಕ್ಕೂ ಹೆಚ್ಚು ಜನ ಅಸ್ವಸ್ಥ

ಶಹಾಪುರ: ತಾಲೂಕಿನ ಬೀರನೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ 60ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಬಳಸಿ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ತಾಲೂಕಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಗ್ರಾಮದ ಹಳೇ ಬಾವಿ ನೀರು ಸೇರಿದ ಹಿನ್ನೆಲೆಯಲ್ಲಿ ಏಕಾಏಕಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ನಿತ್ಯವೂ ಐದರಿಂದ ಹತ್ತು ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ವಿಷಯ ತಿಳಿದ ಆರೋಗ್ಯ ಇಲಾಖೆ ತಾಲೂಕು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.
ಆದರೂ ನಿಯಂತ್ರಣಕ್ಕೆ ಬಾರದೆ ಕಾರಣ ಹತ್ತಿಗೂಡುರು, ಶಹಾಪುರ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ವೃದ್ಧರಿಗೆ ಅವರವರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಸ್ಥರ ಪ್ರಕಾರ ಬೀರನೂರನಲ್ಲಿ ಆರ್​ಒ ಪ್ಲಾಂಟ್​ ಬಂದ್​ ಆಗಿ ಅನೇಕ ತಿಂಗಳು ಕಳೆದಿವೆ. ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಅದೂ ಕೂಡ ಐದಾರು ದಿನಗಳಿಂದ ಸರಬರಾಜು ಆಗಿಲ್ಲ. ಇದರಿಂದ ಹನಿ ನೀರಿಗೂ ಪರಿತಪಿಸಿದ ಜನರು ಅನಿವಾರ್ಯವಾಗಿ ಗ್ರಾಮದಲ್ಲಿನ ಹಳೇ ಬಾವಿಯ ನೀರೇ ತಂದು ಸೇವಿಸಿದ್ದರಿಂದ ಅನೇಕರಲ್ಲಿ ಭೇದಿ ಕಾಣಿಸಿಕೊಂಡಿದೆ.
ಇದರಿಂದಾಗಿ ಇಡೀ ಗ್ರಾಮವೇ ಭಯದಲ್ಲಿ ಮುಳುಗಿದೆ. ವಿಷಯ ಗೊತ್ತಾಗುತ್ತಲೇ ಗ್ರಾಮದ ಯುವಕರು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಆಗ ಡಿಎಚ್​ಒ ಮತ್ತು ತಾಲೂಕು ವೈದ್ಯಾಧಿಕಾರಿಗಳ ತಂಡ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ತೆರಳಿ ಚಿಕಿತ್ಸೆ ಮುಂದಾಗಿದೆ. ಇದು ಆರಂಭಗೊಂಡು ನಾಲ್ಕು ದಿನಗಳಾದರೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಕುರಿತು ಡಿಎಚ್​ಒ ಡಾ.ಮಹೇಶ ಬಿರಾದಾರ ಅವರನ್ನು ಮಾತನಾಡಿಸಿದಾಗ ಫುಡ್​ ಫಾಯಿಜನ್​ನಿಂದಾಗಿ ಹೀಗಾಗಿದ್ದು, ನೀರಿನ ಶಾಂಪಲ್​ ಕಳುಹಿಸಲಾಗಿದೆ. ಸಧ್ಯ ಈಗ ನಿಯಂತ್ರಣದಲ್ಲಿದೆ ಎಂದರು.