More than 30 autos seized for violating rules
ಚೇಳೂರು: ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ 30ಕ್ಕೂ ಹೆಚ್ಚು ಆಟೊಗಳನ್ನು ಮಂಗಳವಾರ ಪಟ್ಟಣದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಕೆಇಬಿ ಮುಂಭಾಗದ ಆಟೋ ಸ್ಟಾ$ಂಡ್, ಖಾಸಗಿ ಬಸ್ ನಿಲ್ದಾಣ, ಚಿಂತಾಮಣಿ ರಸ್ತೆಯ ಆಟೋ ಸ್ಟ್ಯಾಂಡ್, ಮಹಾತ್ಮ ಗಾಂಧಿ ವೃತ್ತ, ಆಂಧ್ರ ಬಸ್ ನಿಲ್ದಾಣ ಸೇರಿ ವಿವಿಧೆಡೆ ರಸ್ತೆಗಿಳಿದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಸಬ್ ಇನ್ಸ್ಪೆಕ್ಟರ್ ಕೆ.ಗಣೇಶ್ ನೇತೃತ್ವದ ತಂಡ ಆಟೊಗಳ ತಪಾಸಣೆ ನಡೆಸಿತು.
ಚಾಲನಾ ಪರವಾನಗಿ ಸೇರಿ ಚಾಲಕರ ದಾಖಲೆಗಳು, ಸಮವಸ್ತ್ರ ಹಾಕದೇ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿರುವ ಆಟೊಗಳನ್ನು ವಶಪಡಿಸಿಕೊಳ್ಳಲಾಯಿತು. ಪಟ್ಟಣಕ್ಕೆ ಕೂಗಳತೆ ದೂರದಲ್ಲಿ ಆಂಧ್ರದ ಕಂದುಕೂರು, ಕೊತ್ತಕೋಟೆ, ಮುಲಕಲಚೇರುವು, ಪಿಟಿಎಂ, ಚೆಕ್ಪೋಸ್ಟ್ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಆಟೊಗಳು ಸಂಚರಿಸುತ್ತವೆ. ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಖಾಸಗಿ ಸರಕು ಸಾಗಾಣೆ ಆಟೊಗಳಲ್ಲಿಯೇ ಜನರು ಸಂಚರಿಸುತ್ತಾರೆ.
ಜನರನ್ನು ನಿಗದಿತ ಸಂಖ್ಯೆಗಿಂತ ಹೆಚ್ಚಾಗಿ ತುಂಬಿಕೊಂಡು ಆಟೋ ಚಾಲನೆ ಮಾಡುತ್ತಿದ್ದಾರೆ. ಆಂಧ್ರದ ಕೆಲವು ಆಟೊಗಳ ಚಾಲಕರಿಗೆ ಪರವಾನಗಿ ಇಲ್ಲದಿದ್ದರೂ ರಾಜಾರೋಷವಾಗಿ ಸಂಚರಿಸುತ್ತಿದ್ದಾರೆ. ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದರು.
ಪೊಲೀಸರು ಆಟೊಗಳನ್ನು ವಶಪಡಿಸಿಕೊಂಡಿದ್ದರಿಂದ ಆಟೊ ಸಂಚಾರ ಇಲ್ಲದೇ ಮುಖ್ಯರಸ್ತೆ ಬಿಕೋ ಎನ್ನುತ್ತಿತ್ತು. ಜತೆಗೆ ಸಾರ್ವಜನಿಕರು ಗ್ರಾಮಗಳಿಗೆ ಕೆಎಸ್ಆರ್ಟಿಸಿ, ಖಾಸಗಿ ವಾಹನಗಳಲ್ಲಿ ತೆರಳಿದರು. ಹತ್ತಿರದ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದಿರುವುದರಿಂದ ಜನರು ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂತು.
ಕೆಲವು ಚಾಲಕರ ಬಳಿ ದಾಖಲೆಗಳಿದ್ದು, ಉಳಿದ ಚಾಲಕರಿಗೆ ಕಾಲಾವಕಾಶ ನೀಡಲಾಗಿದ್ದು, ಪರವಾನಗಿ, ವಿಮೆ ದಾಖಲೆಗಳನ್ನು ಸರಿಮಾಡಿಕೊಂಡು ಬರಲು ಸರ್ಕಲ್ ಇನ್ಸ್ಪೆಕ್ಟರ್ ತಿಳಿಸಿದರು.
ದ್ವಿಚಕ್ರ, ತ್ರಿಚಕ್ರವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಆಟೋ ಚಾಲಕರು ಸಮವಸ್ತ್ರ ಹಾಕಬೇಕು. ಪ್ರಯಾಣಿಕರ ಜತೆಗೆ ಉತ್ತಮವಾಗಿ ಇರಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಬಾರದು. ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನ ನಿಲ್ಲಿಸಬೇಕು. ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆಯಾಗಿದ್ದು, ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಬಾರದು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಎಚ್ಚರಿಸಿದರು.