ಎಐ ಚಿತ್ರ 
ರಾಜ್ಯ

ತುರ್ತು ಸೇವೆಗೆ ಮತ್ತಷ್ಟು ಬಲ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಆಂಬುಲೆನ್ಸ್‌ಗಳಿಗೆ ಎನ್‌ಜಿ-ಇಆರ್‌ಎಸ್‌ಎಸ್ ತಂತ್ರಾಂಶ ಅಳವಡಿಕೆ
  • 108 ಮಾದರಿ ಬಳಕೆ
  • 1,270 ಅಂಬುಲೆನ್ಸ್‌ಗಳಿಗೆ 4.45 ಕೋಟಿ ರೂ. ವೆಚ್ಚ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 108 ಆಂಬುಲೆನ್ಸ್ ಮಾದರಿಯಲ್ಲಿ ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ 1,270 ಅಂಬುಲೆನ್ಸ್‌ಗಳಿಗೆ 4.45 ಕೋಟಿ ರೂ. ವೆಚ್ಚದಲ್ಲಿ ಎನ್‌ಜಿ-ಇಆರ್‌ಎಸ್‌ಎಸ್ 112 ತಂತ್ರಾಂಶ ಅಳವಡಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.
ಅರೋಗ್ಯ ಇಲಾಖೆ ಅಧೀನದಲ್ಲಿ ಈಗಾಗಲೇ 3,700ರಷ್ಟು 108 ಅಂಬುಲೆನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಜತೆ ಎಲ್ಲ ಮಾದರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂದಾಜು 1,270 ಅಂಬುಲೆನ್‌ಗಳ ನಿಗಾವಹಿಸಲು, ತುರ್ತು ಪ್ರಕರಣಗಳನ್ನು ಸಾಗಿಸಲು ಹಾಗೂ ತಳಮಟ್ಟದ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಅನುಕೂಲ ಆಗುವಂತೆ ಎನ್ ಜಿ- ಇಆರ್ ಎಸ್ ಎಸ್ 112 ತಂತ್ರಾಂಶ ಅಳವಡಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ 2025-26ನೇ ಸಾಲಿಗೆ ರಾಷ್ಟ್ರೀಯ ಅಪಘಾತ ಮತ್ತು ಸುಟ್ಟ ಗಾಯಗಳ ಕಾರ್ಯಕ್ರಮದಡಿ ಆಂಬುಲೆನ್ ಹಾಗೂ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಬಲಪಡಿಸಲು 145 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆಂಬುಲೆನ್ ಗಳಿಗೆ ಅವಶ್ಯಕವಿರುವ ಮೊಬೈಲ್ ಡೇಟಾ ಟರ್ಮಿನಲ್‌ಗಳಿಗೆ ಪ್ರತಿ ಉಪಕರಣಕ್ಕೆ ಅಂದಾಜು 35,000 ರೂ.ಗಳಂತೆ ಒಟ್ಟು 2 4.45 ಕೋಟಿ ರೂ. ಅನುದಾನವನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯ 2025-26ನೇ ಸಾಲಿನ ಲೆಕ್ಕ ಶೀರ್ಷಿಕೆಯಡಿಯಲ್ಲಿನ ಅನುದಾನದಿಂದ ಭರಿಸಲು ಇಲಾಖೆಯಿಂದ ಆದೇಶಿಸಲಾಗಿದೆ.

ಹೇಗೆ ನಿರ್ವಹಣೆ ?

108 ಅಂಬುಲೆನ್ಸ್ ತುರ್ತು ಸೇವೆಗಳಿಗಾಗಿ ಉಚಿತ ಟೋಲ್ ಫ್ರೀ ದೂರವಾಣಿ ಕರೆ ಮೂಲಕ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿದೆ. ಅಪಘಾತಗಳು ಮತ್ತು ಇತರ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಆಸ್ಪತ್ರೆಗಳಿಗೆ ಸೇರಿಸಲು 108 ಆಂಬುಲೆನ್ಸ್‌ಗಳಿಂದ ಉಚಿತ ಸೇವೆ ನೀಡಲಾಗುತ್ತಿದೆ. ಇದರಂತೆ, ಇನ್ನು ಮುಂದೆ ತುರ್ತು ವೈದ್ಯಕೀಯ ಸೇವೆಗಳಿಗಾಗಿ 108 ಮಾದರಿಯಲ್ಲಿ ಎಲ್ಲ ರೀತಿಯ ಸರ್ಕಾರಿ ಆಸ್ಪತ್ರೆಗಳ ಅಂಬುಲೆನ್ ಗಳಿಂದ ರಾಜ್ಯದ ಜನರಿಗೆ ಸೇವೆ ನೀಡಲು ಸರ್ಕಾರ ಮುಂದಾಗಿ ಆದೇಶ ಹೊರಡಿಸಿದೆ. ರಾಜ್ಯ ಮಟ್ಟದಲ್ಲಿ ಒಂದು ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ತಂತ್ರಾಂಶ ಅಳವಡಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅಂಬುಲೆನ್ಸ್‌ನಲ್ಲಿ ತರಬೇತಿ ಪಡೆದ ಸಿಬ್ಬಂದಿ, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅಗತ್ಯ ಪೂರ್ವ-ಆಸ್ಪತ್ರೆ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಾರೆ. ಅಂಬುಲೆನ್ಸ್‌ ಗಳಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗುತ್ತದೆ ಮತ್ತು ಮೊಬೈಲ್ ಡೇಟಾ ಟರ್ಮಿನಲ್ ಮೂಲಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ಇದು ರೋಗಿಯನ್ನು ಪತ್ತೆಹಚ್ಚಲು ಮತ್ತು ಹತ್ತಿರದ ಆಸ್ಪತ್ರೆಗಳಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಯಶಸ್ವಿ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸಿಬ್ಬಂದಿ ಕೊರತೆ-ಮಲಗಿದ ವಾಹನ

ಆರೋಗ್ಯ ಇಲಾಖೆ ಅಧೀನದಲ್ಲಿ ರಾಜ್ಯದಲ್ಲಿ ಈಗಾಲೇ 3,700ರಷ್ಟು 108 ಆಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದರೂ, ಅಂದಾಜು 1,500ಕ್ಕೂ ಅಧಿಕ ವಾಹನಗಳು ಕಾರ್ಯನಿರ್ವಹಿಸದೆ ಮೂಲೆಗುಂಪಾಗಿವೆ. ಅಂಬುಲೆನ್ಸ್ ಸಿಬ್ಬಂದಿಗೆ 24 ಗಂಟೆಗಳ ಸೇವೆ ಬದಲಿಗೆ ಎಂಟು ತಾಸು ಸೇವೆ ಮಾಡಲು ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲ ಆಂಬುಲೆನ್ಸ್ ರಾತ್ರಿ ವೇಳೆ ಕಾರ್ಯನಿರ್ವಹಿಸುತ್ತಿಲ್ಲ. ವಾಹನಗಳ ನಿರ್ವಹಣೆಯನ್ನು ಸರ್ಕಾರವೇ ಮಾಡುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದರ ನಡುವೆ ಸರ್ಕಾರಿ ಆಸ್ಪತ್ರೆಗಳ ಅಂಬುಲೆನ್ಸ್‌ಗಳಿಗೂ ಎನ್‌ಜಿ-ಇಆರ್‌ಎಸ್ಎಸ್ 112 ತಂತ್ರಾಂಶ ಅಳವಡಿಸಿ ಸೇವೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ.