ದ್ಯಾವನೂರು ಗ್ರಾಮದಲ್ಲಿ ನೂತನ ಆರೋಗ್ಯ ಕಟ್ಟಡಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಬಿ.ಎಚ್. ಶಿವಣ್ಣ, ವಿ.ಎನ್.ಮಂಜುನಾಥ್, ಸಾಕಮ್ಮ ಲಿಂಗರಾಜು, ಬಾಗೂರು ಮನು, ಸಂಪತ್‌ಕುಮಾರ್ ಇತರರಿದ್ದರು. 
ರಾಜ್ಯ

ಆರೋಗ್ಯ ಸೇವೆಗಾಗಿ ಹೆಚ್ಚಿನ ಅನುದಾನ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ
  • ಹೋಬಳಿಯ ದ್ಯಾವನೂರು ಗ್ರಾಮ
ಬಾಗೂರು: ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಮನವಿ ಮಾಡಿದರು.
ಹೋಬಳಿಯ ದ್ಯಾವನೂರು ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆಯಡಿ ನೂತನ ಆರೋಗ್ಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆಯ ಮೂಲಕ ತಾಲೂಕಿನಲ್ಲಿ 40 ನೂತನ ಆರೋಗ್ಯ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಅಲ್ಲದೆ ದ್ಯಾವನೂರಿನಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಕಟ್ಟಡದಿಂದ ಗ್ರಾಮಸ್ಥರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದರು.
ಗ್ರಾಮದಲ್ಲಿ ಈಗಾಗಲೇ ರಸ್ತೆ, ದೇವಾಲಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಶೀಘ್ರ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಮಳೆ ಕೊರತೆಯಿಂದ ಹೇಮಾವತಿ ಜಲಾಶಯದಿಂದ ಕಡಿಮೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಗ್ರಾಮ ಕೆರೆ ತುಂಬಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ಚನ್ನರಾಯಪಟ್ಟಣ ತಾಲೂಕು ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿದ್ದು, ಸರ್ಕಾರದ ಮಾರ್ಗಸೂಚಿಯಂತೆ ರೈತರಿಗೆ ಪರಿಹಾರ ದೊರೆಯಲಿದೆ ಎಂದರು.
ತಾಲೂಕಿಗೆ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸಂಜೆ ವೇಳೆ ಹೆಚ್ಚಿನ ಲೋಡ್ ಶೆಡ್ಡಿಂಗ್‌ನಿಂದ ಗ್ರಾಮೀಣ ಜನರಿಗೆ ತೊಂದರೆಯಾಗುತ್ತಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್.ಮಂಜುನಾಥ್, ತಾಪಂ ಮಾಜಿ ಸದಸ್ಯ ಓಬಳಾಪುರ ಬಸವರಾಜ್, ತಾಲೂಕು ಟಿಎಪಿಎಂಎಸ್ ಮಾಜಿ ನಿರ್ದೇಶಕ ಬಾಗೂರು ಮನು, ಲ್ಯಾಂಡ್ ಆರ್ಮಿ ಇಂಜಿನಿಯರ್ ಪ್ರೀತಮ್, ಗುತ್ತಿಗೆದಾರರಾದ ಗೋಪಾಲ್, ಹೆಬ್ಬಾಳು ವೆಂಕಟೇಶ್, ಮಾಜಿ ಗ್ರಾಪಂ ಅಧ್ಯಕ್ಷೆ ಸಾಕಮ್ಮ ಲಿಂಗರಾಜು ಇತರರಿದ್ದರು.