ಕನಕಗಿರಿ ತಾಲೂಕಿನ ಹಿರೇಮಾದಿನಾಳ ಬಳಿಯ ಬೆಟ್ಟದಲ್ಲಿ ಉಳಿದಿರುವ ಮೋರೆರ್ ಸಮಾಧಿ. 
ರಾಜ್ಯ

ಮೊರೇರ್ ಕಲ್ಲಿನ ಮನೆಗಳು ಕಣ್ಮರೆ!

ಪ್ರಮುಖ ಮುಖ್ಯಾಂಶಗಳು

  • ಶಿಲಾಯುಗ ನೆಲೆಗಳಿಗೆ ಬೇಕಿದೆ ಕಾಯಕಲ್ಪ
  • ಸಮಾಧಿ ಕಲ್ಲು ಸಂಶೋಧನೆ ಅಗತ್ಯ
ಕನಕಗಿರಿ: ಮಾನವನ ಸೃಷ್ಟಿಯ ಬಳಿಕ ಶಿಲಾಯುಗ, ತಾಮ್ರಯುಗ, ಕಬ್ಬಿಣಯುಗದ ಬೃಹತ್ ಶಿಲಾಯುಗಗಳಲ್ಲಿ ಹಂತ ಹಂತವಾಗಿ ಜೀವನ ಶೈಲಿ ಬೆಳೆಯುತ್ತಾ ಬಂದಿದೆ. ಇತಿಹಾಸ ತಜ್ಞರಿಂದ ಸಂಶೋಧನೆಗಳು ಮುಂದುವರಿದಿದ್ದು, ಪೂರಕ ಸಾಕ್ಷ್ಯಗಳು ಈಗಲೂ ದೊರೆಯುತ್ತಿವೆ. 
ಆದಿ ಮಾನವನ ಶವ ಸಂಸ್ಕಾರದ ಬೃಹತ್ ಶಿಲಾಯುಗದ ನೆಲೆಗಳು ತಾಲೂಕಿನ ಗಡಿಯಲ್ಲಿದ್ದು, ಹೊರ ಜಗತ್ತಿಗೆ ತಿಳಿದಿಲ್ಲ. ಕುರುಹು ಸಂರಕ್ಷಿಸಬೇಕಿದ್ದ ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷೃ ವಹಿಸಿದ್ದರಿಂದಾಗಿ ದಿನದಿಂದ ದಿನಕ್ಕೆ ಕುರುಹುಗಳು ಮರೆಯಾಗುತ್ತಿವೆ.
ಮನುಷ್ಯ ಸೃಷ್ಟಿಯ ಬೆಳವಣಿಗೆ ಹಂತಗಳಲ್ಲಿ ಬೃಹತ್ ಶಿಲಾಯುಗ (ಪ್ರ.ಶ.ಪೂ. 1200ರಿಂದ 2000) ಪ್ರಮುಖ. ಆದಿ ಮಾನವ ಅಲೆಮಾರಿ ಜೀವನದ ಬಳಿಕ ಸುರಕ್ಷಿತವೆನಿಸಿದ ಬೆಟ್ಟ-ಗುಡ್ಡಗಳನ್ನು ಆಯ್ದುಕೊಂಡು ಒಂದೆಡೆ ನೆಲೆ ನಿಲ್ಲಲು ಮುಂದಾಗಿದ್ದಾನೆ. ಕಲ್ಲಿನಿಂದಲೇ ಆಯುಧ ತಯಾರಿಸಿ ಆಹಾರ ಬೇಟೆಯಾಡಿದ್ದಾನೆ. 
ತಾಮ್ರ ಹಾಗೂ ಕಬ್ಬಿಣದ ಬಳಕೆ ಕಂಡುಕೊಂಡಿದ್ದಾನೆ. ಸತ್ತ ಮನುಷ್ಯನನ್ನು ಗೌರವಯುತವಾಗಿ ಸಂಸ್ಕಾರ ಮಾಡಿ, ಗುರುತಿಗಾಗಿ ಕಲ್ಲಿನ ಚಪ್ಪಡಿಯ ಮನೆಗಳನ್ನು ನಿರ್ಮಿಸಿದ್ದಾನೆ. ಮನುಷ್ಯ ರೂಪದ ಬೃಹತ್ ಕಲ್ಲುಗಳನ್ನು ಇರಿಸಿದ್ದಾನೆ. ಕಬ್ಬಿಣದ ಬಳಕೆ ಕಂಡುಕೊಂಡ ಮಾನವ, ತಾಮ್ರಯುಗಕ್ಕೆ ಅಂತ್ಯಹಾಡಿ ಕಬ್ಬಿಣ ಬೃಹತ್ ಶಿಲಾಯುಗಕ್ಕೆ ಮುನ್ನುಡಿ ಬರೆದು, ಪುನರ್ಜನ್ಮ ಕಲ್ಪನೆಯಿಂದ ಶವ ಸಂಸ್ಕಾರ ಕಂಡುಕೊಂಡಿರುವುದಾಗಿ ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತಿದೆ.
ಬೃಹತ್ ಶಿಲಾಯುಗದ ಪ್ರಮುಖ ನೆಲೆಯಾಗಿ ಅತೀ ಹೆಚ್ಚು ಕಲ್ಲಿನ ಮನೆಗಳು (ಮೊರೇರ್ ಸಮಾಧಿ) ಇರುವ ಹಿರೇಬೆಣಕಲ್ ಬೆಟ್ಟ ಮಾತ್ರ ಚಿರಪರಿಚಿತವಾಗಿದೆ. ವಿದೇಶಿ ಇತಿಹಾಸಕಾರರು, ಆಸಕ್ತರು ಅಲ್ಲಿಗೆ ಭೇಟಿ ನೀಡಿ ಇತಿಹಾಸ ಅರಿಯುವ ಪ್ರಯತ್ನ ನಡೆಸಿದ್ದಾರೆ. ಬೆಟ್ಟದ ಕೆಳಗೆ ಇತ್ತೀಚೆಗೆ ಮತ್ತಷ್ಟು ಕುರುಹುಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾಗ ರೈತನಿಗೆ ದೊರೆತಿವೆ. ಅದರ ಸಮಕಾಲೀನವಾದ ಹತ್ತಾರು ನೆಲೆಗಳು ಗಂಗಾವತಿ ತಾಲೂಕಿನಲ್ಲಿ ಕಾಣಬಹುದಾಗಿದೆ.
ಮೂರು ನೆಲೆಗಳು ಕನಕಗಿರಿ ತಾಲೂಕಿನ ಗಡಿಯಂಚಿಗಿನ ಗಂಗಾವತಿ ತಾಲೂಕಿನ ಆಗೋಲಿ ಬೆಟ್ಟದಲ್ಲಿವೆ. ಕನಕಗಿರಿ ತಾಲೂಕಿನ ಹಿರೇಮಾದಿನಾಳದಿಂದ ಕಾಲ್ನಡಿಗೆಯಿಂದ ಸಾಗಬಹುದಾದ ಈ ಶಿಲಾಸಮಾಧಿಗಳ ಜಾಗ, ಕುರುಹುಗಳನ್ನು ತಿಳಿದ ಬಹುತೇಕರು, ಇವನ್ನು ಹಿರೇಮಾದಿನಾಳ ಮೊರೇರ್ ಮನೆ (ಮೊರೇರ್‌ಕಲ್ಲು) ಎನ್ನುವುದು ವಾಡಿಕೆ. ಆದರೆ, ಈ ನೆಲೆಗಳು ಆಗೋಲಿ ಸೀಮಾಕ್ಕೆ ಸೇರಿದ ಸರ್ಕಾರಿ ಬೆಟ್ಟಗಳ ಸಾಲಿನಲ್ಲಿವೆ. 
ಒಂದು ನೆಲೆಯಲ್ಲಿ ಒಂದು ಮನೆ (ಸಮಾಧಿ) ಮಾತ್ರ ಉತ್ತಮವಾಗಿದ್ದು, 8 ಅಡಿಗೂ ಎತ್ತರವಿದೆ. 4 ಕಡೆಗಳಲ್ಲಿ ಬಂಡೆಗಳಿದ್ದು, ಮೇಲೆ ಚಪ್ಪಡಿ ಕಲ್ಲಿನಿಂದ ಮುಚ್ಚಲಾಗಿದೆ. ಒಂದು ಕಡೆ ಕಿಂಡಿ ಬಿಡಲಾಗಿರುವುದನ್ನು ಇತಿಹಾಸ ತಜ್ಞರು ಗುರುತಿಸುವ ಕೆಲಸ ಮಾಡಿದ್ದಾರೆ.  ಅಕ್ಕಪಕ್ಕದಲ್ಲಿಯೇ ಹತ್ತಕ್ಕೂ ಹೆಚ್ಚು ಸಮಾಧಿಯ ಕಲ್ಲುಗಳು ನೆಲಕಚ್ಚಿವೆ. 
ಕೂಗಳತೆ ದೂರದಲ್ಲಿ ಇನ್ನೆರಡು ನೆಲೆಗಳಿದ್ದು, ಅದರಲ್ಲಿ ಒಂದರಲ್ಲಿ ಅಪೂರ್ಣ ಸಮಾಧಿಯಿದ್ದರೆ, ಮತ್ತೊಂದು ಸಂಪೂರ್ಣ ಹಾಳಾಗಿದೆ. ಅತ್ಯಂತ ಮಹತ್ವವಾದ ಕುರುಹುಗಳು ಬಹುತೇಕರಿಗೆ ತಿಳಿದೇ ಇಲ್ಲ. ಅತಿ ಹೆಚ್ಚು ಶಿಲಾ ಸಮಾಧಿಗಳು ಇರುವ ಹಿರೇಬೆಣಕಲ್‌ನ ಮೊರೇರ್ ಬೆಟ್ಟ ಸೇರಿ ಇನ್ನುಳಿದ ಪ್ರದೇಶಗಳಲ್ಲಿನ ಶಿಲಾಸಮಾಧಿ ಸ್ಥಳಗಳನ್ನು ರಕ್ಷಣೆ ಮಾಡಿ, ಸಂಶೋಧಕರ ಅಧ್ಯಯನಕ್ಕೆ, ಮುಂದಿನ ಪೀಳಿಗೆಗೆ ಶಿಲಾಯುಗದ ಬಗ್ಗೆ ತಿಳಿಸುವ ತುರ್ತು ಕಾರ್ಯ ಆಗಬೇಕಿದೆ. 

ಕುರುಹುಗಳಿರುವುದು ಎಲ್ಲೆಲ್ಲಿ?: ಹಿರೇಬೆಣಕಲ್, ಚಿಕ್ಕಬೆಣಕಲ್, ಗಡ್ಡಿ, ಆಗೋಲಿ, ಹೇಮಗುಡ್ಡ, ಬಂಡ್ರಾಳ, ಮಲ್ಲಾಪುರ, ಸಂಗಾಪುರ, ಆನೆಗುಂದಿಗಳಲ್ಲಿ ಆದಿ ಮಾನವ ನೆಲೆಯೂರಿದ ಕುರುಹುಗಳಿವೆ. 40ಕ್ಕೂ ಹೆಚ್ಚು ಶಿಲಾ ಸಮಾಧಿಗಳು ಇರುವ ಬಗ್ಗೆ ಇತಿಹಾಸಕಾರರು ತಿಳಿಸಿದ್ದಾರಾದರೂ, ಒಂದು ಮಾತ್ರ ಸುರಕ್ಷಿತವಾಗಿದ್ದು, ಇನ್ನುಳಿದವು ನೆಲಸಮವಾಗಿವೆ. ಆದರೆ, ಈ ಕಲ್ಲುಗಳು ಸುತ್ತಮುತ್ತಲಿನ ಜಮೀನುಗಳ ಒಡ್ಡುಗಳಿಗೆ ಬಳಕೆಯಾಗಿರುವುದು ಕಣ್ಣಿಗೆ ರಾಚುತ್ತದೆ.

ಆದಿ ಮಾನವರು ಕಲ್ಲಪ್ಪ ಕ್ಯಾಂಪ್, ಹಿರೇಬೆಣಕಲ್‌ಗಳಲ್ಲಿ ಬಿಟ್ಟರೆ ಆಗೋಲಿಯ ಪ್ರದೇಶದಲ್ಲಿ ಕಲ್ಗೊಂಬೆ ನೆಟ್ಟಿರುವುದು ವಿಶೇಷಗಳಲ್ಲೊಂದು. ಹಿರೇಬೆಣಕಲ್ ವಿಶ್ವಪರಂಪರೆ ತಾಣವನ್ನಾಗಿಸುವ ಸಂದರ್ಭದಲ್ಲಿ ಆದಿ ಮಾನವ ವಾಸವಾಗಿದ್ದ ಈ ಭಾಗದ ಬೃಹತ್ ಶಿಲಾಯುಗದ ಎಲ್ಲ ಪ್ರದೇಶಗಳನ್ನು ಸೇರಿಸಿ ಸಂರಕ್ಷಣೆಗೆ ಮುಂದಾಗಬೇಕು.

— ಡಾ.ಶರಣಬಸಪ್ಪ ಕೋಲ್ಕಾರ್ ಇತಿಹಾಸಕಾರ