ಕೇರಳಂಗೆ ಗುರುವಾರ (ಜೂ 4) ನೈಋತ್ಯ ಮಾನ್ಸೂನ್
ಬೆಂಗಳೂರು: ಕೇರಳಂಗೆ ಗುರುವಾರ (ಜೂ 4) ನೈಋತ್ಯ ಮಾನ್ಸೂನ್ (ಮುಂಗಾರು) ಪ್ರವೇಶಿಸಲಿದೆ. ಈ ವೇಳೆ ಮಾರುತಗಳು ಪ್ರಬಲವಾಗಿದ್ದರೆ ಅಂದಿನ ದಿನದಂದೇ ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸಲಿವೆ. ದುರ್ಬಲವಾಗಿದ್ದರೆ ಜೂ 5ರಂದು ಮಾರುತಗಳು ಬರಲಿವೆ ಎಂದು ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ, ವಿಜಯವಾಣಿಗೆ ತಿಳಿಸಿದ್ದಾರೆ.
ಮುಂದಿನ 24 ಗಂಟೆಯಲ್ಲಿ ಕೇರಳಂಗೆ ಮುಂಗಾರು ಪ್ರವೇಶಿಸಲು ಅರಬ್ಬಿ ಸಮುದ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅನುಕೂಲಕರದ ವಾತಾವರಣವಿದೆ. ಮುಂದಿನ 7 ದಿನಗಳಲ್ಲಿ ಕೇರಳಂನ ಕೆಲ ವ್ಯಾಪ್ತಿಯ ಪ್ರದೇಶಗಳಲ್ಲಿ 7 ರಿಂದ 20 ಸೆಂಮೀವರೆಗೆ ಮಳೆಯಾಗಲಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿಯೂ ಗುಡುಗು ಸಹಿತ ವರ್ಷಧಾರೆಯಾಗಲಿದೆ ಎಂದು ಹೇಳಿದರು.
ಮೈಸೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗೆ ಮಳೆಯಾಯಿತು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಮುಂದಿನ 5 ದಿನ ಬಿರುಸಾಗಿ ಮಳೆಯಾಗಲಿದೆ. ಈ ಸಂದರ್ಭದಲ್ಲಿ ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ ಜಾಸ್ತಿ ಇರಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಪೂರ್ವ ಮುಂಗಾರಿನ ಅವಧಿಯಲ್ಲಿ ಉತ್ತಮ ಮಳೆ ಸುರಿದಿರುವುದು ಹಾಗೂ ಪ್ರಸ್ತುತ ಮುಂಗಾರು ಆಗಮನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮಳೆಯಿಂದ ಭೂಮಿ ಹದಗೊಳ್ಳುತ್ತಲೇ ರೈತರು ಹೊಲ ಗದ್ದೆಗಳಲ್ಲಿ ಕಸ, ಕಡ್ಡಿಯನ್ನು ತೆಗೆದು, ಭೂಮಿಯನ್ನು ಬಿತ್ತನೆಗೆ ಸಿದ್ಧಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಯಾವ ಜಮೀನಿಗೆ ಏನು ಬಿತ್ತನೆ ಮಾಡಬೇಕ ಎಂಬ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಹಾಸನ ಸೇರಿ ಹಳೆಯ ಮೈಸೂರು ಭಾಗದಲ್ಲಿ ಮೆಕ್ಕಜೋಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ಹಾಗಾಗಿ, ಕೃಷಿ ಚಟುವಟಿಕೆಗಳು ನಡೆಸುತ್ತಿರುವ ದೃಶ್ಯ ಅಲ್ಲೆಲ್ಲಿ ಕಂಡುಬಂದಿದೆ. ಸತತವಾಗಿ ಮಳೆಯಿಂದ ಭೂಮಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಜಾನುವಾರಗಳ ಮೇವಿಗೆ ಸ್ವಲ್ಪ ಮಟ್ಟಿಗೆ ತಾಪತ್ರಯ ಕಡಿಮೆಯಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗುತ್ತಿದ್ದು, ಬೀಜ ಖರೀದಿಸಲು ರೈತರು ಮುಂದಾಗಿದ್ದಾರೆ.