ನೈಋತ್ಯ ಮಾನ್ಸೂನ್ ಮಾರುತಗಳು ಸೃಷ್ಟಿಯಾಗಲು ಪರಿಸ್ಥಿತಿ ಅನುಕೂಲಕರ 
ರಾಜ್ಯ

ಮಾಸಾಂತ್ಯಕ್ಕೆ ಕರಾವಳಿ ಭಾಗಕ್ಕೆ ಮಾನ್ಸೂನ್: ರಾಜ್ಯದಲ್ಲಿ 4 ದಿನ ಮಳೆ-Mansoon

ಬೆಂಗಳೂರು: ಬಂಗಾಳಕೊಲ್ಲಿಯ ದಕ್ಷಿಣ ಭಾಗ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ಸೃಷ್ಟಿಯಾಗಲು ಪರಿಸ್ಥಿತಿ ಅನುಕೂಲಕರವಾಗಿದೆ.
ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಮೇ 26ರಂದು ಮುಂಗಾರು ಪ್ರವೇಶಿಸಲಿದೆ. ಬಳಿಕ, ಮಾರುತಗಳು ಪ್ರಬಲವಾಗಿದ್ದರೆ ಅದೇ ದಿನದಿಂದು ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸಲಿವೆ. ಒಂದು ವೇಳೆ ಮಾರುತಗಳು ದುರ್ಬಲವಾದರೆ ಒಂದರೆಡು ದಿನ ವಿಳಂಬವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಬಿರುಸಾಗಿ ಮಳೆ ಸುರಿಯುವ ಸಂಭವ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನದಲ್ಲಿ ಮೇ 16ರಿಂದ ಮೇ 19ವರೆಗೆ ಜೋರಾಗಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಇಲಾಖೆ, ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರದಲ್ಲಿ ಮುಂದಿನ 4 ದಿನ ವರ್ಷಧಾರೆಯಾಗಲಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ,ಯಾದಗಿರಿಯಲ್ಲಿ ಮೇ 16ರಂದು ಬಿರುಗಾಳಿ ಸಹಿತ ಮಳೆಯಾಗಲಿದೆ. ಈ ಸಂದರ್ಭದಲ್ಲಿ ಕೆಲ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ 30-40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ರೈತರು, ಕುರಿಗಾಹಿಗಳು ಎಚ್ಚರಿಕೆವಹಿಸುವಂತೆ ಇಲಾಖೆ ಸಲಹೆ ಕೊಟ್ಟಿದೆ.