ಗುಡ್ಡ ಕುಸಿತ  
ರಾಜ್ಯ

ಮುಂಗಾರು ಚುರುಕು ಕರಾವಳಿಯಲ್ಲಿ ಮಳೆ: ಮುಂದಿನ ಮೂರ್ನಾಲ್ಕು ದಿನ ಮುಂದುವರಿಕೆ ಸಾಧ್ಯತೆ

ಬೆಂಗಳೂರು: ಓಡಿಶಾದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜ್ಯದಲ್ಲಿ ಮುಂದಿನ 3-4 ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ, ಮಲೆನಾಡು ಭಾಗದಲ್ಲಿ ಮಾನ್ಸೂನ್ ಮತ್ತೆ ಸಕ್ರಿಯವಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.18ರಿಂದ ಜು.20ವರೆಗೆ ಮತ್ತು ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ ಎರಡು ದಿನ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ.

ದ.ಕರ್ನಾಟಕದಲ್ಲಿ ಸಾಧಾರಣ

ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ತುಸು ಜೋರು ಮಳೆಯಾದರೆ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಸುರಿಯಲಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿಯಲ್ಲಿ ಮಳೆಯಾಗಲಿದೆ. ಬೆಳಗಾವಿ ಮಹಾನಗರ, ಗ್ರಾಮೀಣ,ಖಾನಾಪುರ, ಕಿತ್ತೂರು, ಹುಕ್ಕೇರಿ ಸೇರಿ ವಿವಿಧ ಭಾಗಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಸಾಧಾರಣ ಮಳೆಯಾಯಿತು.

ಕಾರವಾರ

ಗುರುವಾರ ರಾತ್ರಿಯಿಡೀ ನಿರಂತರವಾಗಿ ಸುರಿದ ಭಾರಿ ಮಳೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯನ್ನು ತಲ್ಲಣಗೊಳಿಸಿದೆ. ಕರಾವಳಿಯ 50ಕ್ಕೂ ಹೆಚ್ಚು ಸ್ಥಳಗಳಲ್ಲಿ 24 ಗಂಟೆಗಳಲ್ಲಿ 130 ಮಿಮೀಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಹಲವೆಡೆ ಗುಡ್ಡ ಕುಸಿತವಾಗಿದೆ. ರಸ್ತೆಗಳಲ್ಲಿ ನೀರು ತುಂಬಿದೆ. ಮನೆಗಳಿಗೂ ನೀರು ನುಗ್ಗಿದೆ. ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯ ಒಳಗೆ ನೀರು ನುಗ್ಗಿದ್ದು, ಶುಕ್ರವಾರ ಬೆಳಗ್ಗೆ ಕೆಲವು ಸಮಯ ಪೂಜೆ ನಿಲ್ಲಿಸಲಾಯಿತು. ಗೋಕರ್ಣದ ಎಲ್ಲ ಬೀದಿಗಳು ಜಲಾವೃತವಾಗಿದ್ದವು. ಗೋಕರ್ಣ-ತದಡಿ ರಸ್ತೆಯ ಮೂಡಂಗಿ ಸಮೀಪ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತವಾಯಿತು. 

ಕುಮಟಾ ಶಹರದ ನೆಲ್ಲಿಕೇರಿ ಕೆಪಿಎಸ್ ಶಾಲೆಯ ಹಿಂದೆ ಬೃಹತ್ ಬಂಡೆ ಕುಸಿದು ಬಿದ್ದಿದೆ. ಬಂಡೆಯು ಶಾಲೆಯ ವರಾಂಡಕ್ಕೆ ನುಗ್ಗಿ ನಿಂತಿದೆ. ಅದೃಷ್ಟವಶಾತ್ ಶಾಲೆ ಕಟ್ಟಡಕ್ಕೆ, ವಿದ್ಯಾರ್ಥಿಗಳಿಗೆ ಯಾವುದೇ ಹಾನಿಯಾಗಿಲ್ಲ. ಅಂಕೋಲಾ ತಾಲೂಕು ಬಳಲೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ, ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766 ಇ ನಲ್ಲಿ ಗುಡ್ಡ ಕುಸಿತ ಉಂಟಾಗಿ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅಂಕೋಲಾದಲ್ಲಿ ನಾಲ್ಕು ದೋಣಿಗಳು ಸಮುದ್ರಕ್ಕೆ ಆಹುತಿಯಾಗಿ ಲಕ್ಷಾಂತರ ರೂ. ಹಾನಿಯಾಗಿದೆ. ಅಂಕೋಲಾ ಶಹರ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಎಂದರೆ 270 ಮಿಮೀ ಮಳೆಯಾಗಿದೆ. ತಾಲೂಕಿನ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು. ತಾಲೂಕಿನ ವಂದಿಗೆ- 270.5, ಅಲಗೇರಿ- 266.5, ಬಾವಿಕೇರಿ- 259, ಬೆಳಸೆ-244, ಬೆಳಂಬಾರ-238, ಬೊಬ್ರುವಾಡ-235, ಹಟ್ಟಿಕೇರಿ-225, ಶೇಟಗೇರಿ-216, ನಾಡುಮಾಸ್ಕೇರಿ-204, ಕುಮಟಾ ತಾ. ಹನೇಹಳ್ಳಿ-231, ಕಾರವಾರ ತಾ. ಕದ್ರಾದಲ್ಲಿ 239 ಮಿಮೀ ಮಳೆಯಾಗಿದೆ.

ದ.ಕ., ಉಡುಪಿಯಲ್ಲಿ ಮಳೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ತೀವ್ರಗೊಂಡಿದೆ. ಗುರುವಾರ ರಾತ್ರಿ ಆರಂಭವಾದ ಮಳೆ ನಿರಂತರವಾಗಿ ಸುರಿದಿದೆ. ಗಾಳಿ ರಭಸಕ್ಕೆ ಗ್ರಾಮೀಣ ಭಾಗಗಳಲ್ಲಿ ಹಲವು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಅಡಿಕೆ ಮತ್ತು ಬಾಳೆ ಗಿಡಗಳಿಗೆ ಹಾನಿಯಾಗಿದೆ. ನೇತ್ರಾವತಿ, ಕುಮಾರಧಾರಾ ಮತ್ತು ಗುರುಪುರ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ 70.1 ಮಿ.ಮೀ., ಉಡುಪಿ ಜಿಲ್ಲೆಯಲ್ಲಿ 88.9 ಮಿ.ಮೀ. ಸರಾಸರಿ ಮಳೆಯಾಗಿದೆ.