ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಚೌಡೇಶ್ವರಿ ದೇವಸ್ಥಾನ.
ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಮೀಪದ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ 10.30ರ ಸುಮಾರಿನಲ್ಲಿ ಹುಂಡಿ ಹಣ ಕಳವು ಮಾಡಲಾಗಿದ್ದು, ಪೂಜಾರಿ ಸೋಮವಾರ ಬೆಳಗ್ಗೆ ದೇವಸ್ಥಾನ ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳವು ಮಾಡುತ್ತಿರುವ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಚೌಡೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಲಾಧಾರಿಗಳು ಪ್ರಸಾದ ಸೇವಿಸುವ ಸ್ಥಳಕ್ಕೆ ಖದೀಮ ತೆರಳಿ ಪ್ರಸಾದ ಕೇಳಿದ್ದಾನೆ. ಎರಡು ತುತ್ತು ಪ್ರಸಾದ ಸೇವಿಸಿ ಉಳಿದಿದನ್ನು ಪೇಪರ್ನಲ್ಲಿ ತುಂಬಿಕೊಂಡಿದ್ದಾನೆ. ಈ ವೇಳೆ ಮಾಲಾಧಾರಿಗಳು ಯಾವ ಊರು ಎಂದು ಆತನನ್ನು ಪ್ರಶ್ನಿಸಿದಾಗ ತೂಬಗೆರೆ ಎಂದು ಹೇಳಿ ಕಾಲ್ಕಿತ್ತಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಹಲ್ಲೆ
ಆನೇಕಲ್: ಕುಡಿದ ಮತ್ತಿನಲ್ಲಿ ಬಾರ್ನಲ್ಲಿ ಜಗಳವಾಗಿ ಗುಂಪೊಂದು ವ್ಯಕ್ತಿ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಪಟ್ಟಣ ನಿವಾಸಿ ಪ್ರಕಾಶ್(45) ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪಟ್ಟಣದ ಬಾರ್ನಲ್ಲಿ ಪ್ರಕಾಶ್ ಮದ್ಯ ಸೇವನೆ ಮಾಡುತ್ತಿದ್ದಾಗ ಪಕ್ಕದ ಟೇಬಲ್ನಲ್ಲಿದ್ದ ಮೂವರ ನಡುವೆ ಗಲಾಟೆಯಾಗಿದೆ. ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಮೂವರೂ ಪರಾರಿ ಆಗಿದ್ದು, ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಗಾಯಗಳಾಗಿವೆ, ಆನೇಕಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.